Antibody Cocktail: ಕೊರೊನಾ ವಿರುದ್ಧ ಪರಿಣಾಮಕಾರಿ ಔಷಧಿ ಆಗುತ್ತಾ ಆ್ಯಂಟಿಬಾಡಿ ಕಾಕ್​ಟೇಲ್? ಇಲ್ಲಿದೆ ವಿವರ

| Updated By: ganapathi bhat

Updated on: Jun 12, 2021 | 9:58 PM

ದೆಹಲಿಯಲ್ಲೂ ಕೊರೊನಾ ರೋಗಿಗಳಿಗೆ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್​ಟೇಲ್ ಔಷಧ ನೀಡಿ ಚಿಕಿತ್ಸೆ ನೀಡಲಾಗಿದೆ. ದೆಹಲಿಯಲ್ಲೂ ಆ್ಯಂಟಿಬಾಡಿ ಕಾಕ್​ಟೇಲ್ ಉತ್ತಮ ಫಲಿತಾಂಶ ನೀಡಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

Antibody Cocktail: ಕೊರೊನಾ ವಿರುದ್ಧ ಪರಿಣಾಮಕಾರಿ ಔಷಧಿ ಆಗುತ್ತಾ ಆ್ಯಂಟಿಬಾಡಿ ಕಾಕ್​ಟೇಲ್? ಇಲ್ಲಿದೆ ವಿವರ
ಕೊರೊನಾಗೆ ಕಾಕ್​ಟೇಲ್ ಔಷಧಿ
Follow us on

ಜಗತ್ತಿನಲ್ಲಿ ಕೊರೊನಾ ವೈರಸ್​ಗೆ ನಿರ್ದಿಷ್ಟವಾದ ಔಷಧಿ ಎನ್ನುವುದೇ ಇದುವರೆಗೂ ಸಿಕ್ಕಿಲ್ಲ. ಕೊರೊನಾ ರೋಗಿಗಳ ರೋಗ ಲಕ್ಷಣದ ಆಧಾರದ ಮೇಲೆ ಔಷಧಿ ನೀಡಲಾಗುತ್ತಿದೆ. ಆದರೆ, ಈಗ ಬಂದಿರುವ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿಯೇ ಕೊರೊನಾದ ವಿರುದ್ಧದ ನಿಜವಾದ ಔಷಧಿ ಆಗುತ್ತದೆ. ಈ ಔಷಧಿಯೇ ಕೊರೊನಾ ವೈರಸ್ ವಿರುದ್ಧದ ಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎಂದು ವೈದ್ಯ ಲೋಕ ಬಣ್ಣಿಸುತ್ತಿದೆ.

ಭಾರತ ಹಾಗೂ ವಿಶ್ವದಲ್ಲಿ ಇದುವರೆಗೂ ಕೊರೊನಾ ವೈರಸ್ ವಿರುದ್ಧ ನಿರ್ದಿಷ್ಟವಾದ ಔಷಧ ಎನ್ನುವುದೇ ಇಲ್ಲ. ಆದರೆ, ಕಳೆದ ತಿಂಗಳಿನಿಂದ ಭಾರತಕ್ಕೆ ಕೊರೊನಾ ವೈರಸ್ ವಿರುದ್ಧ ನಿರ್ದಿಷ್ಟವಾದ ಔಷಧ ಸಿಕ್ಕಿದೆ. ಅದುವೇ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್​ಟೇಲ್. ಈ ಔಷಧವನ್ನೇ ಈಗ ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧದ ಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎಂದು ವೈದ್ಯರು ಕರೆಯುತ್ತಿದ್ದಾರೆ.

ಇದಕ್ಕೆ ಕಾರಣ, ಈ ಔಷಧ ಬಳಕೆಯಿಂದ ಸಿಗುತ್ತಿರುವ ಉತ್ತಮ ಫಲಿತಾಂಶ. ಈ ಔಷಧ ಕೊರೊನಾ ರೋಗಿಗಳು ಶೇ.70 ರಷ್ಟು ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುತ್ತಿದೆ. ಕೊರೊನಾದಿಂದ ಸಾವು ಸಂಭವಿಸುವುದನ್ನು ತಪ್ಪಿಸುತ್ತಿದೆ. ಹೀಗಾಗಿ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್​ಟೇಲ್ ಔಷಧದ ಬಗ್ಗೆ ವೈದ್ಯರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಕಾಕ್​ಟೇಲ್ ಔಷಧದಿಂದ ಉತ್ತಮ ಫಲಿತಾಂಶ
ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಮೇ 25 ರಿಂದ ಜೂನ್ 3ರವರೆಗೆ 15 ಮಂದಿ ಕೊರೊನಾ ರೋಗಿಗಳಿಗೆ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿ ನೀಡಿ ಚಿಕಿತ್ಸೆ ನೀಡಲಾಗಿತ್ತು. ಎಲ್ಲರೂ ಚೆನ್ನಾಗಿದ್ದಾರೆ. ಯಾರೂ ಕೂಡ ಆಸ್ಪತ್ರೆಗೆ ದಾಖಲಾಗುವ ಅಗತ್ಯವೇ ಬಿದ್ದಿಲ್ಲ. ಇದೇ ಕೊರೊನಾ ವೈರಸ್ ವಿರುದ್ಧ ನಿಜವಾದ ಔಷಧಿ ಚಿಕಿತ್ಸೆ ಎಂದು ಮೇದಾಂತ ಆಸ್ಪತ್ರೆಯ ಡಾಕ್ಟರ್ ಸುಶೀಲಾ ಕಟಾರಿಯಾ ಹೇಳಿದ್ದಾರೆ. ಈ ಔಷಧಿಯಿಂದ ಕೊರೊನಾ ರೋಗಿಗಳ ಸಾವು ತಪ್ಪಿಸಬಹುದು. ವಿಶೇಷವಾಗಿ ವಯಸ್ಸಾದ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಸಾವುನ್ನು ಈ ಔಷಧಿ ತಡೆಯುತ್ತೆ ಎಂದು ಡಾಕ್ಟರ್ ಸುಶೀಲಾ ಕಟಾರಿಯಾ ಹೇಳಿದ್ದಾರೆ.

ಈಗ ಎಲ್ಲರೂ ಕೊರೊನಾ ಬಂದರೂ, ಸಾವು ಸಂಭವಿಸಬಾರದು ಎಂದೇ ದೇವರುನ್ನು ಪ್ರಾರ್ಥಿಸುತ್ತಿದ್ದಾರೆ. ಈಗ ಕೊರೊನಾದಿಂದ ಸಾವು ತಡೆಯುವಲ್ಲಿ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್​ಟೇಲ್ ಯಶಸ್ವಿಯಾದಂತಾಗಿದೆ. ಮೇ ತಿಂಗಳ ಪ್ರಾರಂಭದಲ್ಲಿ ಭಾರತದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿ ನೀಡಲು ಡಿಸಿಜಿಐ ಒಪ್ಪಿಗೆ ನೀಡಿತ್ತು. ಆದಾದ ಬಳಿಕ ಮೇ ತಿಂಗಳ 25ರಂದು ಹರಿಯಾಣದ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ 84 ವರ್ಷ ವಯಸ್ಸಿನ ಮೊಹಬ್ಬತ್ ಸಿಂಗ್ ಅವರಿಗೆ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿ ನೀಡಿ ಚಿಕಿತ್ಸೆ ನೀಡಲಾಗಿತ್ತು. ಮೊಹಬ್ಬತ್ ಸಿಂಗ್ ಕೊರೊನಾದಿಂದ ಗುಣಮುಖವಾಗಿದ್ದಾರೆ.

ಇದೇ ರೀತಿ ದೆಹಲಿಯಲ್ಲೂ ಕೊರೊನಾ ರೋಗಿಗಳಿಗೆ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್​ಟೇಲ್ ಔಷಧ ನೀಡಿ ಚಿಕಿತ್ಸೆ ನೀಡಲಾಗಿದೆ. ದೆಹಲಿಯಲ್ಲೂ ಆ್ಯಂಟಿಬಾಡಿ ಕಾಕ್​ಟೇಲ್ ಉತ್ತಮ ಫಲಿತಾಂಶ ನೀಡಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಬೆಂಗಳೂರಿನಲ್ಲೂ ಎಂಟು ರೋಗಿಗಳಿಗೆ ಆ್ಯಂಟಿಬಾಡಿ ಕಾಕ್​ಟೇಲ್ ನೀಡಿಕೆ
ನಮ್ಮ ಉದ್ಯಾನನಗರಿ ಬೆಂಗಳೂರಿನ ಎಂಟು ಮಂದಿ ಕೊರೊನಾ ರೋಗಿಗಳಿಗೂ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿಯ ಚಿಕಿತ್ಸೆ ನೀಡಲಾಗಿದೆ. ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಓಲ್ಡ್ ಏರ್​ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆ್ಯಂಟಿಬಾಡಿ ಕಾಕ್ ಟೈಲ್ ಚಿಕಿತ್ಸೆ ನೀಡಲಾಗಿದೆ. ಇನ್ನೂ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯಲ್ಲೂ ಈ ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿ ಲಭ್ಯವಿದೆ. ಸಕ್ರಾ ವರ್ಲ್ಡ್ ಆಸ್ಪತ್ರೆಯು ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿ ಪಡೆಯುವ ಪ್ರಯತ್ನದಲ್ಲಿದೆ.

ಏನಿದು ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿ?
ಕಸರಿವಿಮಬ್ ಮತ್ತು ಇಮಡಿವಿಮಬ್ ಎಂಬ ಎರಡು ಮಾನೋಕ್ಲೋನಲ್ ಆ್ಯಂಟಿಬಾಡಿ ಮಿಶ್ರಣ ಮಾಡಿ ಆ್ಯಂಟಿಬಾಡಿ ಚಿಕಿತ್ಸೆ ನೀಡಲಾಗುತ್ತೆ. ಎರಡು ಆ್ಯಂಟಿಬಾಡಿಗಳ ಮಿಶ್ರಣ ಮಾಡುವುದರಿಂದ ಇದನ್ನು ಆ್ಯಂಟಿಬಾಡಿ ಕಾಕ್​ಟೇಲ್ ಎಂದು ಕರೆಯಲಾಗುತ್ತಿದೆ. ಕಸರಿವಿಮಬ್ ಮತ್ತು ಇಮಡಿವಿಮಬ್ ಪ್ರತೇಕವಾಗಿ ಎರಡು ಬಾಟಲಿಗಳಲ್ಲಿರುತ್ತವೆ. ಎರಡನ್ನೂ ಮಿಶ್ರಣ ಮಾಡಿ ರೋಗಿಗಳಿಗೆ ನೀಡಲಾಗುತ್ತೆ. ಈ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿಯನ್ನು ಕಳೆದ ವರ್ಷ ಆಮೆರಿಕಾದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರಿಗೂ ಕೊರೊನಾ ಬಂದಾಗ ನೀಡಲಾಗಿತ್ತು.

ಈ ಔಷಧಿಯ ಪರಿಣಾಮದಿಂದಾಗಿಯೇ ಡೊನಾಲ್ಡ್ ಟ್ರಂಪ್ ಮೂರೇ ದಿನದಲ್ಲಿ ಕೊರೊನಾ ನೆಗೆಟಿವ್ ಆಗಿ ಆಸ್ಪತ್ರೆಯಿಂದ ಹೊರಬಂದಿದ್ದರು. ಆ್ಯಂಟಿಬಾಡಿ ಕಾಕ್​ಟೇಲ್, ಮನುಷ್ಯರ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಪ್ರತಿಕಾಯಗಳನ್ನು ಅಂದರೆ, ಆ್ಯಂಟಿಬಾಡಿಗಳನ್ನು ಸೃಷ್ಟಿಸುತ್ತೆ. ಈ ಆ್ಯಂಟಿಬಾಡಿ ಕಾಕ್​ಟೇಲ್, ಕೊರೊನಾ ವೈರಸ್ ನ ಸ್ಪೈಕ್ ಪ್ರೋಟೀನ್ ವಿರುದ್ಧ ಕೆಲಸ ಮಾಡುತ್ತೆ. ಮನುಷ್ಯನ ಜೀವಕೋಶಗಳಿಗೆ ವೈರಸ್ ಎಂಟ್ರಿಯಾಗದಂತೆ ತಡೆಯುತ್ತೆ. ಜೊತೆಗೆ ಮನುಷ್ಯನ ದೇಹದಲ್ಲಿ ವೈರಸ್ ಪುನಃ ಸೃಷ್ಟಿಯಾಗದಂತೆ ತಡೆಯುತ್ತೆ.

ಕಾಕ್​ಟೇಲ್ ಔಷಧ ಯಾರಿಗೆಲ್ಲಾ ನೀಡಬಹುದು?
ಈ ಆ್ಯಂಟಿಬಾಡಿ ಕಾಕ್​ಟೇಲನ್ನು ಕೊರೊನಾ ವೈರಸ್ ತಗುಲಿದ 2ರಿಂದ 3 ದಿನದಲ್ಲೇ ಔಷಧಿಯಾಗಿ ನೀಡಬೇಕು. ಕೋಮಾರ್ಬಿಡಿಟಿ ಇರುವ ಕೊರೊನಾ ರೋಗಿಗಳಿಗೂ ಆ್ಯಂಟಿಬಾಡಿ ಕಾಕ್​ಟೇಲ್ ನೀಡಬಹುದು. ಹೈ ರಿಸ್ಕ್ ಇರುವ ರೋಗಿಗಳಿಗೆ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿ ನೀಡಬೇಕು. 60 ವರ್ಷ ಮೇಲ್ಪಟ್ಟವರು, ಡಯಾಬಿಟಿಸ್, ಹೈಪರ್ ಟೆನ್ಷನ್, ಕಿಡ್ನಿ ಸಮಸ್ಯೆ ಇರುವವರಿಗೂ ಈ ಔಷಧಿ ನೀಡಬಹುದು. ಅಸ್ತಮಾ ಸೇರಿದಂತೆ ಶ್ವಾಸಕೋಸ ಸಮಸ್ಯೆ, ಒಬೆಸಿಟಿ, ಲಿವರ್ ಸಮಸ್ಯೆ ಇರುವವರಿಗೆ ಆ್ಯಂಟಿಬಾಡಿ ಕಾಕ್​ಟೇಲ್ ಔಷಧಿ ನೀಡಬೇಕು ಎಂದು ಸಿಪ್ಲಾ ಕಂಪನಿಯು ಹೇಳಿದೆ.

ಇಂಥವರಿಗೆ ಆ್ಯಂಟಿಬಾಡಿ ಕಾಕ್​ಟೇಲ್ ನೀಡಿದಾಗ, ಪರಿಸ್ಥಿತಿ ವಿಷಮ ಸ್ಥಿತಿಗೆ ಹೋಗುವುದನ್ನು ತಡೆಯುತ್ತೆ. ಈ ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿಯನ್ನ ರೋಗಿಗಳಿಗೆ ನೀಡುವ ಸಮಯ ಕೂಡ ಮುಖ್ಯ ಎಂದು ದೆಹಲಿಯ ಅಪೋಲೋ ಆಸ್ಪತ್ರೆಯ ವೈದ್ಯ ರಾಜೇಶ್ ಚಾವ್ಲಾ ಹೇಳ್ತಾರೆ. ಆ್ಯಂಟಿಬಾಡಿ ಕಾಕ್​ಟೇಲ್ ಅನ್ನು ಕೊರೊನಾ ಬಂದ 72 ಗಂಟೆ ಬಳಿಕ ನೀಡಿದರೆ, ಆ್ಯಂಟಿಬಾಡಿ ಕಾಕ್​ಟೇಲ್ ಕೊರೊನಾ ವೈರಸ್ ಮೇಲೆ ದಾಳಿ ನಡೆಸಲು ಸಾಧ್ಯವಾಗಲ್ಲ. ಮೊದಲ ಏಳು ದಿನಗಳಲ್ಲಿ ವೈರಾಣುವಿನ ಪ್ರಮಾಣ ಕಡಿಮೆ ಇರುತ್ತೆ. ಹೀಗಾಗಿ ಆ ವೇಳೆಯಲ್ಲೇ ಆ್ಯಂಟಿಬಾಡಿ ಕಾಕ್​ಟೇಲ್ ಚಿಕಿತ್ಸೆ ನೀಡುವುದು ಉತ್ತಮ. ಜೊತೆಗೆ ಹೆಚ್ಚಿನ ಪರಿಣಾಮಕಾರಿ. ಈಗ ಬಹಳಷ್ಟು ರೋಗಿಗಳು ಈ ಔಷಧಿ, ಚಿಕಿತ್ಸೆ ಬಗ್ಗೆ ಕೇಳುತ್ತಿದ್ದಾರೆ ಎಂದು ರಾಜೇಶ್ ಚಾವ್ಲಾ ಹೇಳ್ತಾರೆ.

ಆ್ಯಂಟಿಬಾಡಿ ಕಾಕ್​ಟೇಲನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು. ಆದರೆ, 40ಕೆಜಿಗಿಂತ ಹೆಚ್ಚಿನ ತೂಕ ಇರಬೇಕು. ಸ್ಪಿಟ್ಜರ್ ಲ್ಯಾಂಡ್ ದೇಶದ ರೋಚೆಸ್ ಕಂಪನಿಯ ಆ್ಯಂಟಿಬಾಡಿ ಕಾಕ್​ಟೇಲನ್ನು ಸದ್ಯ ಸಿಪ್ಲಾ ಕಂಪನಿಯು ಭಾರತಕ್ಕೆ ಪೂರೈಸುತ್ತಿದೆ. ಒಬ್ಬ ರೋಗಿಯ ಚಿಕಿತ್ಸೆಗೆ ಆ್ಯಂಟಿಬಾಡಿ ಕಾಕ್ ಟೈಲ್ ಔಷಧಿಗೆ 59,750 ರೂಪಾಯಿ ವೆಚ್ಚವಾಗಲಿದೆ. ಇದರ ಬೆಲೆ ದುಬಾರಿ. ಎಲಿ ಲಿಲ್ಲಿ ಕಂಪನಿಯ ಆ್ಯಂಟಿಬಾಡಿ ಕಾಕ್​ಟೇಲ್ ಬಳಕೆಗೂ ಡಿಸಿಜಿಐ ಒಪ್ಪಿಗೆ ನೀಡಿದೆ. ಗುಜರಾತ್ ಅಹಮದಾಬಾದ್ ನ ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಕಂಪನಿಯು ಕೂಡ ಈಗ ಆ್ಯಂಟಿಬಾಡಿ ಕಾಕ್ ಟೈಲ್ ಸಂಶೋಧನೆಯ ವೈದ್ಯಕೀಯ ಪ್ರಯೋಗಕ್ಕೆ ಡಿಸಿಜಿಐ ನಿಂದ ಜೂನ್ 4 ರಂದು ಅನುಮತಿ ಪಡೆದುಕೊಂಡಿದೆ.

ಇದನ್ನೂ ಓದಿ: GST Council: ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ; ಕೊರೊನಾ ಲಸಿಕೆಯ ಮೇಲೆ ಶೇಕಡಾ 5 ಜಿಎಸ್​ಟಿ ಮುಂದುವರಿಕೆ

Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ

Published On - 9:41 pm, Sat, 12 June 21