ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಪ್ರಧಾನಿ ಮೋದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಹಾರೈಕೆ
ಅಯೋಧ್ಯೆಯಲ್ಲಿ ನಾಳೆ (ಜ.22) ರಾಮಲಲ್ಲಾ ಮೂರ್ತಿ "ಪ್ರಾಣ ಪ್ರತಿಷ್ಠೆ" ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜ.21) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ.
ನವದೆಹಲಿ, ಜನವರಿ 21: ಅಯೋಧ್ಯೆಯಲ್ಲಿ (Ayodhya) ನಾಳೆ (ಜ.22) ರಾಮಲಲ್ಲಾ ಮೂರ್ತಿ “ಪ್ರಾಣ ಪ್ರತಿಷ್ಠೆ” ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಇಂದು (ಜ.21) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ನಾಳೆ (ಜ.22) ರಂದು ನಡೆಯುವ ಶ್ರೀರಾಮಲಲ್ಲಾ “ಪ್ರಾಣ ಪ್ರತಿಷ್ಠೆ” ಸಮಾರಂಭದಲ್ಲಿ ಭಾಗಿಯಾಗಲು ನೀವು ಕಠಿಣ ಅನುಷ್ಠಾನವನ್ನು ಕೈಗೊಂಡಿದ್ದೀರಿ.
ನೀವು ಕೈಗೊಂಡ 11-ದಿನಗಳ ಅನುಷ್ಠಾನ ಕೇವಲ ಪವಿತ್ರ ಧಾರ್ಮಿಕ ಆಚರಣೆಗಳ ಅನುಸರಣೆ ಮಾತ್ರವಲ್ಲ, ಇದು ತ್ಯಾಗ ಮನೋಭಾವದಿಂದ ಪ್ರೇರಿತವಾದ ಅತ್ಯುನ್ನತ ಆಧ್ಯಾತ್ಮಿಕ ಕಾರ್ಯವಾಗಿದೆ. ಇಂತಹ ಶುಭ ಸಂದರ್ಭದಲ್ಲಿ, ನೀವು ಅಯೋಧ್ಯೆಗೆ ಭೇಟಿ ನೀಡುತ್ತಿರುವುದಕ್ಕೆ ನಾನು ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
President Droupadi Murmu writes to Prime Minister Shri @narendramodi on the eve of Pran Pratishtha at Shri Ram Mandir in Ayodhya Dham. pic.twitter.com/r6sXXmdanT
— President of India (@rashtrapatibhvn) January 21, 2024
ಶ್ರೀರಾಮಮಂದಿರ ಉದ್ಘಾಟನೆಯಿಂದ ರಾಷ್ಟ್ರವ್ಯಾಪಿ ಹಬ್ಬದ ವಾತಾವರಣ ಮನೆ ಮಾಡಿದೆ. ನಮ್ಮ ರಾಷ್ಟ್ರ ಹೊಸತನದತ್ತ ಹೆಜ್ಜೆ ಇಡುತ್ತಿದ್ದು, ನಾವು ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಅದೃಷ್ಟ. ಪ್ರಭು ಶ್ರೀರಾಮನ ಧೈರ್ಯ, ಸಹಾನುಭೂತಿ ಮತ್ತು ಕರ್ತವ್ಯದ ಮೇಲಿನ ಅಚಲ ಭಕ್ತಿಯಂತಹ ಮೌಲ್ಯಗಳು ಭವ್ಯವಾದ ಮಂದಿರದ ಮೂಲಕ ಜನರಿಗೆ ತಲಪುತ್ತದೆ.
ಇದನ್ನೂ ಓದಿ: ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ ರಾಮ ಮಂದಿರ; ಪ್ರಧಾನಿ ಮೋದಿಗೆ ಇದುವೇ ವಿಶೇಷ ಉಡುಗೊರೆ
ಶ್ರೀರಾಮನು ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರತೀಕ. ಕೆಟ್ಟದ್ದರ ವಿರುದ್ಧ ಹೋರಾಡುವ, ಒಳ್ಳೆಯ ಆದರ್ಶವನ್ನು ಪ್ರತಿನಿಧಿಸುತ್ತಾನೆ. ನಮ್ಮ ರಾಷ್ಟ್ರೀಯ ಇತಿಹಾಸದ ಅನೇಕ ಅಧ್ಯಾಯಗಳು ಶ್ರೀರಾಮನ ಜೀವನ ಮತ್ತು ತತ್ವಗಳಿಂದ ಪ್ರಭಾವಿತವಾಗಿವೆ. ರಾಮ್ ಕಥಾದ ಆದರ್ಶಗಳು ರಾಷ್ಟ್ರ ನಿರ್ಮಾತೃಗಳಿಗೆ ಸ್ಫೂರ್ತಿ ನೀಡಿವೆ. ಗಾಂಧೀಜಿಯವರು ತಮ್ಮ ಕೊನೆ ಉಸಿರಿನವರೆಗೂ ರಾಮನಾಮ ಜಪಿಸಿದರು. ನನ್ನ ಕಷ್ಟದ ಸಮಯದಲ್ಲಿ ರಾಮನ ಹೆಸರು ನನ್ನ ರಕ್ಷಕವಾಗಿದೆ ಮತ್ತು ಈಗಲೂ ಆ ಹೆಸರು ನನ್ನನ್ನು ರಕ್ಷಿಸುತ್ತಿದೆ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು ಎಂದು ತಿಳಿಸಿದರು.
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಮುಹೂರ್ತ, ಶುಭ ಸಮಯ
ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ 12.29 ರಿಂದ 12.30 ರ ವರೆಗೆ (32 ಸೆಕೆಂಡುಗಳು) ಇರಲಿದ್ದು, ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದು, ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನೂ ನೆರವೇರಿಸಲಿದ್ದಾರೆ. ಕಾಶಿಯ ಹೆಸರಾಂತ ವೈದಿಕ ಆಚಾರ್ಯ ಗಣೇಶ್ವರ್ ದ್ರಾವಿಡ್ ಹಾಗೂ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ.
ಇವರಿಬ್ಬರ ನಿರ್ದೇಶನದಲ್ಲಿ 121 ವೈದಿಕ ಆಚಾರ್ಯರಿಂದ ಧಾರ್ಮಿಕ ಕ್ರಿಯೆ ನೆರವೇರಲಿದ್ದು, ಈ ವೇಳೆ 150 ಕ್ಕೂ ಹೆಚ್ಚು ಸಂಪ್ರದಾಯಗಳು, 50ಕ್ಕೂ ಹೆಚ್ಚು ಬುಡಕಟ್ಟು, ಕರಾವಳಿ, ದ್ವೀಪ, ಬುಡಕಟ್ಟು ಸಂಪ್ರದಾಯಗಳ ಸಂತರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿರಲಿದ್ದಾರೆ.
ರಾಮ ಮಂದಿರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ