12 ರಾಜ್ಯ ಸಭಾ ಸಂಸದರು ಕ್ಷಮೆ ಯಾವುದಕ್ಕೆ ಕೇಳಬೇಕು? ಅದು ಸಾಧ್ಯವೇ ಇಲ್ಲ: ರಾಹುಲ್ ಗಾಂಧಿ
ಮುಂಗಾರು ಅಧಿವೇಶನದಲ್ಲಿ ಅನುಚಿತವಾಗಿ ವರ್ತಿಸಿದರು ಎಂಬ ಕಾರಣಕ್ಕೆ ಅಮಾನತು ಮಾಡಲಾದ 12 ಸಂಸದರ ಅಮಾನತು ಅವಧಿಯನ್ನು ಈಗಲೂ ಮುಂದುವರಿಸಲಾಗಿದೆ. ಆದರೆ ಇದರ ವಿರುದ್ಧ ಇಂದು ಪ್ರತಿಪಕ್ಷಗಳು ಒಗ್ಗಟ್ಟಾಗಿ ಧ್ವನಿ ಎತ್ತಿವೆ.
ಸಂಸತ್ನ ಮುಂಗಾರು ಅಧಿವೇಶನದ (Parliament’s monsoon session) ಕೊನೆಯ ದಿನವಾದ ಆಗಸ್ಟ್ 11ರಂದು ಅಶಿಸ್ತಿನ ವರ್ತನೆಗಾಗಿ 12 ಪ್ರತಿಪಕ್ಷ ಸಂಸದರನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಆದರೆ ಸಂಸದರು ಕ್ಷಮೆಯಾಚಿಸಿದರೆ ಅಮಾನತು ಹಿಂತೆಗೆದುಕೊಳ್ಳುವ ಬಗ್ಗೆ ಪರಿಗಣಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi)ಹೇಳಿಕೆ ನೀಡಿದ್ದರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು 12 ರಾಜ್ಯಸಭಾ ಸಂಸದರು ಯಾವ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಕ್ಷಮೆ ಯಾವುದಕ್ಕೆ ಕೇಳಬೇಕು? ಸಂಸತ್ತಿನಲ್ಲಿ ಜನಸಾಮಾನ್ಯರ ಸಮಸ್ಯೆಯನ್ನು ಎತ್ತಿ ಹೇಳಿದ್ದಕ್ಕೆ ಕ್ಷಮೆ ಕೇಳುವುದಾ? ಅದು ಎಂದಿಗೂ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಆರ್ಜೆಡಿ ಸಂಸದ ಮನೋಜ್ ಝಾ ಕೂಡ ಕ್ಷಮೆ ಕೇಳುವುದು ಯಾತಕ್ಕೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಕ್ಷಮೆ ಕೇಳುವಂಥ ತಪ್ಪು ಎಲ್ಲಿ ನಡೆದಿದೆ? ಹೀಗೆ ಕ್ಷಮೆ ಕೇಳಬೇಕು ಎಂದು ಹೇಳುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ, ಕಾನೂನು ಬಾಹಿರ ಮತ್ತು ಅಸಾಂವಿಧಾನಿಕವಾಗಿದೆ ಎಂದು ಹೇಳಿದ್ದಾರೆ. ನಾವು ಸರ್ಕಾರದೊಂದಿಗೆ ಮಾತನಾಡಲು ಪ್ರತಿಪಕ್ಷದ ನಾಯಕನಿಗೆ ಮನವಿ ಮಾಡಿದ್ದೆವು. ಅದಕ್ಕೆ ಸಮಯ ಕೊಡದೆ ಹೋದಾಗ ಇಡೀ ಸೆಷನ್ ಬಹಿಷ್ಕರಿಸಲು ನಿರ್ಧಾರ ಮಾಡಬೇಕಾಯಿತು ಎಂದು ಹೇಳಿದ್ದಾರೆ.
किस बात की माफ़ी? संसद में जनता की बात उठाने की?
बिलकुल नहीं!
— Rahul Gandhi (@RahulGandhi) November 30, 2021
ಮುಂಗಾರು ಅಧಿವೇಶನದಲ್ಲಿ ಅನುಚಿತವಾಗಿ ವರ್ತಿಸಿದರು ಎಂಬ ಕಾರಣಕ್ಕೆ ಅಮಾನತು ಮಾಡಲಾದ 12 ಸಂಸದರ ಅಮಾನತು ಅವಧಿಯನ್ನು ಈಗಲೂ ಮುಂದುವರಿಸಲಾಗಿದೆ. ಆದರೆ ಇದರ ವಿರುದ್ಧ ಇಂದು ಪ್ರತಿಪಕ್ಷಗಳು ಒಗ್ಗಟ್ಟಾಗಿ ಧ್ವನಿ ಎತ್ತಿವೆ. ಅಮಾನತು ಆದೇಶ ಹಿಂಪಡೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕೂಡ ಮನವಿ ಮಾಡಿದರು. ಆದರೆ ರಾಜ್ಯ ಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭಾ ಸಂಸದರ ಅಮಾನತು: 12 ಸಂಸದರು ಕ್ಷಮೆಯಾಚಿಸಿದರೆ, ನಾವು ಪರಿಗಣಿಸಬಹುದು ಎಂದ ಸರ್ಕಾರ