AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಾದ್ಯಂತ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್ ರದ್ದು; ಸುಪ್ರೀಂ ಕೋರ್ಟ್ ಆದೇಶ

ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಲು ಉದ್ದೇಶಿಸಿದ್ದ ಸೆಪ್ಟೆಂಬರ್ 5ರ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆದ ತಕ್ಷಣ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ಗುಡ್ ನ್ಯೂಸ್ ನೀಡಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್‌ಗಳನ್ನು ದೇಶಾದ್ಯಂತ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಸಂವಿಧಾನದ ವಿಧಿ 142ರ ಅಡಿಯಲ್ಲಿ ತನಗಿರುವ ವಿಶೇಷ ಅಧಿಕಾರವನ್ನು ಬಳಸಿ, ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

ದೇಶಾದ್ಯಂತ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್ ರದ್ದು; ಸುಪ್ರೀಂ ಕೋರ್ಟ್ ಆದೇಶ
Supreme Court Image Credit source: PTI
ಸುಷ್ಮಾ ಚಕ್ರೆ
|

Updated on:Sep 01, 2026 | 4:34 PM

Share

ನವದೆಹಲಿ, ಸೆಪ್ಟೆಂಬರ್ 1: ಇತ್ತೀಚೆಗೆ ನಡೆದ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ (Supreme Court) ಇಂದು ರದ್ದುಗೊಳಿಸಿದೆ. ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಸಂವಿಧಾನದ ವಿಧಿ 142ರ ಅಡಿಯಲ್ಲಿ ತನಗಿರುವ ವಿಶೇಷ ಅಧಿಕಾರವನ್ನು ಬಳಸಿದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ರದ್ದುಗೊಳಿಸಿ ಆದೇಶಿಸಿದೆ.

ಅಪರಾಧ ಹಿನ್ನೆಲೆಯುಳ್ಳವರಿಗೆ ವಿನಾಯಿತಿಯಿಲ್ಲ:

ಆದರೆ, ಸಾಮಾನ್ಯ ವಿದ್ಯಾರ್ಥಿಗಳಿಗೆ ಈ ಆದೇಶದಿಂದ ರಕ್ಷಣೆ ಸಿಕ್ಕಿದ್ದರೂ, ಈ ಹಿಂದೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವ 2,873 ವ್ಯಕ್ತಿಗಳ ವಿರುದ್ಧ ದೆಹಲಿ ಪೊಲೀಸರು ಪ್ರತ್ಯೇಕವಾಗಿ ಹೊಸ ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹಾಗೇ, ನೀಟ್ (NEET) 2026ರ ಗೊಂದಲಗಳಿಂದಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಮುಂದಿನ 3 ತಿಂಗಳೊಳಗೆ ಸೂಕ್ತ ನೀತಿಯನ್ನು ರೂಪಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ; ಸೆಪ್ಟೆಂಬರ್​ 5ರ ಪ್ರತಿಭಟನೆ ಕೈಬಿಟ್ಟ ಸಿಜೆಪಿ

ಜುಲೈ 20ರಿಂದ 25ರವರೆಗೆ ದೆಹಲಿಯ ಜಂತರ್ ಮಂತರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಚಳವಳಿಯಲ್ಲಿ ಭಾಗವಹಿಸಿದ್ದರು. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಟ್ಟು 13 ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.

ವಿಚಾರಣೆಯ ವೇಳೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಇದೇ ರೀತಿಯ ನಿರ್ದೇಶನ ನೀಡಬೇಕೆಂದು ಸಾಲಿಸಿಟರ್ ಜನರಲ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿಗಳು, “ನ್ಯಾಯಾಲಯದ ಗಮನಕ್ಕೆ ಬಾರದ ಯಾವುದೇ ಎಫ್‌ಐಆರ್ ರಾಜ್ಯಗಳಲ್ಲಿದ್ದರೆ, ಅದನ್ನು ರದ್ದುಗೊಳಿಸುವ ವಿನಂತಿಗೆ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಬಾರದು” ಎಂದರು. ಈ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾಮಾನ್ಯ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ಭಾರಿ ದೊಡ್ಡ ರಿಲೀಫ್ ನೀಡಿದೆ.

ಇದನ್ನೂ ಓದಿ: ಅಹಿತಕರ ಘಟನೆ ನಡೆಯುತ್ತದೆಂದು ಹೇಳಲಾಗದು; ಸೆ. 5ರ ಸಿಜೆಪಿ ಪ್ರತಿಭಟನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

ಕೇಂದ್ರ ಸರ್ಕಾರದ ಸಕಾರಾತ್ಮಕ ಕ್ರಮಗಳು ಹಾಗೂ ಸುಪ್ರೀಂ ಕೋರ್ಟ್ ಹಸ್ತಕ್ಷೇಪವನ್ನು ಗೌರವಿಸಿ ಸೆಪ್ಟೆಂಬರ್ 5ರ ದೆಹಲಿ ಮೆರವಣಿಗೆಯನ್ನು ರದ್ದುಗೊಳಿಸಿರುವುದಾಗಿ ಸಿಜೆಪಿ ಸಂಘಟನೆ ಕೋರ್ಟ್‌ಗೆ ತಿಳಿಸಿತು. ಈ ನಿರ್ಧಾರವನ್ನು ಸ್ವಾಗತಿಸಿದ ಸಿಜೆಐ ಸೂರ್ಯ ಕಾಂತ್, ಪರಸ್ಪರ ನಂಬಿಕೆಯಿಂದ ಯಾವುದೇ ಸಮಸ್ಯೆಯನ್ನಾದರೂ ಬಗೆಹರಿಸಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Tue, 1 September 26

Follow Us