ಎರಡು ವಾರದ ಹಿಂದೆಯೇ ಆ್ಯಪಲ್ ತಂತ್ರಾಂಶಗಳಲ್ಲಿ ಭದ್ರತಾ ಲೋಪದ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿದ್ದ ಸರ್ಕಾರ
Apple Alert Notification: ಹಳೆಯ ಆವೃತ್ತಿಯ ಆ್ಯಪಲ್ ತಂತ್ರಾಂಶಗಳಲ್ಲಿ ಹುಳುಕುಗಳು ಕಂಡುಬಂದಿವೆ. 17.1ಗೆ ಮುಂದಿನ ಐಒಸ್ ಮತ್ತು ಐಪ್ಯಾಡ್ ಒಎಸ್ ಆವೃತ್ತಿಗಳು, 14.1ಕ್ಕೆ ಮುಂಚಿನ ಮ್ಯಾಕ್ಒಎಸ್ ಸೊನೊಮಾ ಆವೃತ್ತಿಗಳು, 13.6.1ಗೆ ಮುಂಚಿನ ವೆಂಟುರಾ ಆವೃತ್ತಿ, 12.7.1ಕ್ಕೆ ಮುಂಚಿನ ಮಾಂಟೆರೆ ಆವೃತ್ತಿಯ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪವನ್ನು ಸಿಇಆರ್ಟಿ ತನ್ನ ಅಡ್ವೈಸರಿಯಲ್ಲಿ ತೋರಿಸಿತ್ತೆನ್ನಲಾಗಿದೆ.
ನವದೆಹಲಿ, ನವೆಂಬರ್ 1: ಮಹುವಾ ಮೋಯಿತ್ರಾ, ರಾಹುಲ್ ಗಾಂಧಿ, ಪ್ರಿಯಾಂಕಾ ಚತುರ್ವೇದಿ ಮೊದಲಾದ ವಿಪಕ್ಷ ಮುಖಂಡರು ತಮಗೆ ಆ್ಯಪಲ್ನಿಂದ ಥ್ರೆಟ್ ನೋಟಿಫಿಕೇಶನ್ (Threat Notification) ಬಂದಿರುವ ಬಗ್ಗೆ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡುವ ಮುನ್ನವೇ ಕೇಂದ್ರ ಸರ್ಕಾರ ಆ್ಯಪಲ್ ಉತ್ಪನ್ನಗಳಲ್ಲಿರುವ ಲೋಪದ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿತ್ತು. ಅಕ್ಟೋಬರ್ 14ರಂದೇ ಕೇಂದ್ರದ ಕಂಪ್ಯೂಟರ್ ಎಮರ್ಜೆನ್ಸಿ ರಿಸರ್ಚ್ ಟೀಮ್ (CERT-in) ಆ್ಯಪಲ್ ಬಳಕೆದಾರರಿಗೆ ಎಚ್ಚರದ ಸಂದೇಶ ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ. ಆ್ಯಪಲ್ನ ವಿವಿಧ ಆವೃತ್ತಿಯ ತಂತ್ರಾಂಶಗಳಲ್ಲಿ ಹಲವು ದೋಷಗಳನ್ನು ಸರ್ಕಾರದ ಅಡ್ವೈಸರಿಯಲ್ಲಿ ಎತ್ತಿತೋರಿಸಲಾಗಿದೆ.
ಹಳೆಯ ಆವೃತ್ತಿಯ ಆ್ಯಪಲ್ ತಂತ್ರಾಂಶಗಳಲ್ಲಿ ಹುಳುಕುಗಳು ಕಂಡುಬಂದಿವೆ. 17.1ಗೆ ಮುಂದಿನ ಐಒಸ್ ಮತ್ತು ಐಪ್ಯಾಡ್ ಒಎಸ್ ಆವೃತ್ತಿಗಳು, 14.1ಕ್ಕೆ ಮುಂಚಿನ ಮ್ಯಾಕ್ಒಎಸ್ ಸೊನೊಮಾ ಆವೃತ್ತಿಗಳು, 13.6.1ಗೆ ಮುಂಚಿನ ವೆಂಟುರಾ ಆವೃತ್ತಿ, 12.7.1ಕ್ಕೆ ಮುಂಚಿನ ಮಾಂಟೆರೆ ಆವೃತ್ತಿಯ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪವನ್ನು ಸಿಇಆರ್ಟಿ ತನ್ನ ಅಡ್ವೈಸರಿಯಲ್ಲಿ ತೋರಿಸಿತ್ತೆನ್ನಲಾಗಿದೆ. ಅದರಲ್ಲೂ ಆ್ಯಪಲ್ನ ಸಫಾರಿ ಬ್ರೌಸರ್ ಆ್ಯಪ್ನ 17.1ಕ್ಕೆ ಮುಂಚಿನ ಆವೃತ್ತಿಗಳಲ್ಲಿರುವ ಲೋಪವನ್ನು ಪ್ರಮುಖವಾಗಿ ಉಲ್ಲೇಖಿಸಿದೆ.
ಇದನ್ನೂ ಓದಿ: ಭಾರತೀಯರ ಖಾಸಗಿ ಡೇಟಾ ಸೋರಿಕೆ ಆರೋಪದ ಕುರಿತು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದೇನು?
ಆ್ಯಪಲ್ನ ಈ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪಗಳನ್ನು ಎತ್ತಿತೋರಿಸಿ ಅದರ ಬಳಕೆದಾರರಿಗೆ ಹೈ ಸಿವಿಯಾರಿಟಿ ಅಲರ್ಟ್ ಅನ್ನು ಹೊರಡಿಸಲಾಗಿದೆ.
ಆ್ಯಪಲ್ ಉತ್ಪನ್ನಗಳಲ್ಲಿ ಹಲವು ಭದ್ರತಾ ಲೋಪಗಳು ಕಂಡುಬಂದಿದ್ದು, ಹ್ಯಾಕರ್ಗಳು ಸಾಧನವನ್ನು ಹ್ಯಾಕ್ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಸಿಇಆರ್ಟಿ ಅಕ್ಟೋಬರ್ 14ರಂದು ಬಿಡುಗಡೆ ಮಾಡಿದ ಅಡ್ವೈಸರಿಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಹಳೆಯ ಆ್ಯಪಲ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಮೊಬೈಲ್ಗಳಲ್ಲಿ ಈ ಲೋಪಗಳು ಇರಬಹುದು. ಅಂತೆಯೇ, ಹೊಸ ಆವೃತ್ತಿಗೆ ಅಪ್ಡೇಟ್ ಮಾಡಲು ಕೋರಲಾಗಿದೆ. ಸಿಇಆರ್ಟಿ ಲೋಪಗಳನ್ನು ಎತ್ತಿತೋರಿಸಿದ ಬಳಿಕ ಆ್ಯಪಲ್ ಅ ಸಂಬಂಧಿತ ತಂತ್ರಾಂಶಗಳನ್ನು ಅಪ್ಡೇಟ್ ಮಾಡಿದೆ. ಹೀಗಾಗಿ, ಆ್ಯಪಲ್ ಬಳಕೆದಾರರು ತಮ್ಮ ತಂತ್ರಾಂಶಗಳನ್ನು ಹೊಸ ಆವೃತ್ತಿಗೆ ಬದಲಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ: ‘ತಪ್ಪಾಗಿಯೂ ಅಲರ್ಟ್ ಬಂದಿರಬಹುದು…’- ಆ್ಯಪಲ್ ಸ್ಪಷ್ಟನೆ; ನೋಟಿಫಿಕೇಶನ್ ಬುಡ ಶೋಧಿಸಲು ಸರ್ಕಾರದಿಂದ ತನಿಖೆ
ಸರ್ಕಾರದಿಂದಲೂ ತನಿಖೆ…
ವಿಪಕ್ಷಗಳ ಕೆಲ ನಾಯಕರು, ಪತ್ರಕರ್ತರು, ವಕೀಲರು ಹೀಗೆ ಹಲವು ಮಂದಿಗೆ ಅವರ ಆ್ಯಪಲ್ ಐಫೋನ್ಗಳಲ್ಲಿ ಸೆಕ್ಯೂರಿಟಿ ಬೆದರಿಕೆಯ ಅಲರ್ಟ್ ಮೆಸೇಜ್ಗಳು ಬಂದಿವೆ. ಸರ್ಕಾರಿ ಪ್ರಾಯೋಜಿತ ದಾಳಿಗೆ ಪ್ರಯತ್ನವಾಗಿದೆ ಎನ್ನುವಂತಹ ಮೆಸೇಜ್ ಎಲ್ಲರನ್ನೂ ಚಕಿತಗೊಳಿಸಿದೆ. ವಿಪಕ್ಷಗಳ ನಾಯಕರು ಈ ಮೆಸೇಜ್ನ ಸ್ಕ್ರೀನ್ ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಸರ್ಕಾರ ತಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದ್ದು, ಆ್ಯಪಲ್ ಕಳುಹಿಸಿರುವ ಈ ಅಲರ್ಟ್ ಮೆಸೇಜ್ ಸಂಬಂಧ ತನಿಖೆಗೆ ಆದೇಶಿಸಿದೆ. ಆ್ಯಪಲ್ ಯಾವುದೋ ಅಸ್ಪಷ್ಟ ಸುಳಿವನ್ನು ಆಧರಿಸಿ ಈ ಅಲರ್ಟ್ ಮೆಸೇಜ್ ಕಳುಹಿಸಿರಬಹುದು ಎಂಬುದು ಸರ್ಕಾರದ ಶಂಕೆ. ಹಾಗೆಯೇ, ಅಲರ್ಟ್ ನೋಟಿಫಿಕೇಶನ್ನಲ್ಲಿ, ಸರ್ಕಾರಿ ಪ್ರಾಯೋಜಿತವೆಂಬ ಪದ ಪ್ರಯೋಗ ಮಾಡಿರುವುದಕ್ಕೂ ಸರ್ಕಾರ ವ್ಯಗ್ರಗೊಂಡಿದ್ದು, ಆ್ಯಪಲ್ ಸಂಸ್ಥೆಯನ್ನು ಪ್ರಶ್ನಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ