ಹೆಚ್ಕೆ ಪಾಟೀಲ್ ರಾಜೀನಾಮೆ ಹೇಳಿಕೆ ಬೆನ್ನಲ್ಲೇ ಸಿಎಂಗೆ ರಾಯರೆಡ್ಡಿ ಪತ್ರ: 3 ತಾಲೂಕು ಬರಪಟ್ಟಿಗೆ ಸೇರಿಸುವಂತೆ ಮನವಿ
ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಿನ್ನೆ ಹೆಚ್.ಕೆ ಪಾಟೀಲ್ ಎಚ್ಚರಿಕೆ ನೀಡಿದ್ದರು. ಶಾಸಕರ ರಾಜೀನಾಮೆ ಹೇಳಿಕೆ ಬೆನ್ನಲ್ಲೇ ಗದಗ ಜಿಲ್ಲೆಯ 3 ತಾಲೂಕು ಬರಪಟ್ಟಿಗೆ ಸೇರಿಸುವಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಸಿಎಂಗೆ ಪತ್ರ ಬರೆದಿದ್ದಾರೆ.

ಗದಗ, ಸೆಪ್ಟೆಂಬರ್ 21: ಗದಗ, ರೋಣ ಮತ್ತು ಮುಂಡರಗಿ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸುವಂತೆ ಕೋರಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದಾರೆ. ಭಾನುವಾರ ಮುಳಗುಂದದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಶಾಸಕ ಹೆಚ್.ಕೆ.ಪಾಟೀಲ್ ಭಾಗಿಯಾಗಿದ್ದರು. ಗದಗ ತಾಲೂಕನ್ನು ಬರದ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
ಪತ್ರದಲ್ಲಿ ಏನಿದೆ?
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಗದಗ ಜಿಲ್ಲೆಯ ಗದಗ, ರೋಣ ಮತ್ತು ಮುಂಡರಗಿ ತಾಲೂಕುಗಳಲ್ಲಿ ವಾಡಿಕೆ ಮಳೆಗೆ ಹೋಲಿಸಿದರೆ ಶೇಕಡಾ 47 ರಿಂದ 49 ರಷ್ಟು ಮಳೆ ಕೊರತೆ ದಾಖಲಾಗಿದೆ. ಜಿಲ್ಲಾಧಿಕಾರಿಗಳ ವರದಿಯ ಪ್ರಕಾರ (2026ರ ಜೂನ್ 1ರಿಂದ ಸೆಪ್ಟೆಂಬರ್ 17ರ ವರೆಗೆ), ಗದಗದಲ್ಲಿ 304.7 ಮಿ.ಮೀ. ವಾಡಿಕೆ ಮಳೆಗೆ ಬದಲಾಗಿ 154.9 ಮಿ.ಮೀ. (-49%), ಮುಂಡರಗಿಯಲ್ಲಿ 232.6 ಮಿ.ಮೀ. ವಾಡಿಕೆಗೆ ಬದಲಾಗಿ 120.9 ಮಿ.ಮೀ. (-48%) ಹಾಗೂ ರೋಣದಲ್ಲಿ 338.0 ಮಿ.ಮೀ. ವಾಡಿಕೆ ಮಳೆಗೆ ಬದಲಾಗಿ 179.8 ಮಿ.ಮೀ. (-47%) ವಾಸ್ತವ ಮಳೆಯಾಗಿದೆ. ಈ ಮಳೆ ಕೊರತೆಯಿಂದಾಗಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬರಪೀಡಿತ ತಾಲೂಕುಗಳ ಘೋಷಣೆಗೆ ವಿಳಂಬ: ಸಚಿವರ ಅಸಮಾಧಾನ
ಗದಗ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದ್ದು, ಸಿಎಂ ಸಹ ಖುದ್ದು ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ವಾಸ್ತವ ವರದಿ ಸಲ್ಲಿಸಿದ್ದರೂ ಮತ್ತು ಕೆಎಸ್‌ಎನ್‌ಡಿಎಂಸಿ ವೈಜ್ಞಾನಿಕ ಮೇಲ್ವಿಚಾರಣೆ ನಡೆಸುತ್ತಿದ್ದರೂ, ಈ ಮೂರೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದಿರುವುದು ರೈತರಲ್ಲಿ, ಶಾಸಕರಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಸರ್ಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರಮುಖ ಬೇಡಿಕೆಗಳು
ರೈತರ ಹಿತದೃಷ್ಟಿಯಿಂದ ಹಾಗೂ ಸರ್ಕಾರದ ಮೇಲಿನ ಜನಸಾಮಾನ್ಯರ ವಿಶ್ವಾಸ ಉಳಿಸಲು ಯಾವುದೇ ವಿಳಂಬವಿಲ್ಲದೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗೆ ಕೋರಿದ್ದಾರೆ.
- ಗದಗ, ರೋಣ ಮತ್ತು ಮುಂಡರಗಿ ತಾಲೂಕುಗಳನ್ನು ತಕ್ಷಣವೇ ಅಧಿಕೃತವಾಗಿ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು.
- ಕೆಎಸ್‌ಎನ್‌ಡಿಎಂಸಿ, ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಇತರ ಸಂಬಂಧಪಟ್ಟ ಇಲಾಖೆಗಳ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಅಧಿಸೂಚನೆ ಹೊರಡಿಸಬೇಕು.
- ರೈತರಿಗೆ ಸರ್ಕಾರದ ನಿಯಮಾವಳಿಯಂತೆ ಬೆಳೆ ನಷ್ಟ ಪರಿಹಾರ ಹಾಗೂ ಇತರ ಬರ ಪರಿಹಾರ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು.
- ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸಲು ತುರ್ತು ಕಾರ್ಯಗಳನ್ನು ಕೈಗೊಳ್ಳಬೇಕು.
- ಉದ್ಯೋಗದ ಕೊರತೆ ಎದುರಾಗದಂತೆ ನರೇಗಾ ಯೋಜನೆಯಡಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು.
- ಬರ ಘೋಷಣೆಯ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಲಭ್ಯವಾಗುವ ಪರಿಹಾರ ಹಾಗೂ ನೆರವನ್ನು ರೈತರಿಗೆ ತಲುಪಿಸಲು ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಚಿವ ಬಸವರಾಜ ರಾಯರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




