Bharat Jodo Yatra Highlights: ಸಮಾರೋಪ ಇಂದು; ರಾಹುಲ್ ಪಾದಯಾತ್ರೆಯ ಮುಖ್ಯಾಂಶಗಳಿವು
Rahul Gandhi Led Bharat Jodo Yatra Specialties: ಲೋಕಸಭೆ ಚುನಾವಣೆಗೆ ಒಂದು ವರ್ಷ ಇರುವ ಮುನ್ನ ಭಾರತ್ ಜೋಡೋ ಯಾತ್ರೆಗೆ ಬಹುತೇಕ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಪಾದಯಾತ್ರೆ ಹೋದ ಕಡೆಯಲೆಲ್ಲಾ ನೂರಾರು, ಸಾವಿರಾರು ಜನರು ಸೇರಿದ್ದಾರೆ. ರಾಹುಲ್ ಗಾಂಧಿ ಜೊತೆ ಬಹಳ ಮಂದಿ ಹೆಜ್ಜೆ ಹಾಕಿದ್ದಾರೆ.
ಶ್ರೀನಗರ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ (Bharat Jodo Yatra) ನಿನ್ನೆ ಭಾನುವಾರ ಅಂತ್ಯಗೊಂಡಿತು. ಇಂದು ಸೋಮವಾರ ಸಮಾರೋಪ ಸಮಾರಂಭ ನಡೆಯಲಿದೆ. ಸೆಪ್ಟಂಬರ್ 7ರಂದು ದಕ್ಷಿಣ ತುದಿ ಕನ್ಯಾಕುಮಾರಿಯಿಂದ ಆರಂಭಗೊಂಡ ಪಾದಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಿ ಉತ್ತರ ತುದಿ ಕಾಶ್ಮೀರದಲ್ಲಿ ಸಮಾಪ್ತಿಗೊಂಡಿದೆ. ಶ್ರೀನಗರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಿದ್ದು ಯಾತ್ರೆಗೆ ಫೈನಲ್ ಟಚ್ ಕೊಟ್ಟಂತಾಗಿದೆ.
ಲೋಕಸಭೆ ಚುನಾವಣೆಗೆ ಒಂದು ವರ್ಷ ಇರುವ ಮುನ್ನ ಭಾರತ್ ಜೋಡೋ ಯಾತ್ರೆಗೆ ಬಹುತೇಕ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಪಾದಯಾತ್ರೆ ಹೋದ ಕಡೆಯಲೆಲ್ಲಾ ನೂರಾರು, ಸಾವಿರಾರು ಜನರು ಸೇರಿದ್ದಾರೆ. ರಾಹುಲ್ ಗಾಂಧಿ ಜೊತೆ ಬಹಳ ಮಂದಿ ಹೆಜ್ಜೆ ಹಾಕಿದ್ದಾರೆ.
ಇಂದಿನ ಕಾರ್ಯಕ್ರಮಗಳೇನು?
ನಿನ್ನೆ ಪಾದಯಾತ್ರೆ ಮುಕ್ತಾಯವಾಗಿದೆ. ಇಂದು ಶ್ರೀನಗರ್ನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ ಭಾರತ್ ಜೋಡೋ ಯಾತ್ರೆ ಅಧಿಕೃತವಾಗಿ ತೆರೆಬೀಳಲಿದೆ. ಅದಾದ ಬಳಿಕ ಇದೇ ನಗರದಲ್ಲಿರುವ ಶೇರ್–ಎ–ಕಾಶ್ಮೀರ್ ಸ್ಟೇಡಿಯಂನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಹಾಗೂ ಇತರ ಹಲವು ರಾಜಕೀಯ ಪಕ್ಷಗಳ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಎನ್ಡಿಎಯೇತರ 21 ರಾಜಕೀಯ ಪಕ್ಷಗಳಿಗೆ ಆಹ್ವಾನ
ಭಾರತ್ ಜೋಡೋ ಯಾತ್ರೆಯ ಸಮಾರೋಪಕ್ಕೆ ಕಾಂಗ್ರೆಸ್ ಪಕ್ಷ ಬಹುತೇಕ ವಿಪಕ್ಷಗಳಿಗೆ ಆಹ್ವಾನ ನೀಡಿದೆ. ಆಮ್ ಆದ್ಮಿ, ತೆಲಂಗಾಳ ರಾಷ್ಟ್ರೀಯ ಸಮಿತಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ 21 ರಾಜಕೀಯ ಪಕ್ಷಗಳಿಗೆ ಆಮಂತ್ರಣ ಹೋಗಿದೆ. ಆದರೆ, ಎಐಎಡಿಎಂಕೆ, ವೈಎಸ್ಆರ್ ಕಾಂಗ್ರೆಸ್, ಬಿಜೆಡಿ, ಎಐಎಂಐಎಂ, ಎಐಯುಡಿಎಫ್ ಈ ಐದು ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್ ಆಹ್ವಾನ ನೀಡಿಲ್ಲ.
ಲಾಲ್ ಚೌಕ್ನಲ್ಲಿ ತಿರಂಗಾ
ಭಾರತ್ ಜೋಡೋ ಯಾತ್ರೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪಾದಯಾತ್ರೆ ಮುನ್ನಡೆಸಿದ್ದ ರಾಹುಲ್ ಗಾಂಧಿ ನಿನ್ನೆ ಭಾನುವಾರ ಶ್ರೀನಗರ್ನ ಲಾಲ್ ಚೌಕ್ನ ಕ್ಲಾಕ್ ಟವರ್ ಮೇಲೆ ರಾಷ್ಟ್ರಧ್ವಜ ಹಾರಾಡಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಣಿವೆ ರಾಜ್ಯದ ಕಾಂಗ್ರೆಸ್ ಮುಖಂಡರು ಈ ವೇಳೆ ರಾಹುಲ್ ಗಾಂಧಿ ಜೊತೆಗಿದ್ದರು.
ಭಾರತ್ ಜೋಡೋ ಯಾತ್ರೆ ಜಮ್ಮು ಕಾಶ್ಮೀರಕ್ಕೆ ಜನವರಿ 20ರಂದು ಕಾಲಿಟ್ಟಿತು. ಕಠುವಾ ಜಿಲ್ಲೆಯಿಂದ ಆರಂಭವಾಗಿ ಕಾಶ್ಮೀರದಲ್ಲಿ ಪಾದಯಾತ್ರೆ 8-9 ದಿನಗಳ ಕಾಲ ನಡೆಯಿತು. ಈ ಮಧ್ಯೆ ಲಾಲ್ ಚೌಕ್ನಲ್ಲಿ ರಾಹುಲ್ ಗಾಂಧಿ ಯಾಕೆ ರಾಷ್ಟ್ರಧ್ವಜ ಹಾರಿಸಿಲ್ಲ ಎಂದು ಕೆಲ ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಕೂಗೆಬ್ಬಿಸಿದರು. ಆದರೆ, ಜನವರಿ 30ರಂದು ಲಾಲ್ ಚೌಕ್ನಲ್ಲಿ ತ್ರಿವರ್ಣ ಬಾವುಟ ಹಾರಿಸುವ ಮೂಲಕ ರಾಹುಲ್ ಗಾಂಧಿ ತಮ್ಮ ಟೀಕಾಕಾರರನ್ನು ಸುಮ್ಮನಾಗಿಸುವಲ್ಲಿ ಯಶಸ್ವಿಯಾದರು.
ಹಲವು ನಾಯಕರ ಸಮಾಗಮ
ಭಾರತ್ ಜೋಡೋ ಯಾತ್ರೆ ಸೆಪ್ಟಂಬರ್ 7ರಂದು ಆರಂಭವಾಗಿ ಒಟ್ಟು 150 ದಿನಗಳ ಕಾಲ 12 ರಾಜ್ಯಗಳಾದ್ಯಂತ ಸಾಗಿ ಹೋಗಿದೆ. ಒಟ್ಟು 4 ಸಾವಿರ ಕಿಮೀಯಷ್ಟು ದೂರ ಯಾತ್ರೆ ಸಾಗಿದೆ. ನೂರಾರು ನಾಯಕರು, ಸಾವಿರಾರು ಕಾರ್ಯಕರ್ತರು, ಲಕ್ಷಾಂತರ ಜನರು ಈ ಯಾತ್ರೆಯನ್ನು ಕಂಡಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೊದಲಾದ ಮುಖಂಡರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.
ರಾಹುಲ್ ಗಾಂಧಿ ಪಾದಯಾತ್ರೆ ನಡೆಸಿದ್ದಲ್ಲದೇ ವಿವಿಧೆಡೆ 12 ಸಾರ್ವಜನಿಕ ಸಭೆಗಳನ್ನು ಮಾಡಿದ್ದಾರೆ. ನೂರಕ್ಕೂ ಹೆಚ್ಚು ಕಾರ್ನರ್ ಮೀಟಿಂಗ್ಸ್, 13 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಪೂರ್ವಯೋಜಿತವಾದ ಹಲವು ಸಂವಾದಗಳನ್ನು ಯಾತ್ರೆ ಮಧ್ಯೆಯೇ ನಡೆಸಿದ್ದಾರೆ.
Published On - 10:02 am, Mon, 30 January 23