Antibody Cocktail: ಕೊರೊನಾ ಲಕ್ಷಣಗಳು ಒಂದೇ ದಿನದಲ್ಲಿ ಮಾಯ; ಆ್ಯಂಟಿಬಾಡಿ ಕಾಕ್ಟೇಲ್ ಔಷಧದ ಬಗ್ಗೆ ವೈದ್ಯರು ಏನು ಹೇಳುತ್ತಾರೆ?
ಆ್ಯಂಟಿಬಾಡಿ ಥೆರಪಿಗೆ ಭಾರತದಲ್ಲಿ ಸುಮಾರು 70,000 ರೂಪಾಯಿ ಆಗಬಹುದು ಎಂದು ತಿಳಿದುಬಂದಿದೆ. ಔಷಧಕ್ಕೆ ಹೆಚ್ಚುತ್ತಿರುವ ಬೇಡಿಕೆ, ಪರಿಣಾಮಕಾರಿತ್ವದ ಮಾತುಗಳ ಬಳಿಕ, ಇದನ್ನು ಅತಿಯಾಗಿ ಬಳಸುವುದು ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಕೆಯನ್ನೂ ನೀಡಿದ್ದಾರೆ.
ಹೈದರಾಬಾದ್: ಇಲ್ಲಿನ ಏಷಿಯನ್ ಇನ್ಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಸುಮಾರು 40 ಕೊರೊನಾ ಸೋಂಕಿತರು ಆ್ಯಂಟಿಬಾಡಿ ಕಾಕ್ಟೇಲ್ನ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಆ್ಯಂಟಿಬಾಡಿ ಕಾಕ್ಟೇಲ್ ಪಡೆದ 24 ಗಂಟೆಗಳಲ್ಲೇ ಸೋಂಕಿತರು ಸಾಮಾನ್ಯ ಕೊರೊನಾ ಲಕ್ಷಣಗಳಾದ ಜ್ವರ, ಮೈಕೈ ನೋವಿನಿಂದ ಹೊರಬಂದಿದ್ದಾರೆ ಎಂಬ ವಿಶೇಷ ಮಾಹಿತಿ ಲಭ್ಯವಾಗಿದೆ. ಕೊರೊನಾ ಸೋಂಕಿತರಿಗೆ ಕಾಕ್ಟೇಲ್ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ಕಂಡುಬಂದಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ನಾಗೇಶ್ವರ್ ರೆಡ್ಡಿ ಹೇಳಿದ್ದಾರೆ.
ಇದುವರೆಗೆ ಕೊರೊನಾ ಸೋಂಕಿಗೆ ಪ್ರತ್ಯೇಕ ಔಷಧಿ ಎಂಬುದು ಇರಲಿಲ್ಲ. ರೋಗ ಲಕ್ಷಣಗಳನ್ನು ಗಮನಿಸಿ ಅದರ ಅನುಸಾರ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಈಗ ಈ ಔಷಧವು ಪರಿಣಾಮಕಾರಿಯಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಹೈದರಾಬಾದ್ನ ಏಷಿಯನ್ ಇನ್ಸ್ಟಿಟ್ಯೂಟ್ ಈ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಿದೆ. ಡೆಲ್ಟಾ ರೂಪಾಂತರಿ ವೈರಾಣು ವಿರುದ್ಧ ಔಷಧದ ಪರಿಣಾಮಕಾರಿತ್ವ ಸಂಶೋಧನೆ ಮಾಡುತ್ತಿದೆ.
ಯುಎಸ್ನ ಅಧ್ಯಯನಗಳು ಕಾಕ್ಟೇಲ್ ಔಷಧ ಬ್ರಿಟನ್ ರೂಪಾಂತರಿ ವೈರಾಣು ವಿರುದ್ಧ ಪರಿಣಾಮಕಾರಿ ಎಂದು ಕಂಡುಕೊಂಡಿದ್ದರು. ಜೊತೆಗೆ, ಬ್ರೆಜಿಲಿಯನ್ ಹಾಗೂ ದಕ್ಷಿಣ ಆಫ್ರಿಕಾದ ರೂಪಾಂತರಿ ಕೊರೊನಾ ವಿರುದ್ಧವೂ ಈ ಔಷಧ ಪರಿಣಾಮಕಾರಿ ಎಂದು ಹೇಳಲಾಗಿತ್ತು. ಈಗ ಡೆಲ್ಟಾ ಮಾದರಿಯ ವೈರಾಣುವಿನ ವಿರುದ್ಧದ ಪರಿಣಾಮಕಾರಿತ್ವ ತಿಳಿಯುತ್ತಿದ್ದು, 40 ಸೋಂಕಿತರ ಮೇಲೆ ನಡೆಸಿದ ಪ್ರಯೋಗದಲ್ಲಿ ಬಹುತೇಕ ಶೇಕಡಾ 100ರಷ್ಟು ಪರಿಣಾಮ ಕಂಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
ಮೊನೊಕ್ಲೊನಲ್ ಆ್ಯಂಟಿಬಾಡಿ ಥೆರಪಿಯನ್ನು ಕಳೆದ ವರ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ನೀಡಲಾಗಿತ್ತು. ಸಾಮಾನ್ಯ ಕೊರೊನಾ ಲಕ್ಷಣ ಹೊಂದಿದ್ದವರಲ್ಲಿ ಈ ಔಷಧ ಪರಿಣಾಮಕಾರಿ ಎಂದು ಹೇಳಲಾಗಿತ್ತು. ಸಿಂಗಲ್ ಡೋಸ್ ಆ್ಯಂಟಿಬಾಡಿಯನ್ನು ಸೋಂಕು ತಗುಲಿದ ಮೂರರಿಂದ ಏಳು ದಿನಗಳ ಅವಧಿಯಲ್ಲಿ ರೋಗಿಗಳಿಗೆ ನೀಡಲಾಗುತ್ತದೆ.
ಈ ಔಷಧಕ್ಕೆ, ಆ್ಯಂಟಿಬಾಡಿ ಥೆರಪಿಗೆ ಭಾರತದಲ್ಲಿ ಸುಮಾರು 70,000 ರೂಪಾಯಿ ಆಗಬಹುದು ಎಂದು ತಿಳಿದುಬಂದಿದೆ. ಔಷಧಕ್ಕೆ ಹೆಚ್ಚುತ್ತಿರುವ ಬೇಡಿಕೆ, ಪರಿಣಾಮಕಾರಿತ್ವದ ಮಾತುಗಳ ಬಳಿಕ, ಇದನ್ನು ಅತಿಯಾಗಿ ಬಳಸುವುದು ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: Antibody Cocktail: ಕೊರೊನಾ ವಿರುದ್ಧ ಪರಿಣಾಮಕಾರಿ ಔಷಧಿ ಆಗುತ್ತಾ ಆ್ಯಂಟಿಬಾಡಿ ಕಾಕ್ಟೇಲ್? ಇಲ್ಲಿದೆ ವಿವರ