AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಟಿಪಿಎಲ್: ಎಡಿನ್‌ಬರ್ಗ್​ಗೆ ಚಾಂಪಿಯನ್ಸ್ ಕಿರೀಟ; 5ನೇ ಸ್ಥಾನ ಪಡೆದ ದ್ರಾವಿಡ್ ತಂಡ

ಚೊಚ್ಚಲ ಆವೃತ್ತಿಯ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ತಂಡ ಬೆಲ್‌ಫಾಸ್ಟ್ ವುಲ್ವ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಂಡ್ರೆಸ್ ಗೌಸ್ ಅವರ ಅಜೇಯ 90 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಬೆಲ್‌ಫಾಸ್ಟ್ ಪರ ಟಿಮ್ ಟೆಕ್ಟರ್ 84 ರನ್ ಗಳಿಸಿದರೆ, ಗ್ಲೆನ್ ಮ್ಯಾಕ್ಸ್‌ವೆಲ್ ವಿಫಲರಾದರು. ದ್ರಾವಿಡ್ ಒಡೆತನದ ಡಬ್ಲಿನ್ ಗಾರ್ಡಿಯನ್ಸ್ 5ನೇ ಸ್ಥಾನ ಪಡೆಯಿತು.

ಇಟಿಪಿಎಲ್: ಎಡಿನ್‌ಬರ್ಗ್​ಗೆ ಚಾಂಪಿಯನ್ಸ್ ಕಿರೀಟ; 5ನೇ ಸ್ಥಾನ ಪಡೆದ ದ್ರಾವಿಡ್ ತಂಡ
ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್Image Credit source: ETPL X
ಪೃಥ್ವಿಶಂಕರ
|

Updated on: Sep 21, 2026 | 3:50 PM

Share

ಚೊಚ್ಚಲ ಆವೃತ್ತಿಯ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್​ಗೆ ಅದ್ಧೂರಿ ತೆರೆ ಬಿದ್ದಿದೆ. ಮಿಚೆಲ್ ಸ್ಯಾಂಟ್ನರ್ ನೇತೃತ್ವದ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ನಾಯಕತ್ವದ ಬೆಲ್‌ಫಾಸ್ಟ್ ವುಲ್ವ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡಬ್ಲಿನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬೆಲ್‌ಫಾಸ್ಟ್ ವುಲ್ವ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ 18.4 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು.

ಗ್ಲೆನ್ ಮ್ಯಾಕ್ಸ್‌ವೆಲ್ ವಿಫಲ ಪ್ರದರ್ಶನ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬೆಲ್‌ಫಾಸ್ಟ್ ವುಲ್ವ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಪಾಲ್ ಸ್ಟಿರ್ಲಿಂಗ್ (8) ಔಟಾದರು. ಅಲ್ಲಿಂದ ಟಿಮ್ ಟೆಕ್ಟರ್ (84) ಮತ್ತು ಡೆವೊನ್ ಕಾನ್ವೇ (29) ಎರಡನೇ ವಿಕೆಟ್‌ಗೆ 63 ರನ್‌ಗಳ ಪಾಲುದಾರಿಕೆಯೊಂದಿಗೆ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿದರು. ನಂತರ ಬಂದ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ (3) ಬೇಗನೇ ವಿಕೆಟ್ ಒಪ್ಪಿಸಿದರೆ, ತಂಡದ ಸ್ಕೋರ್ 100 ರನ್ ದಾಟುತ್ತಿದ್ದಂತೆ ಲೋರ್ಕನ್ ಟಕರ್ (6) ಕೂಡ ಔಟಾದರು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನೀಡಿದ ಟೆಕ್ಟರ್ 62 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 84 ರನ್ ಗಳಿಸಿದರು. ಎಡಿನ್‌ಬರ್ಗ್ ಪರ ಟ್ರೆಂಟ್ ಬೌಲ್ಟ್ ಎರಡು ವಿಕೆಟ್ ಪಡೆದರೆ, ಟಾಮ್ ಕರನ್, ಮಾರ್ಕ್ ವ್ಯಾಟ್ ಮತ್ತು ಜೆಜೆ ಸ್ಮಟ್ಸ್ ತಲಾ ಒಂದು ವಿಕೆಟ್ ಪಡೆದರು.

ಆಂಡ್ರೆಸ್ ಗೌಸ್ ಗೆಲುವಿನ ಇನ್ನಿಂಗ್ಸ್

ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ತಂಡದ ಗೆಲುವಿನ ನಾಯಕ ಆಂಡ್ರೆಸ್ ಗೌಸ್ ಎಂದರೆ ತಪ್ಪಾಗಲಾರದು. ಸಾಧಾರಣ ಗುರಿ ಬೆನ್ನಟ್ಟಿದ ತಂಡದ ಪರ ಆಂಡ್ರೆಸ್ 61 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 90 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 151 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ತಂಡಕ್ಕೆ ರಾಸ್ ಎಡರ್ (23) ಮತ್ತು ಜೆಜೆ ಸ್ಮಟ್ಸ್ (15) 26 ರನ್‌ಗಳ ಜೊತೆಯಾಟದ ಆರಂಭ ನೀಡಿದರು.

ನಂತರ ಬಂದ ಗೌಸ್ ಮತ್ತು ಸ್ಮಟ್ಸ್ ಎರಡನೇ ವಿಕೆಟ್‌ಗೆ 53 ರನ್‌ಗಳನ್ನು ಸೇರಿಸಿದರು. ಗೌಸ್ ಬಂದ ತಕ್ಷಣ ಆಕ್ರಮಣಕಾರಿ ಆಟಕ್ಕೆ ಮುಂದಾದರು. ನಂತರ ಗೌಸ್ ಬ್ರೆಂಡನ್ ಮೆಕ್‌ಮುಲ್ಲನ್ (17) ಅವರೊಂದಿಗೆ ಮೂರನೇ ವಿಕೆಟ್‌ಗೆ 60 ರನ್‌ಗಳ ಜೊತೆಯಾಟವನ್ನಾಡಿದರು. ನಂತರ ಬಂದ ನಾಯಕ ಮಿಚೆಲ್ ಸ್ಯಾಂಟ್ನರ್, ಗೌಸ್ ಜೊತೆ ಸೇರಿಕೊಂಡು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಬೆಲ್‌ಫಾಸ್ಟ್ ಪರ ಮಾರ್ಕ್ ಅಡೈರ್, ಮ್ಯಾಥ್ಯೂ ಹಂಫ್ರೆ ಮತ್ತು ಗ್ಯಾವಿನ್ ಹೋಯ್ ತಲಾ ಒಂದು ವಿಕೆಟ್ ಪಡೆದರು.

ಸತತ 5 ಸೋಲುಗಳ ನಂತರ ಗೆಲುವಿನ ಖಾತೆ ತೆರೆದ ರಾಹುಲ್ ದ್ರಾವಿಡ್ ತಂಡ

5ನೇ ಸ್ಥಾನ ಪಡೆದ ದ್ರಾವಿಡ್ ತಂಡ

ಇನ್ನು ಈ ಪಂದ್ಯಾವಳಿಯಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಒಡೆತನದ ಹಾಗೂ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ನಾಯಕತ್ವದ ಡಬ್ಲಿನ್ ಗಾರ್ಡಿಯನ್ಸ್ ಕೂಡ ಆಡಿತ್ತು. ಆದರೆ ಆಡಿದ 10 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾದ ಅಶ್ವಿನ್ ಪಡೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಳ್ಳಲಷ್ಟೇ ಶಕ್ತವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us