ಕೇಜ್ರಿವಾಲ್, ಸಿಸೋಡಿಯಾ ಸೇರಿ ದೆಹಲಿ ಚುನಾವಣೆಯಲ್ಲಿ ಈ ಪ್ರಮುಖ ಆಪ್ ನಾಯಕರಿಗೆ ಭಾರೀ ಮುಖಭಂಗ
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಉಳಿದಿದೆ. ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಂತೆ ಈಗಾಗಲೇ ಬಿಜೆಪಿ ಭರ್ಜರಿ ಜಯ ಗಳಿಸುವ ಮೂಲಕ ದೆಹಲಿಯಲ್ಲಿ ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಈ ನಡುವೆ ಈ ಚುನಾವಣೆಯಲ್ಲಿ ಸೋಲನ್ನಪ್ಪಿದ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ: ಮಾಜಿ ಮುಖ್ಯಮಂತ್ರಿ, ಮಾಜಿ ಡಿಸಿಎಂ, ಸಚಿವರು ಹೀಗೆ ಆಮ್ ಆದ್ಮಿ ಪಕ್ಷದ ಪ್ರಮುಖ ಹುದ್ದೆಗಳಲ್ಲಿದ್ದ ನಾಯಕರು ಈ ಬಾರಿಯ ಚುನಾವಣೆಯಲ್ಲಿ ನೆಲ ಕಚ್ಚಿದ್ದಾರೆ. ದೆಹಲಿ ಚುನಾವಣೆಯಲ್ಲಿ ಸೋತ ಎಎಪಿಯ ಪ್ರಮುಖ ನಾಯಕರಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ಸಚಿವ ಸೌರಭ್ ಭಾರದ್ವಾಜ್, ಸತ್ಯೇಂದ್ರ ಜೈನ್ ಮುಂತಾದವರು ಸೇರಿದ್ದಾರೆ. ದೆಹಲಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಐತಿಹಾಸಿಕ ಗೆಲುವು ಸಾಧಿಸಿದೆ. 27 ವರ್ಷಗಳ ನಂತರ ದೆಹಲಿಯಲ್ಲಿ ಪಕ್ಷವು ಅಧಿಕಾರಕ್ಕೆ ಮರಳಿದೆ. ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್, ದುಷ್ಯಂತ್ ಗೌತಮ್ ಮತ್ತು ಹರೂನ್ ಯೂಸುಫ್ ಅವರಂತಹ ಹಿರಿಯ ನಾಯಕರು ಸೇರಿದಂತೆ ಹಲವಾರು ಪ್ರಮುಖ ಸೋಲುಗಳು ಕಂಡುಬಂದವು.
ದೆಹಲಿಯ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವಿರುದ್ಧ 4,089 ಮತಗಳಿಂದ ಸೋತರು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಂಗ್‌ಪುರದಲ್ಲಿ ಸೋಲನ್ನು ಎದುರಿಸಿದರು. ಬಿಜೆಪಿಯ ತರ್ವಿಂದರ್ ಸಿಂಗ್ ಮಾರ್ವಾ ವಿರುದ್ಧ ಕೇವಲ 675 ಮತಗಳಿಂದ ಸೋತರು.
ಶಕುರ್ ಬಸ್ತಿಯಿಂದ ಸ್ಪರ್ಧಿಸಿದ್ದ ಎಎಪಿಯ ಸತ್ಯೇಂದರ್ ಜೈನ್ ಬಿಜೆಪಿಯ ಕರ್ನೈಲ್ ಸಿಂಗ್ ವಿರುದ್ಧ ಸೋತರು. ಕರ್ನೈಲ್ ಸಿಂಗ್ 20,998 ಮತಗಳ ಅಂತರದಿಂದ ಗೆದ್ದರು. ಚುನಾವಣಾ ಆಯೋಗದ ಪ್ರಕಾರ, ಕರ್ನೈಲ್ ಸಿಂಗ್ 56,869 ಮತಗಳನ್ನು ಪಡೆದರೆ, ಸತ್ಯೇಂದರ್ 35,871 ಮತಗಳನ್ನು ಗಳಿಸಿದ್ದರು. ಈ ಸ್ಥಾನದಿಂದ ಮೂರು ಬಾರಿ ಶಾಸಕರಾಗಿರುವ ಸತ್ಯೇಂದರ್ ಜೈನ್ ಈ ಬಾರಿ ತೀವ್ರ ಹೀನಾಯವಾಗಿ ಸೋತಿದ್ದಾರೆ.
ಇದನ್ನೂ ಓದಿ: 27 ವರ್ಷದ ವನವಾಸದ ಬಳಿಕ ದೆಹಲಿಯಲ್ಲಿ ಅರಳಿದ ಬಿಜೆಪಿ; ಆಮ್ ಆದ್ಮಿ ಪಕ್ಷಕ್ಕೆ ಹೀನಾಯ ಸೋಲು
ಗ್ರೇಟರ್ ಕೈಲಾಶ್‌ನಲ್ಲಿ ಆರಂಭದಲ್ಲಿ 3,000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದ ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರನ್ನು ಬಿಜೆಪಿಯ ಶಿಖಾ ರಾಯ್ ಸೋಲಿಸಿದರು. ಎಎಪಿಯ ಅವಧ್ ಓಜಾ ಅವರು ಪತ್ಪರ್‌ಗಂಜ್ ಸ್ಥಾನವನ್ನು ಬಿಜೆಪಿಯ ರವೀಂದರ್ ಸಿಂಗ್ ನೇಗಿ ವಿರುದ್ಧ 28,072 ಮತಗಳ ಭಾರಿ ಅಂತರದಿಂದ ಸೋತರು.
ದೆಹಲಿ ವಿಧಾನಸಭಾ ಉಪಸಭಾಪತಿ ಮತ್ತು ಮಾಜಿ ಸಚಿವೆ ರಾಖಿ ಬಿರ್ಲಾ ಕೂಡ ಮದೀಪುರದಲ್ಲಿ ಸೋತರು. ಬಿಜೆಪಿಯ ಕೈಲಾಶ್ ಗಂಗ್ವಾಲ್ ವಿಜಯಶಾಲಿಯಾದರೆ, ಕಾಂಗ್ರೆಸ್‌ನ ಜೈ ಪ್ರಕಾಶ್ ಪನ್ವರ್ ಮೂರನೇ ಸ್ಥಾನ ಪಡೆದರು. ಬಿರ್ಲಾ 10,899 ಮತಗಳನ್ನು ಪಡೆದರು.
ಇದನ್ನೂ ಓದಿ: ನಮ್ಮ ಗ್ಯಾರಂಟಿಗಳಿಂದ ವಿಕಸಿತ ಭಾರತದಲ್ಲಿ ಮುಖ್ಯ ಪಾತ್ರ ವಹಿಸಲಿದೆ ದೆಹಲಿ: ಗೆಲುವಿನ ಬಳಿಕ ಪ್ರಧಾನಿ ಮೋದಿ ಮಾತು
ಭಾರೀ ಸೋಲುಗಳ ನಡುವೆಯೂ ಆಮ್ ಆದ್ಮಿ ಪಕ್ಷದ ಕೆಲವು ನಾಯಕರು ಗೆಲುವು ಕಂಡಿದ್ದಾರೆ. ಎಎಪಿ ಸರಣಿ ಸೋಲುಗಳನ್ನು ಅನುಭವಿಸಿದರೆ ನಿರ್ಗಮಿತ ಮುಖ್ಯಮಂತ್ರಿ ಅತಿಶಿ ಮತ್ತು ಮೂವರು ಎಎಪಿ ಮಂತ್ರಿಗಳಾದ ಗೋಪಾಲ್ ರೈ, ಮುಖೇಶ್ ಅಹ್ಲಾವತ್ ಮತ್ತು ಇಮ್ರಾನ್ ಹುಸೇನ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ದಕ್ಷಿಣ ದೆಹಲಿಯ ಕಲ್ಕಾಜಿಯಲ್ಲಿ ಬಿಜೆಪಿಯ ರಮೇಶ್ ಬಿಧುರಿ ಮತ್ತು ಕಾಂಗ್ರೆಸ್‌ನ ಅಲ್ಕಾ ಲಂಬಾ ವಿರುದ್ಧ ಅತಿಶಿ ಗೆದ್ದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ