ಲೈಂಗಿಕ ಬೇಡಿಕೆಯಿಟ್ಟಿದ್ದರು; ಪಾಕಿಸ್ತಾನದ ರಾಯಭಾರ ಕಚೇರಿ ಸಿಬ್ಬಂದಿ ವಿರುದ್ಧ ಪಂಜಾಬ್ ಮಹಿಳೆ ಆರೋಪ
ಪಂಜಾಬ್‌ನ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಪ್ರಾಧ್ಯಾಪಕಿ ಮತ್ತು ವಿಭಾಗದ ಮುಖ್ಯಸ್ಥರಾಗಿರುವ ಮಹಿಳೆ ಪಾಕಿಸ್ತಾನದ ಹೈಕಮಿಷನ್‌ನಲ್ಲಿ ಆನ್‌ಲೈನ್ ವೀಸಾ ಅಪಾಯಿಂಟ್‌ಮೆಂಟ್ ಬುಕ್ ಮಾಡಿದ್ದರು.
ನವದೆಹಲಿ: ಪಂಜಾಬ್‌ನ (Punjab) ಕಾಲೇಜು ಪ್ರಾಧ್ಯಾಪಕಿಯೊಬ್ಬರು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ (Pakistan High Commission) ಹಿರಿಯ ಸಿಬ್ಬಂದಿಯ ವಿರುದ್ಧ ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ. 2021ರಲ್ಲಿ ಅವರು ಪಾಕಿಸ್ತಾನಕ್ಕೆ ಪ್ರಯಾಣಿಸಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ರಾಯಭಾರ ಕಚೇರಿಗೆ ಭೇಟಿ ನೀಡಿದಾಗ ಕೆಲವು ಹಿರಿಯ ಸಿಬ್ಬಂದಿ ತಮ್ಮ ಲೈಂಗಿಕ ಬಯಕೆಯನ್ನು ಈಡೇರಿಸುವಂತೆ ಬೇಡಿಕೆ ಇಟ್ಟಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಪಂಜಾಬ್‌ನ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಪ್ರಾಧ್ಯಾಪಕಿ ಮತ್ತು ವಿಭಾಗದ ಮುಖ್ಯಸ್ಥರಾಗಿರುವ ಮಹಿಳೆ ಪಾಕಿಸ್ತಾನದ ಹೈಕಮಿಷನ್‌ನಲ್ಲಿ ಆನ್‌ಲೈನ್ ವೀಸಾ ಅಪಾಯಿಂಟ್‌ಮೆಂಟ್ ಬುಕ್ ಮಾಡಿದ್ದರು. ಈ ಬಗ್ಗೆ ಇಂಡಿಯಾ ಟುಡೆಗೆ ಮಾಹಿತಿ ನೀಡಿರುವ ಮಹಿಳೆ, ನಾನು ಲಾಹೋರ್‌ಗೆ ಭೇಟಿ ನೀಡಿ ಅಲ್ಲಿನ ಸ್ಮಾರಕಗಳ ಫೋಟೋಗಳನ್ನು ತೆಗೆಯಲು ಬಯಸಿದ್ದೆ. ಹಾಗೇ, ಆ ಸ್ಮಾರಕಗಳ ಬಗ್ಗೆ ಬರೆಯಲು ಉದ್ದೇಶಿಸಿದ್ದೆ. ಅಲ್ಲದೆ, ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ ವಿಶ್ವವಿದ್ಯಾನಿಲಯಕ್ಕೂ ಭೇಟಿ ನೀಡಲು ಬಯಸಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Pakistan Economic Crisis: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು; ಮಾಲ್, ಮಾರ್ಕೆಟ್ಗಳನ್ನು ಬೇಗನೇ ಮುಚ್ಚಲು ಆದೇಶ
ಹೀಗಾಗಿ, ವೀಸಾಗೆ ಅರ್ಜಿ ಸಲ್ಲಿಸಲು ಪಾಕಿಸ್ತಾನದ ರಾಯಭಾರ ಕಚೇರಿಗೆ ಹೋದಾಗ ಅಲ್ಲಿನ ಹಿರಿಯ ಸಿಬ್ಬಂದಿ ನನ್ನ ಬಳಿ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಮುಜುಗರ ಉಂಟು ಮಾಡಿದರು. ನಾನು ಯಾಕೆ ಮದುವೆಯಾಗಿಲ್ಲ ಎಂದು ಅವರು ನನ್ನನ್ನು ಕೇಳಿದರು. ನಾನು ಮದುವೆಯಾಗದೆ ಹೇಗೆ ಬದುಕುತ್ತೇನೆ, ನನ್ನ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳಲು ನಾನು ಏನು ಮಾಡುತ್ತೇನೆ ಎಂದು ಅವರು ಪ್ರಶ್ನಿಸಿದ್ದರು. ಅಲ್ಲದೆ, ನನ್ನಲ್ಲಿ ಲೈಂಗಿಕತೆಯ ಬೇಡಿಕೆ ಇಟ್ಟಿದ್ದರು ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ನೀಡಿರುವ ದೂರಿನಲ್ಲಿ ಆ ಮಹಿಳೆ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಕೋರಿದ್ದಾರೆ. ಆ ಮಹಿಳೆ ಈ ಹಿಂದೆ ಪಾಕಿಸ್ತಾನದ ಪೋರ್ಟಲ್‌ನಲ್ಲಿ ಕೂಡ ದೂರು ದಾಖಲಿಸಿದ್ದರು. ಅಲ್ಲದೆ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್ ಭುಟ್ಟೋ ಅವರಿಗೆ ಪತ್ರ ಬರೆದಿದ್ದರು. ಆದರೆ, ಏನೂ ಪ್ರಯೋಜನವಾಗಲಿಲ್ಲ ಎಂದು ಆಕೆ ತಿಳಿಸಿದ್ದಾರೆ.