S Jaishankar: ಬಿಬಿಸಿ ಭಾರತದ ಕಾನೂನನ್ನು ಗೌರವಿಸಲೇಬೇಕು; ಬ್ರಿಟನ್ ವಿದೇಶಾಂಗ ಸಚಿವರಿಗೆ ಜೈಶಂಕರ್ ಖಡಕ್ ಉತ್ತರ
ಬಿಬಿಸಿ ಕಚೇರಿಯ ತೆರಿಗೆ ಸಮಸ್ಯೆಗೆ ಸಂಬಂಧಿಸಿದಂತೆ ಬ್ರಿಟನ್ ವಿದೇಶಾಂಗ ಸಚಿವರು ಇಂದು ಜೈಶಂಕರ್ ಅವರ ಗಮನ ಸೆಳೆದರು. ಅದಕ್ಕೆ ದೃಢವಾಗಿ ಉತ್ತರಿಸಿದ ಜೈಶಂಕರ್, ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳು ಇಲ್ಲಿನ ಕಾನೂನಿಗೆ ಬದ್ಧರಾಗಿರಬೇಕು ಎಂದು ತಿಳಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ನವದೆಹಲಿ: ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳು ಇಲ್ಲಿನ ಕಾನೂನನ್ನು ಪಾಲಿಸಲೇಬೇಕು. ಬಿಬಿಸಿ ಕೂಡ ಇದಕ್ಕೆ ಹೊರತಲ್ಲ ಎಂದು ಬ್ರಿಟನ್ನ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ (James Cleverly) ಅವರಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಹೇಳಿದ್ದಾರೆ. ಇತ್ತೀಚೆಗೆ ಬಿಬಿಸಿ (BBC) ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ (IT Raid) ನಡೆಸಿದ್ದು ವ್ಯಾಪಕ ಚರ್ಚೆಗೀಡಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕೆ ಐಟಿ ದಾಳಿ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ಇವುಗಳನ್ನು ಜೈಶಂಕರ್ ನಿರಾಕರಿಸಿದ್ದಾರೆ. ಜಿ20 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಭಾರತಕ್ಕೆ ಬಂದಿರುವ ಕ್ಲೆವರ್ಲಿ ಬುಧವಾರ ಬೆಳಿಗ್ಗೆ ಜೈಶಂಕರ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಹಲು ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಬಿಬಿಸಿ ಕಚೇರಿ ಮೇಲಿನ ಐಟಿ ದಾಳಿ ವಿಚಾರವೂ ಪ್ರಸ್ತಾಪವಾಗಿದೆ.
ಬಿಬಿಸಿ ಕಚೇರಿಯ ತೆರಿಗೆ ಸಮಸ್ಯೆಗೆ ಸಂಬಂಧಿಸಿದಂತೆ ಬ್ರಿಟನ್ ವಿದೇಶಾಂಗ ಸಚಿವರು ಇಂದು ಜೈಶಂಕರ್ ಅವರ ಗಮನ ಸೆಳೆದರು. ಅದಕ್ಕೆ ದೃಢವಾಗಿ ಉತ್ತರಿಸಿದ ಜೈಶಂಕರ್, ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳು ಇಲ್ಲಿನ ಕಾನೂನಿಗೆ ಬದ್ಧರಾಗಿರಬೇಕು ಎಂದು ತಿಳಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ ಬ್ರಿಟನ್ನ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ. ಉಭಯ ದೇಶಗಳ ಬಾಂಧವ್ಯದ ಬಗ್ಗೆ ಹಾಗೂ ಯುವ ವೃತ್ತಿಪರರ ಯೋಜನೆ ಬಗ್ಗೆಯೂ ಮಾತುಕತೆ ನಡೆಸಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
Began the morning with a bilateral meeting with Foreign Secretary @JamesCleverly of the UK.
Reviewed the progress in our relationship since our last discussion. Noted in particular the commencement of the Young Professional Scheme. pic.twitter.com/R3aUvX1U4Z
— Dr. S. Jaishankar (@DrSJaishankar) March 1, 2023
ತೆರಿಗೆ ವಂಚನೆ ಆರೋಪದ ಮೇಲೆ ಲಂಡನ್ ಮೂಲದ ಬಿಬಿಸಿ ಮಾಧ್ಯಮ ಸಂಸ್ಥೆಯ ದೆಹಲಿ ಕಚೇರಿ ಮೇಲೆ ಫೆಬ್ರವರಿ 14 ಹಾಗೂ 15ರಂದು ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. 2012ರಿಂದ ಬಿಬಿಸಿ ಕಚೇರಿಯಲ್ಲಿ ದಾಖಲಾದ ಹಣಕಾಸು ವಿವರವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: BBC: ಬಿಬಿಸಿಯಿಂದ ಎಷ್ಟು ಮೊತ್ತದ ತೆರಿಗೆ ವಂಚನೆ ಆಗಿದೆ? ಐಟಿ ಮೂಲಗಳಿಂದ ತಿಳಿದ ಮಾಹಿತಿ ಇದು
ಬಿಬಿಸಿ ಅಂಗ ಸಂಸ್ಥೆಗಳ ವರ್ಗಾವಣೆ ವೆಚ್ಚ ಮತ್ತು ಅಂತಾರಾಷ್ಟ್ರೀಯ ತೆರಿಗೆ ಪಾವತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ದಾಳಿ ನಡೆದಿತ್ತು. ಬಿಬಿಸಿಗೆ ಈ ಪ್ರಕರಣದಲ್ಲಿ ಹಿಂದೆ ಕೆಲ ಬಾರಿ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಅದಕ್ಕೆ ಸಂಸ್ಥೆ ಸಹಕರಿಸಿರಲಿಲ್ಲ. ಹೀಗಾಗಿ, ಕಚೇರಿಗಳಿಗೆ ಹೋಗಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುವ ಕೆಲಸ ಮಾಡಿದ್ದಾರೆ. ಇದು ದಾಳಿಯಲ್ಲ, ಪರಿಶೀಲನೆಯಷ್ಟೇ ಎಂದು ಐಟಿ ಇಲಾಖೆ ಸ್ಪಷ್ಟನೆ ನೀಡಿತ್ತು.
ಸುಮಾರು ತಿಂಗಳ ಹಿಂದೆ ಗುಜರಾತ್ ಗಲಭೆ ಘಟನೆಗಳ ಬಗ್ಗೆ ಎರಡು ಸಂಚಿಕೆಯ ಸಾಕ್ಷ್ಯಚಿತ್ರಗಳನ್ನು ಬಿಬಿಸಿ ಪ್ರಸಾರ ಮಾಡಿತ್ತು. ಗಲಭೆ ಘಟನೆಗೆ ಸರ್ಕಾರ ಹೇಗೆ ಪ್ರಚೋದನೆ ಕೊಟ್ಟಿತ್ತು, ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಪಾತ್ರ ಏನಿತ್ತು ಎಂಬಿತ್ಯಾದಿ ಸಂಗತಿಯನ್ನು ಕೆಲ ಸಾಕ್ಷಿಗಳನ್ನು ಉಲ್ಲೇಖಿಸಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ