ರಕ್ಷಣಾ ವಲಯದಲ್ಲಿ ನೂತನ ಆವಿಷ್ಕಾರಕ್ಕೆ 499 ಕೋಟಿ ಮಂಜೂರು ಮಾಡಿದ ರಾಜನಾಥ್ ಸಿಂಗ್
‘ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಉದ್ದೇಶದಿಂದ 300 ನವೋದ್ಯಮಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ವೈಯಕ್ತಿಕ ನೆಲೆಯಲ್ಲಿ ಆವಿಷ್ಕಾರ ಮಾಡುತ್ತಿರುವವರಿಗೆ ನೆರವಾಗಲು ಈ ನಿಧಿಯನ್ನು ಬಳಸಲಾಗುವುದು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದರು.
ದೆಹಲಿ: ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ವಲಯದಲ್ಲಿ ನೂತನ ಆವಿಷ್ಕಾರಗಳಿಗಾಗಿ ₹ 499 ಕೋಟಿ ಅನುದಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ‘ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಉದ್ದೇಶದಿಂದ 300 ನವೋದ್ಯಮಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ವೈಯಕ್ತಿಕ ನೆಲೆಯಲ್ಲಿ ಆವಿಷ್ಕಾರ ಮಾಡುತ್ತಿರುವವರಿಗೆ ನೆರವಾಗಲು ಈ ನಿಧಿಯನ್ನು ಬಳಸಲಾಗುವುದು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದರು.
ಮಿಲಿಟರಿ ಸಾಧನಗಳಿಗೆ ವಿದೇಶದ ಅವಲಂಬನೆ ತಗ್ಗಿಸಬೇಕು ಎಂಬ ಸರ್ಕಾರದ ಆಶಯಕ್ಕೆ ಪೂರಕವಾಗಿ ಈ ನಿಧಿಯನ್ನು ಬಳಸಲಾಗುವುದು. ಭಾರತವನ್ನು ಮುಂದಿನ ದಿನಗಳಲ್ಲಿ ರಕ್ಷಣಾ ಉತ್ಪನ್ನಗಳ ಉತ್ಪಾದನೆಯ ಕೇಂದ್ರವಾಗಿಸುವ ಆಶಯವನ್ನೂ ಕೇಂದ್ರ ಸರ್ಕಾರ ಹೊಂದಿದೆ. ರಕ್ಷಣಾ ಉದ್ಯಮದಲ್ಲಿ ಉತ್ಕೃಷ್ಟ ಸಾಧನೆ ಖಾತ್ರಿಪಡಿಸುವ ಉದ್ದೇಶದಿಂದ ಮುಂದಿನ ಐದು ವರ್ಷಗಳಲ್ಲಿ ಬಳಕೆಗೆ ಅವಕಾಶ ನೀಡಿ ₹ 498.8 ಕೋಟಿ ಮೊತ್ತವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು, ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದಲ್ಲಿ ದೇಶೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದು ಈ ನಿಧಿ ಘೋಷಣೆಯ ಮುಖ್ಯ ಆಶಯವಾಗಿದೆ.
ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಆವಿಷ್ಕಾರಕ್ಕೆ ಪೂರಕ ವಾತಾವರಣ ರೂಪಿಸುವುದು, ಈ ನಿಧಿಯ ಉದ್ದೇಶ. ಹೊಸ ತಲೆಮಾರಿನ ಯುವಜನರು ಭಾರತದ ರಕ್ಷಣಾ ಉತ್ಪನ್ನಗಳ ಉತ್ಪಾದನೆಯತ್ತ ಆಕರ್ಷಿತವಾಗುವಂತೆ ಮಾಡುವುದು, ಅದಕ್ಕೆ ಪೂರಕವಾದ ಮಾರ್ಗಗಳನ್ನು ರೂಪಿಸಲು ಈ ನಿಧಿ ನೆರವಾಗಲಿದೆ. ಕಳೆದ ಕೆಲ ವರ್ಷಗಳಿಂದ ಭಾರತವನ್ನು ರಕ್ಷಣಾ ಉತ್ಪಾದನೆಯಲ್ಲಿ ಮುಂಚೂಣಿ ದೇಶವಾಗಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಭಾರತವು 2024ರ ಹೊತ್ತಿಗೆ 101 ಬಗೆಯ ಆಯುಧಗಳು ಮತ್ತು ಮಿಲಿಟರಿ ಉತ್ಪನ್ನಗಳ ಆಮದು ನಿಲ್ಲಿಸಲಿದೆ ಎಂದು ಹೇಳಿದ್ದರು. ಈ ಪಟ್ಟಿಯಲ್ಲಿ ಸರಕು ಸಾಗಣೆ ವಿಮಾನಗಳು, ಲಘು ಯುದ್ಧಹೆಲಿಕಾಪ್ಟರ್ಗಳು, ಸಾಂಪ್ರದಾಯಿಕ ಸಬ್ಮರೀನ್ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಸೋನಾರ್ ವ್ಯವಸ್ಥೆ ಸೇರಿತ್ತು.
ಮಿಲಿಟರಿ ಉದ್ದೇಶಕ್ಕಾಗಿ ಬಳಸುವ 108 ಉತ್ಪನ್ನಗಳ ಆಮದಿಗೆ ನಿರ್ಬಂಧ ಹೇರುವುದಾಗಿ ರಕ್ಷಣಾ ಸಚಿವಾಲಯ 2ನೇ ಪಟ್ಟಿ ಪ್ರಕಟಿಸಿತ್ತು. ಇದರಲ್ಲಿ ಅತ್ಯಾಧುನಿಕ ಯುದ್ಧನೌಕೆಗಳು (ಕರ್ವೆಟ್ಸ್), ಯುದ್ಧವಿಮಾನಗಳು, ಟ್ಯಾಂಕ್ಗಳ ಎಂಜಿನ್ಗಳು ಮತ್ತು ರಾಡಾರ್ಗಳು ಸೇರಿವೆ. ಕಳೆದ ಮೇ ತಿಂಗಳಲ್ಲಿ ಭಾರತ ಸರ್ಕಾರವು ರಕ್ಷಣಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಪ್ರಮಾಣವನ್ನು ಶೇ 49ರಿಂದ ಶೇ 74ಕ್ಕೆ ಏರಿಸಿತ್ತು. ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ವಿಶ್ವದ ಪ್ರಮುಖ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಭಾರತವು ಈಗ ದೇಶೀಯ ಮಿಲಿಟರಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ರಕ್ಷಣಾ ಉತ್ಪಾದನೆಗಳ ಆಮದು ಕಡಿಮೆ ಮಾಡಿಕೊಳ್ಳಲು ಉದ್ದೇಶಿಸಿದೆ.
ಮುಂದಿನ ದಿನಗಳಲ್ಲಿ ರಕ್ಷಣಾ ವಸ್ತುಗಳ ಉತ್ಪನ್ನಗಳ ವಹಿವಾಟು ಗಾತ್ರವು 25 ಶತಕೋಟಿ ಡಾಲರ್ (₹ 1.75 ಲಕ್ಷ ಕೋಟಿ) ಮುಟ್ಟಬೇಕು ಎಂದು ಇಲಾಖೆ ಆಶಯ ಇಟ್ಟುಕೊಂಡಿದೆ. ಇದರಲ್ಲಿ ಸುಮಾರು 5 ಶತಕೋಟಿ ಡಾಲರ್ (₹ 35,000 ಕೋಟಿ) ಮೊತ್ತದ ರಫ್ತು ವಹಿವಾಟು ನಡೆಯಬೇಕು ಎಂಬ ಗುರಿಯಿಟ್ಟುಕೊಂಡಿದೆ.
(Defence Minister Rajnath Singh approves budgetary support of Rs 499 crore for innovations in defence sector)
ಇದನ್ನೂ ಓದಿ: 22 ವರ್ಷಗಳ ಹಿಂದೆ ಇದೇ ದಿನ ಭಾರತೀಯ ಸೇನೆ ಕಾರ್ಗಿಲ್‌ನ ಟೋಲೋಲಿಂಗ್ ಹಿಲ್ಸ್ ವಶಪಡಿಸಿಕೊಂಡಿತ್ತು
ಇದನ್ನೂ ಓದಿ: ಸೇನೆಯನ್ನು ಪ್ರಬಲಗೊಳಿಸಲು ಹೊಸ ಯುದ್ಧ ಘಟಕಗಳನ್ನು ಸಜ್ಜುಗೊಳಿಸಲಿದೆ ಭಾರತೀಯ ಸೇನೆ