ದೆಹಲಿ: ಕೊವಿಶೀಲ್ಡ್ ಲಸಿಕೆ ಮೊದಲ ಡೋಸ್ ಹಾಗೂ ಎರಡನೇ ಡೋಸ್ ನಡುವಿನ ಸಮಯವನ್ನು ತಕ್ಷಣಕ್ಕೆ ಬದಲಾವಣೆ ಮಾಡುವುದಿಲ್ಲ ಎಂದು ಇಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ಎರಡೂ ಡೋಸ್ಗಳ ಮಧ್ಯೆ ನಿಗದಿಪಡಿಸಲಾದ ಸಮಯಮಿತಿಗೆ ಸಂಬಂಧಪಟ್ಟಂತೆ ಕೊವಿಡ್ 19 ಲಸಿಕೆ ಕಾರ್ಯಭಾರದ ರಾಷ್ಟ್ರೀಯ ತಜ್ಞರ ತಂಡದೊಂದಿಗೆ ನಡೆಯಲಿರುವ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಮಯ ಮಿತಿಯನ್ನು ಕಡಿಮೆ ಮಾಡಬೇಕಾದರೆ ಹೇಗೆ ಮಾಡಬಹುದು? ಅದರಿಂದ ಆಗುವ ಉಪಯೋಗಗಳೇನು? ಎಂಬಿತ್ಯಾದಿ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗುವುದು. ಅದಕ್ಕಾಗಿ ವೈಜ್ಞಾನಿಕ ಪುರಾವೆಗಳನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೊವಿಶೀಲ್ಡ್ ಲಸಿಕೆಯ ಡೋಸ್ಗಳ ನಡುವಿನ ಅಂತರವನ್ನು ಪದೇಪದೆ ಬದಲಾವಣೆ ಮಾಡಲಾಗಿದ್ದು, ಸದ್ಯ ಒಂದು ಡೋಸ್ನಿಂದ ಇನ್ನೊಂದು ಡೋಸ್ಗೆ 84 ದಿನಗಳ ಅಂದರೆ 12-16ವಾರಗಳ ಅಂತರ ಇಡಲಾಗಿದೆ. ನಿನ್ನೆ ಈ ಬಗ್ಗೆ ಮಾತನಾಡಿದ್ದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್, ಕೊವಿಶೀಲ್ಡ್ ಲಸಿಕೆ ಡೋಸೇಜ್ಗಳ ನಡುವಿನ ಅಂತರವನ್ನು ತಕ್ಷಣಕ್ಕೆ ಬದಲಾವಣೆ ಮಾಡುವ ವಿಚಾರದಲ್ಲಿ ಯಾರಿಗೂ ಗೊಂದಲ, ಗಾಬರಿ ಬೇಡ. ಸದ್ಯ ಇರುವ ಅಂತರವನ್ನು ಕಡಿಮೆ ಮಾಡಬೇಕೆಂದರೆ ಕೆಲವೊಂದಿಷ್ಟು ವೈಜ್ಞಾನಿಕ ಅಧ್ಯಯನಗಳ ಅಗತ್ಯವಿರುತ್ತದೆ ಎಂದು ಹೇಳಿದ್ದರು. ಕೊರೊನಾ ರೂಪಾಂತರಿ ಸೋಂಕಿನ ನಿಯಂತ್ರಣದ ದೃಷ್ಟಿಯಿಂದಾದರೂ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು ಇನ್ನೂ ಸ್ವಲ್ಪ ಕಡಿಮೆ ಮಾಡಬೇಕು ಎಂದು ಕೆಲವು ಅಧ್ಯಯನಗಳು ಉಲ್ಲೇಖಿಸುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಪೌಲ್ ಹೀಗೆಂದು ಹೇಳಿಕೆ ನೀಡಿದ್ದರು.
ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಸಲಹೆಗಳು ಬಂದಿವೆ. ಹಾಗಂತ ಈ ಬಗ್ಗೆ ಜನರು ಗಾಬರಿಪಡುವ ಅಗತ್ಯವಿಲ್ಲ. ಲಸಿಕೆ ಬಗ್ಗೆ ಈಗಾಗಲೇ ತೆಗೆದುಕೊಂಡ ನಿರ್ಧಾರಗಳನ್ನೂ ತುಂಬ ಎಚ್ಚರಿಕೆಯಿಂದ ತೆಗೆದುಕೊಳ್ಳಲಾಗಿದೆ. ಮುಂದೂ ಕೂಡ ಸಾರ್ವಜನಿಕ ಹಿತದೃಷ್ಟಿ, ಕಾಳಜಿಯಿಂದಲೇ ಮುಂದಡಿ ಇಡಲಾಗುವುದು. ತಜ್ಞರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಗೌರವಿಸಿ ಎಂದು ಪೌಲ್ ಹೇಳಿದ್ದಾರೆ.
ಇದನ್ನೂ ಓದಿ: GST Council: ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ; ಕೊರೊನಾ ಲಸಿಕೆಯ ಮೇಲೆ ಶೇಕಡಾ 5 ಜಿಎಸ್ಟಿ ಮುಂದುವರಿಕೆ
(At Present No Change in the gap of two doses of Covishield Vaccine)