ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಕೊವ್ಯಾಕ್ಸಿನ್ ಕೊಡಬಾರದಂತೆ.. ಇದೆಂಥ ವರಸೆ!
ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಕೊವ್ಯಾಕ್ಸಿನ್ ಕೊರೊನಾ ಲಸಿಕೆ ನೀಡುವಂತಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ. ಆದರೆ, ವಾಸ್ತವವಾಗಿ ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಲಸಿಕೆಯ ಅವಶ್ಯಕತೆ ಹೆಚ್ಚಿರುತ್ತದೆ ಅಲ್ಲವೇ?
ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ನಿರೀಕ್ಷಿತ ಮಟ್ಟ ತಲುಪುತ್ತಿಲ್ಲ ಎಂಬ ವರದಿಗಳ ಬೆನ್ನಲ್ಲೇ, ಭಾರತ್ ಬಯೋಟೆಕ್ ಸಂಸ್ಥೆ ಹೊಸ ಪ್ರಕಟಣೆ ಹೊರಡಿಸಿದೆ. ನೂತನ ಪ್ರಕಟಣೆಯಲ್ಲಿ ಯಾರಿಗೆ ಲಸಿಕೆ ನೀಡಬಾರದು ಎನ್ನುವುದನ್ನು ತಿಳಿಸಲಾಗಿದೆ. ಕೆಲ ದಿನಗಳ ಹಿಂದೆ ನೀಡಲಾಗಿದ್ದ ಪ್ರಕಟಣೆಯಲ್ಲಿ ಇರದ ಹೊಸ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ.
ಆದರೆ, ರೋಗ ನಿರೋಧಕ ಶಕ್ತಿಯ ಕೊರತೆ ಇರುವವರು ಲಸಿಕೆ ಪಡೆಯಬಹುದು ಎನ್ನುವುದಾಗಿ ಅಂದು ಹೇಳಿದ್ದವರು ಈಗ ಉಲ್ಟಾ ಹೊಡೆದಿರುವುದು ಕೆಲ ಗೊಂದಲಗಳಿಗೆ ಕಾರಣವಾಗಿದೆ. ನೂತನ ಪ್ರಕಟಣೆಯ ಪ್ರಕಾರ ರೋಗ ನಿರೋಧಕ ಶಕ್ತಿಯ ಕೊರತೆ ಉಳ್ಳವರು, ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಔಷಧಿಗಳನ್ನು ಪಡೆಯುತ್ತಿರುವವರು ಮತ್ತು ಅಲರ್ಜಿ ಸಮಸ್ಯೆಗಳಿಂದ ಬಳಲುತ್ತಿರುವವರು ಕೊವ್ಯಾಕ್ಸಿನ್ ಲಸಿಕೆ ಪಡೆಯಬೇಡಿ ಎಂದು ತಿಳಿಸಲಾಗಿದೆ.
ವಿಪರ್ಯಾಸವೆಂದರೆ ಈ ಕುರಿತು ಕೆಲ ದಿನಗಳ ಹಿಂದೆಯಷ್ಟೇ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ ರೋಗ ನಿರೋಧಕ ಶಕ್ತಿಯ ಕೊರತೆ ಇರುವವರು ಕೊರೊನಾ ಲಸಿಕೆ ಪಡೆಯಬೇಕು. ಅವರಲ್ಲಿ ಲಸಿಕೆಯ ಪರಿಣಾಮ ಕಡಿಮೆ ಆಗಬಹುದು. ಆದರೂ ಲಸಿಕೆ ಪಡೆಯಲು ಅಭ್ಯಂತರವಿಲ್ಲ ಎಂದು ಹೇಳಿತ್ತು. ಸದ್ಯ ಲಸಿಕೆ ವಿತರಣೆ ಆರಂಭವಾದ 2 ದಿನದಲ್ಲೇ ಭಾರತ್ ಬಯೋಟೆಕ್ ಹೊಸ ಪ್ರಕಟಣೆ ಹೊರಡಿಸುವುದು ಚರ್ಚೆಗೆ ಗ್ರಾಸವಾಗಿದೆ. ಮೊದಲೇ 3 ಹಂತದ ಪರೀಕ್ಷೆ ಮುಗಿಸದ ಕೊರೊನಾ ಲಸಿಕೆ ಎಂಬ ಹಣೆಪಟ್ಟಿ ಕೊವ್ಯಾಕ್ಸಿನ್ಗೆ ಇರುವ ಕಾರಣ ಜನರು ಮತ್ತೆ ಗೊಂದಲಕ್ಕೀಡಾಗಿದ್ದಾರೆ.
ಭಾರತ್ ಬಯೋಟೆಕ್ ತಿಳಿಸಿರುವಂತೆ ಈ ಕೆಳಗಿನವರು ಕೊರೊನಾ ಲಸಿಕೆ ಸ್ವೀಕರಿಸುವಂತಿಲ್ಲ 1. ಅಲರ್ಜಿ ಸಮಸ್ಯೆ ಉಳ್ಳವರು 2. ಜ್ವರದಿಂದ ಬಳಲುತ್ತಿರುವವರು 3. ರಕ್ತಸ್ರಾವಕ್ಕೆ ಸಂಬಂಧಿಸಿದ ದೋಷ ಹೊಂದಿದವರು ಅಥವಾ ರಕ್ತವನ್ನು ತೆಳುಗೊಳಿಸಲು (ಬ್ಲಡ್ ಥಿನ್ನರ್) ಔಷಧಿ ತೆಗೆದುಕೊಳ್ಳುತ್ತಿರುವವರು 4. ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಹೊಂದಿರುವವರು 5. ಗರ್ಭಿಣಿಯರು 6. ಎದೆಹಾಲು ಉಣಿಸುತ್ತಿರುವ ತಾಯಂದಿರು 7. ಬೇರೆ ಕೊರೊನಾ ಲಸಿಕೆ ಪಡೆದವರು 8. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆ ಉಳ್ಳವರು
ಕೊರೊನಾ ಲಸಿಕೆ ಪಡೆಯುವ ಮುನ್ನ ಫಲಾನುಭವಿಗಳು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ವೈದ್ಯರಿಗೆ ತೋರಿಸುವಂತೆ ಭಾರತ್ ಬಯೋಟೆಕ್ ಸಲಹೆ ನೀಡಿದೆ. ಇದರಲ್ಲಿ ಕೆಲ ಅಂಶಗಳನ್ನು ಮೊದಲೇ ತಿಳಿಸಲಾಗಿತ್ತಾದರೂ ಲಸಿಕೆ ವಿತರಣೆ ಆರಂಭವಾದ 2 ದಿನದಲ್ಲೇ ಪ್ರಕಟಣೆ ಹೊರಡಿಸಿರುವುದು ಒಂದಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಕೇಳುತ್ತಿರುವ ಕೆಲ ಪ್ರಮುಖ ಪ್ರಶ್ನೆಗಳಿವು..
1. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಕೊವ್ಯಾಕ್ಸಿನ್ ಕೊರೊನಾ ಲಸಿಕೆ ನೀಡುವಂತಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ. ಆದರೆ, ವಾಸ್ತವವಾಗಿ ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಲಸಿಕೆಯ ಅವಶ್ಯಕತೆ ಹೆಚ್ಚಿರುತ್ತದೆ ಅಲ್ಲವೇ? 2. ಕೇವಲ ಆರೋಗ್ಯವಂತರಿಗೆ ಮಾತ್ರ ಕೊರೊನಾ ಲಸಿಕೆ ನೀಡುವುದಾದರೆ ಅದರಿಂದಾಗುವ ಪ್ರಯೋಜನ ಏನು? 3. ಆರಂಭದಲ್ಲಿ ಕೇಂದ್ರ ಸರ್ಕಾರ ಬೇರೆಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆಯನ್ನು ಆದ್ಯತೆಯ ಮೇಲೆ ನೀಡುವುದಾಗಿ ಹೇಳಿತ್ತು. ಆದರೆ, ಈಗ ಭಾರತ್ ಬಯೋಟೆಕ್ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಲಸಿಕೆಯಿಂದ ದೂರ ಇಡುವಂತೆ ಹೇಳಿದೆ. ಇದು ಯೋಜನೆಯ ಉದ್ದೇಶವನ್ನೇ ಬುಡಮೇಲು ಮಾಡಿದಂತಲ್ಲವೇ? 4. ಮೂರನೇ ಹಂತ ಮುಗಿಸುವ ಮೊದಲೇ ಲಸಿಕೆ ವಿತರಣೆಗೆ ಅವಕಾಶ ನೀಡಲಾಗಿದೆ ಎಂಬ ಕಾರಣಕ್ಕೆ ಕೊವ್ಯಾಕ್ಸಿನ್ ಕುರಿತು ಈಗಾಗಲೇ ಅಪಸ್ವರಗಳಿವೆ. ಈಗ ಹೊಸ ನಿಯಮಾವಳಿಗಳನ್ನು ಹೊರಡಿಸಿರುವುದು ಜನರಲ್ಲಿ ಮತ್ತಷ್ಟು ಗೊಂದಲ ಹುಟ್ಟಿಸಲೂ ಕಾರಣವಾಗಿದೆ. ಈ ವಿಚಾರವನ್ನು ಸಂಸ್ಥೆ ಮೊದಲೇ ಪರಿಶೀಲಿಸಿರಲಿಲ್ಲವೇ?
ಈ ಗೊಂದಲಗಳಿಗೆ ವೈದ್ಯಕೀಯ ಭಾಷೆಯ ಉತ್ತರಗಳಿಗಿಂತಲೂ ಮಿಗಿಲಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಣೆ ನೀಡುವ ಅವಶ್ಯಕತೆ ಇದೆ. ಇದನ್ನು ಭಾರತ್ ಬಯೋಟೆಕ್ ಸಂಸ್ಥೆಯೇ ನಿರ್ವಹಿಸುತ್ತದೋ? ಅಥವಾ ಕೇಂದ್ರ ಸರ್ಕಾರವೇ ಮಾಡಲಿದೆಯೋ? ಎಂದು ಕಾದು ನೋಡಬೇಕಿದೆ.
ಕೊರೊನಾ ಲಸಿಕೆಯೇನೋ ಬಂತು.. ಆದರೆ, ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಜನರೇ ಬರುತ್ತಿಲ್ಲ.. ಏನಿರಬಹುದು ಕಾರಣ?