ಪ್ಯಾಲೆಸ್ತೀನ್ ಪರ ಘೋಷಣೆ ವಿವಾದ; ಪೊಳ್ಳು ಬೆದರಿಕೆಗೆ ಹೆದರುವುದಿಲ್ಲ: ಅಸಾದುದ್ದೀನ್ ಓವೈಸಿ
ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ ‘ಜೈ ಪ್ಯಾಲೆಸ್ತೀನ್’ ಘೋಷಣೆ ಕೂಗಿದ್ದಕ್ಕೆ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಬೇಕು ಎಂದು ಹಲವಾರು ರಾಜಕೀಯ ನಾಯಕರು ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಅಧ್ಯಕ್ಷ , ನನ್ನನ್ನ ಹೇಳಿಕೆಗಳು ಖಂಡನೀಯ ಎಂದು ಸಂವಿಧಾನದಲ್ಲಿ ಹೇಳಿಲ್ಲ ಎಂದಿದ್ದಾರೆ.
ದೆಹಲಿ ಜೂನ್ 26: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮಾಡಿದ ಹೇಳಿಕೆ ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಓವೈಸಿ ಅವರು ಪ್ಯಾಲೆಸ್ತೀನ್‌ನ ಯುದ್ಧ ಪೀಡಿತ ಪ್ರದೇಶಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಇದನ್ನು ಆಡಳಿತಾರೂಢ ಪಕ್ಷದ ಸಂಸದರು ಖಂಡಿಸಿದ್ದಾರೆ.
ಐದು ಬಾರಿ ಹೈದರಾಬಾದ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಓವೈಸಿ ‘ಜೈ ತೆಲಂಗಾಣ’ ಮತ್ತು ‘ಜೈ ಪ್ಯಾಲೆಸ್ತೀನ್’ ಘೋಷಣೆಗಳನ್ನು ಕೂಗಿದ್ದರು. ಈ ಘೋಷಣೆಗೆ ಆಕ್ರೋಶ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ, ಓವೈಸಿ ಇಂಥಾ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನನಗೂ ಸಂವಿಧಾನದ ಬಗ್ಗೆ ಸ್ವಲ್ಪ ತಿಳಿದಿದೆ, ಈ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ.
ಅಸಾದುದ್ದೀನ್ ಓವೈಸಿ ಟ್ವೀಟ್
क्या आप #JaiPalestine का समर्थन करेंगे? pic.twitter.com/66dtAebFL0
— Asaduddin Owaisi Unofficial (@_asadowaisi) June 25, 2024
ಇದಕ್ಕೂ ಮೊದಲು, ಓವೈಸಿ ಅವರು ಸಂಸತ್ತಿನಲ್ಲಿ ‘ಜೈ ಪ್ಯಾಲೆಸ್ತೀನ್’ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದು, ತನ್ನ ಹೇಳಿಕೆಗಳು ಖಂಡನೀಯ ಎಂದು ಸಂವಿಧಾನದಲ್ಲಿ ಹೇಳಿಲ್ಲ ಎಂದು ಹೇಳಿದರು. ಇಂಥಾ ಹೇಳಿಕೆಗಳಿಗಾಗಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಬೇಕು ಎಂದು ಹಲವಾರು ರಾಜಕೀಯ ನಾಯಕರು ಒತ್ತಾಯಿಸಿದ್ದಕ್ಕೆ ಓವೈಸಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, “ಎಲ್ಲರೂ ತುಂಬಾನೇ ಹೇಳುತ್ತಿದ್ದಾರೆ. ನಾನು ಕೇವಲ ‘ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್’ ಎಂದು ಹೇಳಿದ್ದೇನೆ.. ಅದು ಹೇಗೆ ತಪ್ಪು? ಸಂವಿಧಾನದಲ್ಲಿ ಅದು ತಪ್ಪು ಅಂತ ಹೇಳಿರುವುದನ್ನು ತೋರಿಸಿ ಎಂದಿದ್ದಾರೆ.
‘ಜೈ ಪ್ಯಾಲೆಸ್ತೀನ್’ ಎಂದು ಯಾಕೆ ಹೇಳಿದ್ದೀರಿ ಎಂದು ಕಾರಣವನ್ನು ಕೇಳಿದಾಗ, ಓವೈಸಿ, “ವಹಾ ಕಿ ಆವಾಮ್ ಮಹ್ರೂಮ್ ಹೈ (ಅಲ್ಲಿನ ಜನರು ನಿರ್ಗತಿಕರಾಗಿದ್ದಾರೆ) ಮಹಾತ್ಮ ಗಾಂಧಿಯವರು ಪ್ಯಾಲೆಸ್ತೀನ್ ಬಗ್ಗೆ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಅದರ ಬಗ್ಗೆ ಓದಿ ನೋಡಿ ಎಂದು ಹೇಳಿದ್ದಾರೆ.
ಮಂಗಳವಾರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಸಂಸದರು ಬೇರೆ ದೇಶಕ್ಕಾಗಿ ಘೋಷಣೆಗಳನ್ನು ಕೂಗುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತುರ್ತು ಪರಿಸ್ಥಿತಿಯನ್ನು ಕರಾಳ ಅವಧಿ ಎಂದ ಸ್ಪೀಕರ್ ಓಂ ಬಿರ್ಲಾ; ಸದನದಲ್ಲಿ 2 ನಿಮಿಷ ಮೌನಾಚರಣೆ
“ನಮಗೆ ಪ್ಯಾಲೆಸ್ತೀನ್ ಅಥವಾ ಬೇರೆ ಯಾವುದೇ ದೇಶದೊಂದಿಗೆ ಯಾವುದೇ ದ್ವೇಷವಿಲ್ಲ, ಸಮಸ್ಯೆ ಏನೆಂದರೆ, ಪ್ರಮಾಣ ವಚನ ಸ್ವೀಕರಿಸುವಾಗ, ಯಾವುದೇ ಸದಸ್ಯರು ಬೇರೆ ದೇಶವನ್ನು ಹೊಗಳಿ ಘೋಷಣೆ ಕೂಗುವುದು ಸರಿಯೇ?. ನಮಗೆ ಬೇರೆ ಯಾವುದೇ ದೇಶದೊಂದಿಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಅದು ಸೂಕ್ತವಾಗಿದ್ದರೆ ನಾವು ನಿಯಮಗಳನ್ನು ಪರಿಶೀಲಿಸಬೇಕಾಗುತ್ತದೆ. ಕೆಲವು ಸದಸ್ಯರು ನನ್ನ ಬಳಿಗೆ ಬಂದು ಪ್ರಮಾಣವಚನದ ಕೊನೆಯಲ್ಲಿ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದರ ಬಗ್ಗೆ ದೂರು ನೀಡಿದ್ದಾರೆ” ಎಂದು ರಿಜಿಜು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ