ಭಾರತವನ್ನು ಅಸ್ಥಿರಗೊಳಿಸುವ ಶಕ್ತಿಗಳ ಬಿ-ಟೀಮ್; ಸಿಜೆಪಿ ವಿರುದ್ಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದ್ದಾರೆ. ನೀಟ್ (NEET) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಚಳವಳಿಯು ದೇಶವನ್ನು ಅಸ್ಥಿರಗೊಳಿಸುವ ಶಕ್ತಿಗಳ ಬಿ-ಟೀಮ್ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಸಂಘಟನೆಯ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತವನ್ನು ಅಸ್ಥಿರಗೊಳಿಸುವ ಶಕ್ತಿಗಳ ಬಿ-ಟೀಮ್; ಸಿಜೆಪಿ ವಿರುದ್ಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ
Dharmendra Pradhan

Updated on: Jun 23, 2026 | 5:57 PM

ನವದೆಹಲಿ, ಜೂನ್ 23: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಜೆಪಿ ಸಂಘಟನೆಯು ಪ್ರಜಾಪ್ರಭುತ್ವ ಮಾದರಿಯಲ್ಲಿ ದೇಶದ ಜನರಿಂದ ತಿರಸ್ಕರಿಸಲ್ಪಟ್ಟಿರುವ ವಿಧ್ವಂಸಕ ಶಕ್ತಿಗಳ ಬಿ-ಟೀಮ್​ನಂತೆ ಕೆಲಸ ಮಾಡುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಇಂದು ವಿವಿಧ ವಿಷಯಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಕೆಲವು ಸಂಘಟನೆಗಳು ದೇಶದ ಪ್ರಗತಿಯನ್ನು ಸಹಿಸದೆ ವ್ಯವಸ್ಥಿತ ಪಿತೂರಿ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಒಪ್ಪದ, ಚುನಾವಣೆಯಲ್ಲಿ ಜನರಿಂದ ತಿರಸ್ಕೃತಗೊಂಡಿರುವ ಕೆಲವು ಶಕ್ತಿಗಳ ಪರವಾಗಿ ಸಿಜೆಪಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಇದು ದೇಶದ ಇಮೇಜ್ ಅನ್ನು ಜಾಗತಿಕ ಮಟ್ಟದಲ್ಲಿ ಹಾಳುಮಾಡಲು ಮತ್ತು ಸಮಾಜದಲ್ಲಿ ಗೊಂದಲ ಮೂಡಿಸಲು ನಿರಂತರವಾಗಿ ಯತ್ನಿಸುತ್ತಿದೆ. ಪ್ರಜಾಪ್ರಭುತ್ವದ ಮಾರ್ಗದಲ್ಲಿ ಸೋತವರು ಈಗ ಇಂತಹ ಸಂಘಟನೆಗಳ ಮೂಲಕ ದೇಶದ ಪ್ರಗತಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ‘ಕಾಕ್ರೋಚ್ ಜನತಾ ಪಕ್ಷ’ದ ಶಾಂತಿಯುತ ಹೆಜ್ಜೆ: ಹೊಸ ವಕ್ತಾರರ ನೇಮಕ, ಜೂನ್ 6 ರಂದು ಬೃಹತ್ ಜಾಗೃತಿ ರ‍್ಯಾಲಿ

ಕೆಲವರಿಗೆ ದೇಶದ ಪ್ರಗತಿ ಮೇಲೆ ನಂಬಿಕೆಯಿಲ್ಲ:

ಪ್ರಜಾಪ್ರಭುತ್ವದಲ್ಲಿ ದೇಶದ ಜನರಿಂದ ತಿರಸ್ಕೃತಗೊಂಡವರು ಈಗ ವೇಷ ಮರೆಸಿಕೊಂಡು ಬಂದು ನಮ್ಮ ವ್ಯವಸ್ಥೆಯ ಬೆನ್ನು ಬಿದ್ದಿದ್ದಾರೆ. ದೇಶವನ್ನು ವಿಭಜಿಸಲು ಬಯಸುವವರ ಪರವಾಗಿ ಇವರು ಘೋಷಣೆಗಳನ್ನು ಕೂಗುತ್ತಾರೆ. ಇಂತಹವರನ್ನು ಈಗ ಗುರುತಿಸಲಾಗಿದೆ. ಕೆಲವು ಜನರಿಗೆ ದೇಶದ ಪ್ರಗತಿಯ ಮೇಲೆ ನಂಬಿಕೆಯಿಲ್ಲ ಎಂದು ಹಿರಿಯ ಬಿಜೆಪಿ ನಾಯಕರಾದ ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದಾರೆ.

ಇದನ್ನೂ ಓದಿ: NEET ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿ, ಯಾವುದೇ ರಾಜಿ ಬೇಡ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೂಚನೆ

ಸಿಜೆಪಿ ಆರೋಪವೇನು?:

ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಅದಾಗಿ ಒಂದು ತಿಂಗಳ ನಂತರ, ನಿನ್ನೆ ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳು ‘ನೀಟ್ ಮರುಪರೀಕ್ಷೆ’ ಬರೆದಿದ್ದರು. ಇದರ ಮರುದಿನವೇ ಶಿಕ್ಷಣ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಿಜೆಪಿ (CJP) ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us