ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ 2 ಬೋಟ್​ಗಳು ಡಿಕ್ಕಿ; ಒಬ್ಬರು ಸಾವು, 35 ಜನರ ರಕ್ಷಣೆ, 60ಕ್ಕೂ ಹೆಚ್ಚು ಜನ ನಾಪತ್ತೆ

TV9 Digital Desk

| Edited By: Sushma Chakre

Updated on:Sep 08, 2021 | 8:33 PM

Boat Accident: ಜೋರ್ಹತ್​ನ ನಿಮತಿ ಘಾಟ್​ನಲ್ಲಿ ಇಂದು ಸಂಜೆ ಈ ದುರಂತ ಸಂಭವಿಸಿದೆ. ಎದುರು ಬದುರಾಗಿ ಚಲಿಸುತ್ತಿದ್ದ ಎರಡು ಬೋಟ್​ಗಳು ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ 2 ಬೋಟ್​ಗಳು ಡಿಕ್ಕಿ; ಒಬ್ಬರು ಸಾವು, 35 ಜನರ ರಕ್ಷಣೆ, 60ಕ್ಕೂ ಹೆಚ್ಚು ಜನ ನಾಪತ್ತೆ
ಬ್ರಹ್ಮಪುತ್ರ ನದಿಯಲ್ಲಿ ಬೋಟ್ ಡಿಕ್ಕಿ
Follow us

ಅಸ್ಸಾಂ: ಅಸ್ಸಾಂ ರಾಜ್ಯದ ಜೋರ್ಹತ್​ನ ಬ್ರಹ್ಮಪುತ್ರ ನದಿಯಲ್ಲಿ (Brahmaputra River) ಎರಡು ಬೋಟ್​ಗಳು ಡಿಕ್ಕಿಯಾಗಿವೆ.ಈ ದುರಂತದಲ್ಲಿ ಈಗಾಗಲೇ ಒಬ್ಬರ ಶವ ಪತ್ತೆಯಾಗಿದ್ದು, ಇನ್ನೂ ಸುಮಾರು 60 ಪ್ರಯಾಣಿಕರು ನಾಪತ್ತೆಯಾಗಿದ್ದು, ಈಗಾಗಲೇ 35 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಎರಡು ಬೋಟ್​ಗಳಲ್ಲಿ ಒಟ್ಟು 100 ಪ್ರಯಾಣಿಕರಿದ್ದರು. ನದಿಯಲ್ಲಿ ಮುಳುಗಿದವರಿಗಾಗಿ ಶೋಧ ಕಾರ್ಯ ನಡೆದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಈ ಘಟನೆಯ ಬಗ್ಗೆ ಕೇಂದ್ರ ಮೀನುಗಾರಿಕೆ ಸಚಿವ ಸರ್ಬಾನಂದ ಸೋನಾವಾಲ್ ಕೂಡ ಟ್ವೀಟ್ ಮಾಡಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮ ಅವರಿಗೆ ಫೋನ್ ಮಾಡಿ, ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಹಾಗೇ, ಅಸ್ಸಾಂ ಸಿಎಂ ಹಿಮಾಂತ್ ಬಿಸ್ವ ಶರ್ಮ ಕೂಡ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಎಸ್​ಡಿಆರ್​ಎಫ್ ಹಾಗೂ ಎನ್​ಡಿಆರ್​ಎಫ್ ಸಿಬ್ಬಂದಿಯ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದಿದ್ದಾರೆ.

ಜೋರ್ಹತ್​ನ ನಿಮತಿ ಘಾಟ್​ನಲ್ಲಿ ಇಂದು ಸಂಜೆ 4.30ರ ವೇಳೆಗೆ ಈ ದುರಂತ ಸಂಭವಿಸಿದೆ. ಎದುರು ಬದುರಾಗಿ ಚಲಿಸುತ್ತಿದ್ದ ಎರಡು ಬೋಟ್​ಗಳು ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಗುವಾಹಟಿಯಿಂದ 350 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಒಂದು ಬೋಟ್ ಬ್ರಹ್ಮಪುತ್ರನದಿಯ ದ್ವೀಪವಾದ ಮಜುಲಿ ಕಡೆಯಿಂದ ನಿಮತಿ ಘಾಟ್​ಗೆ ಬರುತ್ತಿತ್ತು. ಇನ್ನೊಂದು ಬೋಟ್ ನಿಮತಿ ಘಾಟ್​ನಿಂದ ವಾಪಾಸ್ ತೆರಳುತ್ತಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಅಸ್ಸಾಂನ ದೋಣಿ ದುರಂತದ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಯಾಣಿಕರ ರಕ್ಷಣೆಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ನಾಪತ್ತೆಯಾದವರು ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ವಿರುದ್ಧ ದಿಕ್ಕಿನಲ್ಲಿ ಬಂದ ಬೋಟ್​ಗಳು ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ಪ್ರಯಾಣಿಕರು ನೀರಿನಲ್ಲಿ ಮುಳುಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಎಸ್​ಡಿಆರ್​ಎಫ್ ತಂಡದವರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಬೋಟ್ ದುರಂತದಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ.

ಇದನ್ನೂ ಓದಿ: ಕೇರಳದ ಕೊಲ್ಲಂನಲ್ಲಿ ದೋಣಿ ಮುಳುಗಿ 4 ಮೀನುಗಾರರು ಸಾವು; 12 ಜನರ ರಕ್ಷಣೆ

ಮುರ್ಡೇಶ್ವರದ ಬಳಿ ಮೀನುಗಾರಿಕಾ ಬೋಟ್​ ಪಲ್ಟಿ; 7 ಮಂದಿಯ ರಕ್ಷಣೆ

(Assam 2 Boats with 100 people collide in Brahmaputra River Many Passengers feared missing)

ತಾಜಾ ಸುದ್ದಿ

Related Stories

Click on your DTH Provider to Add TV9 Kannada