ದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರ (Ram Mandir, Ayodhya, Uttar Pradesh) ನಿರ್ಮಾಣದ ಪೂರ್ವ ತಯಾರಿ ಕಾರ್ಯಗಳು ಭರದಿಂದ ಸಾಗುತ್ತಿವೆ. ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ನಿಧಿ ಸಂಗ್ರಹ ಕಾರ್ಯಕ್ರಮವೂ ನಡೆಯುತ್ತಿದೆ. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಇದುವರೆಗೆ 1,511 ಕೋಟಿ ಮೊತ್ತವನ್ನು ಸಂಗ್ರಹಿಸಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ನ ಖಜಾಂಜಿ, ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ತಿಳಿಸಿದ್ದಾರೆ. (Sri Ram Janmabhoomi Tirth Trust) ರಾಮ ಕ್ಷೇತ್ರದ ನಿರ್ಮಾಣ ಹಾಗೂ ವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಟ್ರಸ್ಟ್ ಪರವಾಗಿ, ಸ್ವಾಮಿಗಳು ಶುಕ್ರವಾರ ಈ ಮಾಹಿತಿ ನೀಡಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ, ನಿಧಿ ಸಂಗ್ರಹ ಅಭಿಯಾನವು ಕಳೆದ ತಿಂಗಳು ಆರಂಭವಾಯಿತು. ಮಕರ ಸಂಕ್ರಾಂತಿಯಂದು ನಿಧಿ ಸಂಗ್ರಹ ಅಭಿಯಾನವನ್ನು ವಿಶ್ವ ಹಿಂದೂ ಪರಿಷತ್ (VHP) ಶುರು ಮಾಡಿತು. ಬಳಿಕ, 30 ದಿನಗಳ ಅವಧಿಯಲ್ಲಿ ದೇಶವ್ಯಾಪಿಯಾಗಿ 1,511 ಕೋಟಿ ರೂ. ಮೊತ್ತ ಸಂಗ್ರಹವಾಗಿದೆ. ಫೆಬ್ರವರಿ 11ರ ದಾಖಲೆಯಂತೆ ಒಟ್ಟು 1,511 ಕೋಟಿ ರೂ. ಹಣ ಸಂಗ್ರಹವಾಗಿದೆ ಎಂದು ಸ್ವಾಮಿ ಗೋವಿಂದ್ ದೇವ್ ಗಿರಿ ಹೇಳಿದ್ದಾರೆ.
4 ಲಕ್ಷ ಹಳ್ಳಿಗಳು ಹಾಗೂ 11 ಕೋಟಿ ಕುಟುಂಬಗಳು
ಸಂಪೂರ್ಣ ಭಾರತವು ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಧನಸಹಾಯ ಮಾಡುತ್ತಿದೆ. ನಾವು ನಿಧಿ ಸಂಗ್ರಹಕ್ಕಾಗಿ, 4 ಲಕ್ಷ ಹಳ್ಳಿಗಳನ್ನು ಹಾಗೂ 11 ಕೋಟಿ ಕುಟುಂಬಗಳನ್ನು ತಲುಪಿದ್ದೇವೆ. ಜನವರಿ 15ರಿಂದ ಈ ಅಭಿಯಾನ ನಡೆಸುತ್ತಿದ್ದೇವೆ. ಫೆಬ್ರವರಿ 27ರ ವರೆಗೆ ಅಭಿಯಾನ ಮುಂದುವರಿಸುತ್ತೇವೆ. ನಿಧಿ ಸಂಗ್ರಹ ಯೋಜನೆಗಾಗಿ ಈಗ ಸೂರತ್ಗೆ ಭೇಟಿ ನೀಡಿದ್ದೇನೆ. ಜನರು ದೇಣಿಗೆ ನೀಡುತ್ತಿದ್ದಾರೆ. 492 ವರ್ಷಗಳ ಬಳಿಕ, ಧರ್ಮಕ್ಕಾಗಿ ಕೆಲಸ ಮಾಡಲು ಜನತೆಗೆ ಅವಕಾಶ ಲಭಿಸಿದೆ ಎಂದು ದೇವ್ ಗಿರಿ ಸ್ವಾಮಿ ತಿಳಿಸಿದ್ದಾರೆ.
30 ದಿನಗಳಲ್ಲಿ 1,511 ಕೋಟಿ ರೂ. ಸಂಗ್ರಹ
ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ 30 ದಿನಗಳ ಅವಧಿಯಲ್ಲಿ ಬಹುದೊಡ್ಡ ಮೊತ್ತವನ್ನು ನಿಧಿ ಸಂಗ್ರಹ ಅಭಿಯಾನದ ಮೂಲಕ ಪಡೆದುಕೊಂಡಿದೆ. 2019 ನವೆಂಬರ್ನಲ್ಲಿ, ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರು ರಾಮ ಮಂದಿರ ಸಂಬಂಧ ತೀರ್ಪು ನೀಡಿದರು. ವಿವಾದಾತ್ಮಕವಾಗಿದ್ದ ಸಂಪೂರ್ಣ 2.7 ಎಕರೆಗಳ ಭೂಮಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನೀಡಲಾಯಿತು. ಬಳಿಕ, ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚೆನೆ ಮಾಡಲಾಯಿತು.
ಫೆಬ್ರವರಿ 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಶ್ರೀ ರಾಮ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸುವ ಬಗ್ಗೆ ತಿಳಿಸಿದರು. 2020ರ ಆಗಸ್ಟ್ 5ರಂದು ರಾಮ ಮಂದಿರದ ಶಿಲಾನ್ಯಾಸ ಪೂಜೆಯನ್ನು ಕೂಡ ಪ್ರಧಾನಿ ಮೋದಿ ನೆರವೇರಿಸಿದರು.
ಇದನ್ನೂ ಓದಿ: ಅಯೋಧ್ಯೆಗೆ ಉಡುಪಿಯ ರಥ: ಶ್ರೀರಾಮನ ಹೊತ್ತು ಮೆರೆಯುವ ರಥ ಉಡುಪಿಯಲ್ಲೇ ನಿರ್ಮಾಣ! ವಿವರ ಇಲ್ಲಿದೆ
Ayodhya Ram Mandir: ಅಯೋಧ್ಯೆ ರಾಮಮಂದಿರ ನಿರ್ಮಾಣ; ಕೂಡಿಟ್ಟಿದ್ದ ಹಣ ಮಂದಿರಕ್ಕೆ ದೇಣಿಗೆ ನೀಡಿದ ಬಡ ಮಕ್ಕಳು
Published On - 12:07 pm, Sat, 13 February 21