
ನವದೆಹಲಿ, ಸೆಪ್ಟೆಂಬರ್ 3: ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ಕುರಿತು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಹೊರಡಿಸಿದ್ದ ಆದೇಶದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. “ಕಾನೂನು ವಿದ್ಯಾರ್ಥಿಗಳು ವಕೀಲರಾಗಿ ನೋಂದಾಯಿಸಿಕೊಂಡ ನಂತರವಷ್ಟೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಬಿಸಿಐ ಹಾಗೂ ರಾಜ್ಯ ಬಾರ್ ಕೌನ್ಸಿಲ್‌ಗಳಿಗಿರುತ್ತದೆ. ವಿದ್ಯಾರ್ಥಿಗಳಾಗಿದ್ದಾಗ ಅವರ ನಡವಳಿಕೆಯನ್ನು ನಿಯಂತ್ರಿಸುವ ಶಾಸನಬದ್ಧ ಅಧಿಕಾರ ಈ ಸಂಸ್ಥೆಗಳಿಗಿಲ್ಲ. ಆ ಅಧಿಕಾರ ಆ ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜುಗಳಿಗೆ ಮಾತ್ರ ಇರುತ್ತದೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನಲ್ಲೇನಿದೆ?:
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಬಿಸಿಐ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಗೊಳಿಸಿ, “ವಿದ್ಯಾರ್ಥಿಗಳ ಮೇಲಿನ ಶಿಸ್ತು ಕ್ರಮದ ಸಂಪೂರ್ಣ ಹಕ್ಕು ಅವರು ಓದುತ್ತಿರುವ ವಿಶ್ವವಿದ್ಯಾಲಯಕ್ಕೆ ಮಾತ್ರ ಸೇರಿದ್ದು” ಎಂದು ತೀರ್ಪು ನೀಡಿದೆ. ಬಿಸಿಐ ರಚನೆಯಾಗಿರುವ ಅಡ್ವೊಕೇಟ್ಸ್ ಆಕ್ಟ್, 1961 ಕಾಯ್ದೆಯು ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಯಾವುದೇ ನೇರ ಅಥವಾ ಪರೋಕ್ಷ ಅಧಿಕಾರವನ್ನು ಬಿಸಿಐಗೆ ನೀಡಿಲ್ಲ. ಬಿಸಿಐ ಕಾನೂನು ಶಿಕ್ಷಣದ ಮಾನದಂಡಗಳನ್ನು ಮಾತ್ರ ನಿಗದಿಪಡಿಸಬಹುದೇ ಹೊರತು ವಿದ್ಯಾರ್ಥಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಘಟಿಕೋತ್ಸವಕ್ಕೆ ಸಿಜೆಐ ಆಹ್ವಾನಿಸಬೇಡಿ ಎಂದಿದ್ದ ನಲ್ಸಾರ್ ವಿದ್ಯಾರ್ಥಿಗಳ ಈ ವರ್ಷದ ನೋಂದಣಿ ತಡೆಹಿಡಿದ ಬಾರ್ ಕೌನ್ಸಿಲ್!
“ಕಾನೂನು ವಿದ್ಯಾರ್ಥಿಯು ಪದವಿ ಮುಗಿಸಿ ವಕೀಲರಾಗಿ ನೋಂದಣಿ ಮಾಡಿಕೊಳ್ಳುವ ಹಂತದಲ್ಲಿ ಮಾತ್ರ ಬಿಸಿಐ ವ್ಯಾಪ್ತಿಗೆ ಬರುತ್ತದೆ. ನಿಯಮಾವಳಿಗಳ ಪ್ರಕಾರ ನೋಂದಣಿಗೆ ಅರ್ಹರೇ ಎಂದು ಆ ಹಂತದಲ್ಲಿ ಪರಿಶೀಲಿಸಬಹುದು. ಆದರೆ, ವ್ಯಾಸಂಗ ಮಾಡುತ್ತಿರುವಾಗಲೇ ನಿಮ್ಮನ್ನು ಭವಿಷ್ಯದಲ್ಲಿ ವಕೀಲರಾಗಿ ನೋಂದಾಯಿಸುವುದಿಲ್ಲ ಎಂದು ಮುಂಚಿತವಾಗಿಯೇ ನಿರ್ಬಂಧ ಹೇರುವ ಅಧಿಕಾರ ಬಿಸಿಐಗೆ ಇಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
“ಕಾನೂನು ಶಿಕ್ಷಣದ ಮಾನದಂಡಗಳನ್ನು ನಿಗದಿಪಡಿಸುವ ಮತ್ತು ಜಾರಿಗೊಳಿಸುವ ಅಧಿಕಾರ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಇದೆ. ಆದರೆ, ಕಾನೂನು ವಿದ್ಯಾರ್ಥಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಅದಕ್ಕಿಲ್ಲ. ಆ ಅಧಿಕಾರವು ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯಕ್ಕೆ ಮಾತ್ರ ಸೇರಿದ್ದಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಏನಿದು ಘಟನೆ?:
ಹೈದರಾಬಾದ್‌ನ ನಲ್ಸಾರ್ ವಿಶ್ವವಿದ್ಯಾಲಯದ ಪದವಿಪ್ರದಾನ ಸಮಾರಂಭಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವುದನ್ನು ವಿರೋಧಿಸಿ ಜುಲೈ 23ರಂದು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ನಾವು ಸಿಜೆಐ ಸೂರ್ಯಕಾಂತ್ ಅವರಿಂದ ಪದವಿ ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಯುವಜನತೆಯನ್ನು ಕಾಕ್ರೋಚ್ ಎಂದು ಕರೆದಿದ್ದು, ಜಂತರ್ ಮಂತರ್ ಪ್ರತಿಭಟನೆಯ ವಿಚಾರಣೆಯನ್ನು ಸರಿಯಾಗಿ ನಿಭಾಯಿಸದೇ ಇದ್ದಿದ್ದು ಸೇರಿದಂತೆ ಹಲವು ಕಾರಣಗಳನ್ನು ಆ ಪತ್ರದಲ್ಲಿ ನಮೂದಿಸಲಾಗಿತ್ತು.
ಇದನ್ನೂ ಓದಿ: ದೇಶಾದ್ಯಂತ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್ ರದ್ದು; ಸುಪ್ರೀಂ ಕೋರ್ಟ್ ಆದೇಶ
ಕಾನೂನು ವಿದ್ಯಾರ್ಥಿಗಳ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಐ (ಬಾರ್ ಕೌನ್ಸಿಲ್ ಆಫ್ ಇಂಡಿಯಾ), ಆಗಸ್ಟ್ 13ರಂದು ಆದೇಶ ಹೊರಡಿಸಿ 2026ರ ಬ್ಯಾಚ್‌ನ ನಲ್ಸಾರ್ ವಿದ್ಯಾರ್ಥಿಗಳನ್ನು ಯಾವುದೇ ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ವಕೀಲರಾಗಿ ನೋಂದಾಯಿಸಬಾರದು ಎಂದು ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ನಲ್ಸಾರ್ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದರು.
ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಸಿಜೆಐ ಪೀಠವು ಬಿಸಿಐ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ವಿದ್ಯಾರ್ಥಿಗಳಿಗಿದೆ ಎಂದು ಪ್ರತಿಪಾದಿಸಿ ಬಿಸಿಐ ಆದೇಶಕ್ಕೆ ತಡೆ ನೀಡಿತ್ತು. ನಂತರ ಬಿಸಿಐ ತನ್ನ ಆದೇಶ ಹಿಂಪಡೆದು ಅಧ್ಯಕ್ಷ ಮನನ್ ಮಿಶ್ರಾ ನಲ್ಸಾರ್ ವಿದ್ಯಾರ್ಥಿಗಳ ಬಳಿ ಕ್ಷಮೆ ಯಾಚಿಸಿದ್ದರು.
ಈ ವಿಷಯದಲ್ಲಿ ಬಿಸಿಐ ಅನಗತ್ಯವಾಗಿ ಮಧ್ಯಪ್ರವೇಶಿಸಿದ್ದಕ್ಕೆ ಸಿಜೆಐ ಸೂರ್ಯ ಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದರು. “ಈ ಘಟನೆಗೂ ಬಿಸಿಐಗೂ ಯಾವುದೇ ಸಂಬಂಧವಿಲ್ಲ. ವಿದ್ಯಾರ್ಥಿಗಳು ನನಗೆ ಪತ್ರ ಬರೆದಿದ್ದಾರೆ, ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ. ಆ ವಿದ್ಯಾರ್ಥಿಗಳ ವಿರುದ್ಧ ಸುತ್ತೋಲೆ ಹೊರಡಿಸಲು ಬಿಸಿಐಗೆ ಅಧಿಕಾರವಿಲ್ಲ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Thu, 3 September 26