ಸ್ಪೀಡ್ ಪೋಸ್ಟ್ ಮೂಲಕ ಅಸ್ಥಿ ವಿಸರ್ಜನೆಗೆ ಅವಕಾಶ; ಇಲ್ಲಿದೆ ಸಂಪೂರ್ಣ ವಿವರ

ಸ್ಪೀಡ್ ಪೋಸ್ಟ್ ಮೂಲಕ ಅಸ್ಥಿ ವಿಸರ್ಜನೆಗೆ ಅವಕಾಶ; ಇಲ್ಲಿದೆ ಸಂಪೂರ್ಣ ವಿವರ
ಗಂಗಾ ನದಿ, ವಾರಣಾಸಿ

ಅಸ್ಥಿ ವಿಸರ್ಜನೆ ಮಾಡಲಾಗದವರು ಈಗ ತಮ್ಮ ಪ್ರೀತಿಪಾತ್ರರ ಅಸ್ಥಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ಪುಣ್ಯಕ್ಷೇತ್ರಗಳೆಂದು ಪರಿಗಣಿತವಾದ ಸ್ಥಳಗಳಿಗೆ ಕಳಿಸಿಕೊಡಬಹುದು.

TV9kannada Web Team

| Edited By: ganapathi bhat

Jun 07, 2021 | 11:06 PM

ವಾರಣಾಸಿ: ಕೊರೊನಾ ಸಂಕಷ್ಟ ಕಾಲದಲ್ಲಿ ಹಲವು ಸಾವು- ನೋವುಗಳನ್ನು ಭಾರತ ಎದುರಿಸಿತು. ಕೊವಿಡ್ ಮೊದಲನೇ ಅಲೆಗಿಂತ ಅಧಿಕ ಪ್ರಮಾಣದ ಕಷ್ಟಗಳನ್ನು ಎರಡನೇ ಅಲೆಯ ವೇಳೆ ಕಾಣುವಂತಾಯಿತು. ಸೋಂಕಿಗೆ ತುತ್ತಾದವರ ಸಾವು ಅರಗಿಸಿಕೊಳ್ಳುವುದು ಕೂಡ ಸಂಕಟದ ಸನ್ನಿವೇಶ ತಂದೊಡ್ಡಿತು. ಸೋಂಕಿತರ ಮೃತದೇಹವನ್ನು ಸರ್ಕಾರಿ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ಮಾಡಬೇಕು. ಯಾವುದೇ ಧಾರ್ಮಿಕ ವಿಧಿವಿಧಾನಗಳಿಗೆ ಅವಕಾಶ ಲಭ್ಯವಾಗಲಿಲ್ಲ. ಅಸ್ಥಿ ವಿಸರ್ಜನೆ ಅಥವಾ ಶ್ರಾದ್ಧ (13ದಿನದ ಕ್ರಿಯಾವಿಧಿಗಳು) ಮಾಡಲು ಆಗಲಿಲ್ಲ.

ಧಾರ್ಮಿಕ ನಂಬಿಕೆಗಳು ಇರುವ ಜನರಲ್ಲಿ ಹಲವರಿಗೆ ಆ ಬಗ್ಗೆ ಅಸಮಾಧಾನ ಅಥವಾ ಬೇಸರ ಮೂಡಿರಬಹುದು. ಈಗ ಅದಕ್ಕೆ ಸರ್ಕಾರದ ಇಲಾಖೆಗಳೇ ಕೆಲವು ಪರಿಹಾರ ಮಾರ್ಗಳನ್ನು ನೀಡಿವೆ. ಭಾರತೀಯ ಅಂಚೆ ಇಲಾಖೆ, ಸಾಮಾಜಿಕ- ಧಾರ್ಮಿಕ ವೇದಿಕೆ ಓಂ ದಿವ್ಯ ದರ್ಶನ್ ಜೊತೆಗೆ ಹೊಸ ಯೋಜನೆಯೊಂದನ್ನು ತಂದಿದೆ. ಅದರಂತೆ ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ, ವಾರಣಾಸಿ, ಪ್ರಯಾಗ್​ರಾಜ್, ಹರಿದ್ವಾರ ಮತ್ತು ಗಯಾದಲ್ಲಿ ಶ್ರಾದ್ಧ ಮಾಡಬಹುದು.

ಅಸ್ಥಿ ವಿಸರ್ಜನೆ ಮಾಡಲಾಗದವರು ಈಗ ತಮ್ಮ ಪ್ರೀತಿಪಾತ್ರರ ಅಸ್ಥಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ಪುಣ್ಯಕ್ಷೇತ್ರಗಳೆಂದು ಪರಿಗಣಿತವಾದ ಸ್ಥಳಗಳಿಗೆ ಕಳಿಸಿಕೊಡಬಹುದು. ಈ ಬಗ್ಗೆ ವಾರಣಾಸಿಯ ಪೋಸ್ಟ್ ಮಾಸ್ಟರ್ ಜನರಲ್ ಕೃಷ್ಣ ಕುಮಾರ್ ಯಾದವ್ ತಿಳಿಸಿದ್ದಾರೆ. ಗಂಗಾ ತಟದಲ್ಲಿ ಅಸ್ಥಿ ವಿಸರ್ಜನೆ, ವಾರಣಾಸಿ, ಪ್ರಯಾಗ್​ರಾಜ್, ಹರಿದ್ವಾರ್ ಮತ್ತು ಗಯಾದಲ್ಲಿ ಶ್ರಾದ್ಧ ಮಾಡುವ ಸಂಪ್ರದಾಯವಿದೆ ಎಂದು ಅವರು ಹೇಳಿದ್ದಾರೆ.

ಈ ಅವಕಾಶ ಬಳಸಿಕೊಳ್ಳಲು, ಓಂ ದಿವ್ಯ ದರ್ಶನ್ (http://omdivyadarshan.org) ನಲ್ಲಿ ಅಸ್ಥಿ ವಿಸರ್ಜನೆ ಮತ್ತು ಶ್ರಾದ್ಧಕ್ಕೆ ನೋಂದಾಯಿಸಿಕೊಳ್ಳಬಹುದು. ಅಸ್ಥಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ವಾರಣಾಸಿ, ಪ್ರಯಾಗರಾಜ್, ಹರಿದ್ವಾರ ಮತ್ತು ಗಯಾಕ್ಕೆ ಕಳಿಸಿಕೊಡಬಹುದು. ಅಸ್ಥಿಯನ್ನು ಸರಿಯಾಗಿ ಪ್ಯಾಕ್ ಮಾಡಿರಬೇಕು ಮತ್ತು ಕವರ್​ನ ಮೇಲೆ ದಪ್ಪ ಅಕ್ಷರಗಳಲ್ಲಿ ಓಂ ದಿವ್ಯ ದರ್ಶನ್ (Om Divya Darshan) ಎಂದು ಬರೆದಿರಬೇಕು. ಅಂಚೆ ವೆಚ್ಚವನ್ನು ಪೋಸ್ಟ್ ಮಾಡುವವರೇ ಭರಿಸಬೇಕು.

ಈ ಬುಕಿಂಗ್ ಬಳಿಕ, ಸ್ಪೀಡ್ ಪೋಸ್ಟ್ ಬಾರ್ ಕೋಡ್ ನಂಬರ್ ಸಹಿತ ಇತರ ವಿವರಗಳನ್ನು ಪೋರ್ಟಲ್​ನಲ್ಲಿ ತುಂಬಬೇಕು. ಆ ಬಳಿಕ ಅಸ್ಥಿಯು ತಲುಪಬೇಕಾದ ವಿಳಾಸ ಅಥವಾ ಸ್ಥಳಕ್ಕೆ ತಲುಪುತ್ತದೆ. ನಂತರ, ನಿಗದಿಪಡಿಸಿದ ದಿನದಂದು, ಸೂಚಿತ ಸಮಯಕ್ಕೆ ಪುರೋಹಿತರು ಶ್ರಾದ್ಧ ಕ್ರಿಯೆಗಳನ್ನು ನಡೆಸಿಕೊಡುತ್ತಾರೆ. ಅದನ್ನು ವೆಬ್​ಕಾಸ್ಟ್ ಮೂಲಕ ಕುಟುಂಬಸ್ಥರು ವೀಕ್ಷಿಸಬಹುದು. ಕೊನೆಗೆ, ಗಂಗಾಜಲದ ಸೀಸೆಯು ಆಯಾ ಕುಟುಂಬಸ್ಥರ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಬಂದು ತಲುಪಲಿದೆ.

ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ, ಕೊರೊನಾದಿಂದ ಮೃತಪಟ್ಟ ಸಾವಿರಕ್ಕೂ ಅಧಿಕ ಮಂದಿಯ ಅಸ್ಥಿ ವಿಸರ್ಜನೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿ ವಿಸರ್ಜನೆ; ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಕುಳಿತ ಆರ್ ಅಶೋಕ್

ವೃದ್ಧ ತಾಯಿಯ ಅಸ್ಥಿ ತೆಗೆದುಕೊಂಡು ಹೋಗುತ್ತಿದ್ದ ಕಾರಿಗೂ ತಡೆ; ಕಾರು ಬಿಡಲು ಸಾಧ್ಯವಿಲ್ಲ ಅಂತಾ ವಾಪಸ್ ಕೈ ಮುಗಿದ ಪೊಲೀಸರು

Follow us on

Related Stories

Most Read Stories

Click on your DTH Provider to Add TV9 Kannada