ಪ್ರತಿ ವರ್ಷ, ಭಾರತ-ಬಾಂಗ್ಲಾದೇಶ ಗಡಿಯ (India-Bangladesh border) ಕಳ್ಳಸಾಗಣೆ ಕಿಂಡಿ ಮಾರ್ಗಗಳ ಮೂಲಕ ನೆರೆಯ ದೇಶಕ್ಕೆ ಲಕ್ಷಾಂತರ ಗೋವುಗಳನ್ನು (bovines) ಭಾರತದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಈ ಕಳ್ಳಸಾಗಣೆ (smuggle) ದಂಧೆಯು ಬಹಳ ಲಾಭದಾಯಕವಾಗಿದೆ. ಏಕೆಂದರೆ ಭಾರತದ ಒಂದು ಗೋವು ಬಾಂಗ್ಲಾದೇಶದಲ್ಲಿ ಎರಡು ಪಟ್ಟು ಬೆಲೆಯನ್ನು ಪಡೆಯುತ್ತದೆ. ಉದಾಹರಣೆಗೆ, ಉತ್ತರ ಪ್ರದೇಶ ಅಥವಾ ಬಿಹಾರದಿಂದ ಸುಮಾರು 50,000 ರೂ.ಗೆ ಖರೀದಿಸಿದ ವಯಸ್ಕ ಗೋವು (ಹಸು ಅಥವಾ ಎಮ್ಮೆ – cow or buffalo) ಬಾಂಗ್ಲಾದೇಶದಲ್ಲಿ ಸಾಮಾನ್ಯ ಸಮಯದಲ್ಲಿ ಕನಿಷ್ಠ 90,000 ರೂ.ಗೆ ಮಾರಾಟವಾಗುತ್ತದೆ! ಮತ್ತು ಅದೇ ಈದ್ ಸಂದರ್ಭದಲ್ಲಿ 1.5 ಲಕ್ಷ ರೂ.ಗೂ ಮಾರಾಟವಾಗಿಬಿಡುತ್ತದೆ.
ಗೋವುಗಳನ್ನು ಉತ್ತರ ಭಾರತದಿಂದ ಟ್ರಕ್‌ಗಳಲ್ಲಿ ಸಾಗಿಸಲಾಗುತ್ತದೆ ಮತ್ತು ಅಂತರಾಷ್ಟ್ರೀಯ ಗಡಿಯ ಸಮೀಪವಿರುವ ‘ಅಧಿಪತ್ಯದ’ ಪ್ರದೇಶಗಳಲ್ಲಿ ಇಳಿಸಿಕೊಳ್ಳಲಾಗುತ್ತದೆ. ವಿಶೇಷವಾಗಿ ಮಾಲ್ಡಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಗಡಿ ವಿಸ್ತಾರಕ್ಕೂ ನದಿ ಹರಿವು ಇರುತ್ತವೆ. ಹೀಗಾಗಿ, ಅಲ್ಲಿ ಬೇಲಿಯಿಲ್ಲದ ಜಾಗಗಳಲ್ಲಿ ಈ ನಿಷ್ಪಾಪಿ ಜಾನುವಾರುಗಳು ಕಳ್ಳಸಾಗಣೆಗೊಳ್ಳುತ್ತದೆ.
ನಂತರ ಗೋವುಗಳನ್ನು ಗೊತ್ತುಪಡಿಸಿದ ನದಿ ಮಾರ್ಗಗಳ ಮೂಲಕವೇ ಬಾಂಗ್ಲಾದೇಶಕ್ಕೆ ಕೊಂಡೊಯ್ಯಲಾಗುತ್ತದೆ. ಆದರೆ ಕಳ್ಳಸಾಗಾಣಿಕೆದಾರರು ಸ್ಥಳೀಯ ರಾಜಕಾರಣಿಗಳು, ಗೂಂಡಾಗಳು, ಸ್ಥಳೀಯ ಪೊಲೀಸ್ ಮತ್ತು ಸ್ಥಳೀಯ ಆಡಳಿತಾಧಿಕಾರಿಗಳ ಆಶ್ರಯ ಪಡೆದಿರುತ್ತಾರೆ. ಬಿಎಸ್ಎಫ್ ಮತ್ತು ಕಸ್ಟಮ್ಸ್ ಅಧಿಕಾರಿಗಳೂ ಸೇರಿದಂತೆ ಅನೇಕ ವರದಿಗಳು ಇದನ್ನೇ ಹೇಳುತ್ತದೆ.
ಗಡಿಯಾಚೆ ಕಳ್ಳಸಾಗಣೆಯ ಮಾರ್ಗದುದ್ದಕ್ಕೂ ಪ್ರತಿಯೊಂದು ಜಾನುವಾರುಗಳಿಗೂ ಕಳ್ಳಸಾಗಾಣಿಕೆದಾರರಿಂದ ಲಂಚ ಪಡೆಯುತ್ತಾರೆ. ಮೂಲಗಳ ಪ್ರಕಾರ, ಒಬ್ಬ ಕಳ್ಳಸಾಗಾಣಿಕೆದಾರನು ಜಾನುವಾರುಗಳಿಂದ ಗಳಿಸುವ ತಲಾ ಆದಾಯದಲ್ಲಿ ಸರಿಸುಮಾರು 25,000 ರೂಗಳಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚವಾಗಿ 10,000 ರೂಗಳನ್ನು ನೀಡುತ್ತಾನೆ.
150 ಕೋಟಿ ರೂಪಾಯಿ ಲಂಚದ ಕಾಮಧೇನು ಈ ದಂಧೆ!
ಸೂಚ್ಯ ಅಂದಾಜಿನ ಪ್ರಕಾರ, ಪ್ರತಿ ವರ್ಷ ಸುಮಾರು 1.5 ಲಕ್ಷ ಗೋವುಗಳನ್ನು ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಈ ದಂಧೆಯಿಂದ ಪ್ರತಿ ವರ್ಷ ಸುಮಾರು 150 ಕೋಟಿ ರೂಪಾಯಿ ಲಂಚ ಸಂಗ್ರಹವಾಗುತ್ತದೆ; ಸ್ಥಳೀಯ ರಾಜಕಾರಣಿಗಳು, ಪೊಲೀಸರು, ಅಧಿಕಾರಿಗಳು ಮತ್ತು ಇತರರಿಗೆ ಈ ಲಂಚ ಪಾವತಿಸಲಾಗುತ್ತದೆ.
ಅಷ್ಟೇ ಅಲ್ಲ! ಪ್ರತಿ 100 ಜಾನುವಾರುಗಳನ್ನು ಯಶಸ್ವಿಯಾಗಿ ಕಳ್ಳಸಾಗಣೆ ಮಾಡಿದರೆ ಅಂತಿಟ್ಟುಕೊಂಡಾಗ ಅವುಗಳಲ್ಲಿ ಸುಮಾರು 15 ಜಾನುವಾರುಗಳನ್ನು ಬಿಎಸ್ಎಫ್ ಅಧಿಕಾರಿಗಳು ಬಂಧಿಸುತ್ತಾರೆ ಎಂಬ ಅಂದಾಜಿದೆ. ಏಕೆಂದರೆ ಬಿಎಸ್ಎಫ್ ಗಡಿಯುದ್ದಕ್ಕೂ ಅದರ ಪರಿಣಾಮಕಾರಿ ಜಾಗರೂಕತೆಯ ಪುರಾವೆಯಾಗಿ ತೋರಿಸಬೇಕಾಗುತ್ತದೆ.
ಅಂದರೆ ಇಲ್ಲೂ ದಂಧೆ ನಡೆಯುತ್ತದೆ. BSF ವಶಪಡಿಸಿಕೊಂಡ ಜಾನುವಾರುಗಳ ಗಾತ್ರವನ್ನು ಅವುಗಳ ನಿಜವಾದ ಗಾತ್ರಕ್ಕಿಂತ ಚಿಕ್ಕದಾಗಿದೆ ಎಂದು ಸ್ವಾಧೀನಪಡಿಸಿಕೊಂಡ ಮೆಮೊದಲ್ಲಿ ತೋರಿಸಲಾಗುತ್ತದೆ. ಇದರಿಂದಾಗಿ ಸ್ಥಳೀಯವಾಗಿ ಬಿಎಸ್‌ಎಫ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ದಾಳಿ, ಸ್ವಾಧೀನಪಡಿಸಿಕೊಂಡ ಜಾನುವಾರುಗಳಿಗೆ ಹರಾಜಿನ ವೇಳೆ ಅವುಗಳ ಮೌಲ್ಯವನ್ನು ಕಡಿಮೆ ಮಾಡಲಾಗುತ್ತದೆ.
ಇದಕ್ಕಿಂತ ಆಘಾತಕಾರಿ ಸಂಗತಿಯೆಂದರೆ BSF ಮತ್ತು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಜಾನುವಾರುಗಳನ್ನು ಅವುಗಳ ನೈಜ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಹರಾಜಿನಲ್ಲಿ ಭಾಗವಹಿಸಲು ಕೇವಲ ಕಳ್ಳಸಾಗಾಣಿಕೆದಾರರಿಗೆ ಮಾತ್ರ ಅವಕಾಶ ನೀಡುತ್ತಾರೆ. ಕಳ್ಳಸಾಗಾಣಿಕೆದಾರರು ತಾವು ಖರೀದಿಸುವ ಜಾನುವಾರುಗಳನ್ನು ಗಡಿಯಾಚೆಗಿನ ಸಜ್ಜುಗೊಳಿಸಿದ ಹರಾಜಿನಲ್ಲಿ ಬಾಂಗ್ಲಾದೇಶಕ್ಕೆ ಕಳುಹಿಸುತ್ತಾರೆ! ಸಾಮಾನ್ಯವಾಗಿ ಬಿಎಸ್ ಎಫ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ಹರಾಜಿನಲ್ಲಿ ಜಾನುವಾರುಗಳನ್ನು ಖರೀದಿಸುವ ಕಳ್ಳಸಾಗಾಣಿಕೆದಾರರಿಂದ ಹರಾಜು ಆದ ಜಾನುವಾರುಗಳ ಬೆಲೆಯ ಮೇಲೆ ಶೇಕಡಾ 10 ರಷ್ಟು ಮತ್ತೆ ಪೀಕುತ್ತಾರೆ ಎಂಬ ಆರೋಪವಿದೆ.
CBIನಿಂದ ದಂಧೆ ಬಯಲಾಗಿದ್ದು ಹೇಗೆ?
ಖಚಿತ ಮಾಹಿತಿ ಮತ್ತು ಕೆಲ ದೂರುಗಳ ಆಧಾರದ ಮೇಲೆ ಸಿಬಿಐ 2017 ರಲ್ಲಿ ಜಾನುವಾರು ಕಳ್ಳಸಾಗಣೆ ದಂಧೆಯ ತನಿಖೆಯನ್ನು ಪ್ರಾರಂಭಿಸಿತು. ಕೆಲವು ಹಿರಿಯ ಬಿಎಸ್‌ಎಫ್ ಅಧಿಕಾರಿಗಳ ಮೇಲೆ ಕಣ್ಣಿಟ್ಟು, ಖೆಡ್ಡಾಗೆ ಕೆಡವಿತು. ಕೊನೆಗೆ, ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಬೀಡುಬಿಟ್ಟಿರುವ ಬಿಎಸ್‌ಎಫ್‌ನ 83ನೇ ಬೆಟಾಲಿಯನ್‌ನ ಕಮಾಂಡೆಂಟ್ ಜಿಬು ಡಿ ಮ್ಯಾಥ್ಯೂ ( Jibu D Mathew) ಅವರನ್ನು ಕೇಂದ್ರ ತನಿಖಾ ಸಂಸ್ಥೆ-ಸಿಬಿಐ ಬಂಧಿಸಿತು.
2018 ರ ಜನವರಿಯಲ್ಲಿ ತನ್ನ ತವರು ರಾಜ್ಯವಾದ ಕೇರಳಕ್ಕೆ ಪ್ರಯಾಣಿಸುತ್ತಿದ್ದಾಗ ಮ್ಯಾಥ್ಯೂ 47 ಲಕ್ಷ ರೂ.ಗೂ ಹೆಚ್ಚು ನಗದು ಹಣದೊಂದಿಗೆ ಸಿಕ್ಕಿಬಿದ್ದಿದ್ದ. ಮ್ಯಾಥ್ಯೂ ತನ್ನ ಬಲಿ ಪತ್ತೆಯಾದ ನಗದು ಹಣವು ಕಳ್ಳಸಾಗಣೆದಾರರಿಂದ ಪಡೆದ ಲಂಚ ಎಂದು ಒಪ್ಪಿಕೊಂಡ.
ಆಗ ಸಿಬಿಐ ಈ ಬಗ್ಗೆ ಮತ್ತಷ್ಟು ಆಳಕ್ಕೆ ಇಳಿದು ತನಿಖೆ ಆರಂಭಿಸಿತು. ಬಂಗಾಳ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ದಾಳಿ ನಡೆಸಿತು. ಮತ್ತೊಬ್ಬ ಬಿಎಸ್‌ಎಫ್ ಕಮಾಂಡೆಂಟ್ ಸತೀಶ್ ಕುಮಾರ್ ಸಹ ಈ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಯಿತು.
ಸತೀಶ್ ಕುಮಾರ್, ಡಿಸೆಂಬರ್ 19 2015 ರಿಂದ ಏಪ್ರಿಲ್ 22 2017 ರವರೆಗೆ ಮಾಲ್ಡಾದಲ್ಲಿ BSF ನ 36 ನೇ ಬೆಟಾಲಿಯನ್‌ನ ಕಮಾಂಡೆಂಟ್ ಆಗಿದ್ದರು. ಕುಮಾರ್ ತನ್ನ ಸೇವಾವಧಿಯಲ್ಲಿ (ಒಂದೂವರೆ ವರ್ಷಕ್ಕಿಂತ ಕಡಿಮೆ) 36 ನೇ ಬೆಟಾಲಿಯನ್‌ನ ಸಿಒ ಆಗಿ, ಮತ್ತು ಅವರ ಸಿಬ್ಬಂದಿ 20,000 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಕಳ್ಳಸಾಗಾಣಿಕೆದಾರರು ಜಾನುವಾರುಗಳನ್ನು ಸಾಗಿಸಲು ಬಳಸುತ್ತಿದ್ದ ವಾಹನಗಳು ಮತ್ತು ಕಳ್ಳಸಾಗಾಣಿಕೆದಾರರನ್ನು ಬಂಧಿಸಲಾಗಿಲ್ಲ ಎಂದು ಸಿಬಿಐ ಮತ್ತೆಹಚ್ಚಿತು.
ನವೆಂಬರ್ 2020 ರಲ್ಲಿ ಕುಮಾರ್ ಸತೀಶ್ ಕುಮಾರನನ್ನು ಸಿಬಿಐ ಬಂಧಿಸಿದೆ. ಆತನ ಆಸ್ತಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ.
ಅನುಬ್ರತಾ ಮಂಡಲ್ ಈ ದಂಧೆಯ ಕಿಂಗ್‌ಪಿನ್ ಮತ್ತು ಇಡೀ ದಂಧೆಯ ಆದಾಯವು ಅವನಿಗೇ ಹೋಗುತ್ತದೆ ಎಂದು ಕುಮಾರ್ ಸಿಬಿಐ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಜೊತೆಗೆ, ಕುಮಾರ್ ಬಂಗಾಳ ಮೂಲದ ಮೂವರು ಜಾನುವಾರು ವ್ಯಾಪಾರಿಗಳನ್ನು ಸಹ ಹೆಸರಿಸಿದ್ದಾರೆ- ಮುಹಮ್ಮದ್ ಇನಾಮುಲ್ ಹಕ್, ಅನಾರುಲ್ ಶೇಖ್ ಮತ್ತು ಮುಹಮ್ಮದ್ ಗುಲಾಮ್ ಮುಸ್ತಫಾ. ಇವರೆಲ್ಲ ಮಂಡಲ್ ಜೊತೆ ಸಂಪರ್ಕ ಹೊಂದಿದ್ದವರೇ.
ತೃಣಮೂಲ (trinamool congress) ಅಧಿನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರ ಸೋದರಳಿಯ ಅಭಿಷೇಕ್ ಅವರ ನಿಕಟವರ್ತಿಯಾಗಿದ್ದ ಅಂದಿನ ತೃಣಮೂಲ ನಾಯಕ ವಿನಯ್ ಮಿಶ್ರಾ ಅವರ ಮೇಲೂ ಸಿಬಿಐ ಗುರಿಯಿಟ್ಟಿದೆ. 2020 ರ ಸೆಪ್ಟೆಂಬರ್‌ನಲ್ಲಿ ಸಿಬಿಐ ತನ್ನ ವಿರುದ್ಧ ಪ್ರಕರಣ ದಾಖಲಿಸುವ ಕೆಲವು ದಿನಗಳ ಮೊದಲು ಮಿಶ್ರಾ ದೇಶದಿಂದ ಪರಾರಿಯಾಗಿದ್ದರು. ಅವರು ತರುವಾಯ ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದರು ಮತ್ತು ಈಗ ವನವಾಟು (Vanuatu) ನಾಗರಿಕರಾಗಿದ್ದಾರೆ!
ಬಂಗಾಳದ ಆರು ಪೊಲೀಸ್ ಅಧಿಕಾರಿಗಳು ಕೂಡ ಸಿಬಿಐ ಕಣ್ಗಾವಲಿನಲ್ಲಿ:
ಅನುಬ್ರತಾ ಮಂಡಲ್‌ನ ಅಂಗರಕ್ಷಕರಲ್ಲಿ ಒಬ್ಬರಾಗಿದ್ದ ಬಂಗಾಳದ ಪೊಲೀಸ್ ಕಾನ್ಸ್ಟೇಬಲ್ ಸೈಗಲ್ ಹೊಸೈನ್ ಅವರು ಮಂಡಲ್ ಪರವಾಗಿ ಲಂಚವನ್ನು ಸಂಗ್ರಹಿಸುತ್ತಿದ್ದರು ಎಂದು ಸತೀಶ್ ಕುಮಾರ್ ಮತ್ತು ಕೆಲ ಗೋವು ಕಳ್ಳಸಾಗಣೆದಾರರು ಸಿಬಿಐಗೆ ತಿಳಿಸಿದ್ದಾರೆ.
ಈ ವರ್ಷದ ಜೂನ್‌ನಲ್ಲಿ ಹೊಸೈನ್ ನನ್ನು ಬಂಧಿಸಲಾಗಿದೆ. ಪೊಲೀಸ್ ಕಾನ್‌ಸ್ಟೆಬಲ್ ಸುಮಾರು 150 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯ ಎಂಬುದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದರು. ಮಂಡಲ್ ಪರವಾಗಿ ಕಳ್ಳಸಾಗಣೆದಾರರಿಂದ ಹಣ ಸಂಗ್ರಹಿಸುತ್ತಿದ್ದರು ಎಂದೂ ಹೊಸೈನ್ ತನ್ನ ವಿಚಾರಣೆ ವೇಳೆ ಸಿಬಿಐ ಗೆ ತಿಳಿಸಿದ್ದಾನೆ.
ತನಿಖೆಯ ಆಧಾರದ ಮೇಲೆ, ಸಿಬಿಐ ಅಧಿಕಾರಿಗಳು ಬಂಗಾಳದ 13 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಇದರಲ್ಲಿ ಮಂಡಲ್‌ನ ಸಹಾಯಕರಾದ ಕರೀಂ ಖಾನ್ ಮತ್ತು ಜಿಯಾವುಲ್ ಹಕ್ ಮತ್ತು ಅನುಬ್ರತ ಮಂಡಲ್‌ಗೆ ಹತ್ತಿರವಿರುವ ಕಲ್ಲು ವ್ಯಾಪಾರಿ ತುಳು ಮಂಡಲ್ ಅವರ ನಿವಾಸಗಳು ಸೇರಿವೆ. ದಾಳಿಯ ವೇಳೆ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. (Source: swarajyamag)