Bharat Jodo Yatra: ಕಾಶ್ಮೀರ ರಾಜಕೀಯದಲ್ಲಿ ಸಂಚಲನ?
Jammu and Kashmir Political Scenario: ಭಾರತದ ಜೋಡೋ ಯಾತ್ರೆಯಲ್ಲಿ ವಿವಿಧ ರಾಜ್ಯಗಳಲ್ಲಿ ಸಾಗಿಹೋದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ರೀತಿಯ ವಿಶೇಷ ಸಂಚಲನಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯಗಳು ಕಣಿವೆ ಪ್ರದೇಶದ ರಾಜಕೀಯ ವಲಯದಲ್ಲಿ ಕೆಲವರಿಂದ ಕೇಳಿಬರುತ್ತಿದೆ.
ನವದೆಹಲಿ: ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭಗೊಂಡಿದ್ದ ಭಾರತ್ ಜೋಡೋ ಯಾತ್ರೆ (Bharat Jodo Yatra) ಜನವರಿ 29, ನಿನ್ನೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಅಂತ್ಯಗೊಂಡಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ 14 ರಾಜ್ಯಗಳಲ್ಲಿ ಸಂಚರಿಸಿ ಕೊನೆಗೆ ಭಾರತದ ಮುಕುಟವಾದ ಕಾಶ್ಮೀರಕ್ಕೆ ಬಂದು ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸಿ ನಿಂತಿದೆ. ಇಂದು ಸೋಮವಾರ ಶ್ರೀನಗರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಭಾರತದ ಜೋಡೋ ಯಾತ್ರೆಯಲ್ಲಿ ವಿವಿಧ ರಾಜ್ಯಗಳಲ್ಲಿ ಸಾಗಿಹೋದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ರೀತಿಯ ವಿಶೇಷ ಸಂಚಲನಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯಗಳು ಕಣಿವೆ ಪ್ರದೇಶದ ರಾಜಕೀಯ ವಲಯದಲ್ಲಿ ಕೆಲವರಿಂದ ಕೇಳಿಬರುತ್ತಿದೆ. ಈ ರಾಜ್ಯದ ಕಾಂಗ್ರೆಸ್ ಘಟಕಕ್ಕಂತೂ ಭಾರತ್ ಜೋಡೋ ಯಾತ್ರೆ ಒಂದು ರೀತಿಯಲ್ಲಿ ಪುಷ್ಟಿ ಸಿಕ್ಕಂತಾಗಿದೆ. ಪ್ರಮುಖ ಪಕ್ಷಗಳಾದ ಪಿಡಿಪಿ ಮತ್ತು ನ್ಯಾಷನಲ್ ಕಾನ್ಫೆರೆನ್ಸ್ನ ಮುಖಂಡರು ತಮ್ಮ ರಾಜಕೀಯ ವೈರುದ್ಧ್ಯಗಳನ್ನು ಬದಿಗೊತ್ತಿ ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಕಾಲು ಸವೆಸಿದ್ದು ಗಮನಾರ್ಹ.
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಪಿಡಿಪಿ ಮತ್ತು ಎನ್ಸಿ ಸೇರಿದಂತೆ ಬಹುತೇಕ ಬಿಜೆಪಿಯೇತರ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಇವೆ. ಈಗ ಭಾರತ್ ಜೋಡೋ ಯಾತ್ರೆ ಈ ಒಗ್ಗಟ್ಟನ್ನು ಇನ್ನಷ್ಟು ಬಲಪಡಿಸಿದೆ ಎಂದು ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಆದರೆ, ಹೆಚ್ಚು ಲವಲವಿಕೆಯಿಂದ ಇರುವುದು ಕಾಶ್ಮೀರದ ಘಟಕದ ಕಾಂಗ್ರೆಸ್ ಪಕ್ಷವೇ. ಗುಲಾಂ ನಬಿ ಆಜಾದ್ ಕಾಂಗ್ರೆಸ್ ನಿರ್ಗಮಿಸಿದ ಬಳಿಕ ಆ ಪಕ್ಷ ಜಮ್ಮು ಕಾಶ್ಮೀರದಲ್ಲಿ ಅತ್ಯಂತ ದುರ್ಬಲ ಸ್ಥಿತಿ ತಲುಪಿದೆ. ಹಲವರು ಕಾಂಗ್ರೆಸ್ ತ್ಯಜಿಸಿ ಹೋಗಿದ್ದರು. ಆದರೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಕಣಿವೆ ರಾಜ್ಯವನ್ನು ಪ್ರವೇಶಿಸಿದ ಬಳಿಕ ಹಲವು ನಾಯಕರು ಕಾಂಗ್ರೆಸ್ಗೆ ಮರಳಿ ಬಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುಲಾಂ ಅಹ್ಮದ್ ಮೀರ್ ಪ್ರಕಾರ, ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ಗೆ ರಾಜಕೀಯ ಲಾಭ ಆಗುವುದಕ್ಕಿಂತ ಹೆಚ್ಚಾಗಿ ಕಾರ್ಯಕರ್ತರನ್ನು ಒಗ್ಗೂಡಿಸುವ ಅವಕಾಶ ಕೊಟ್ಟಿದೆಯಂತೆ.
ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡರಾದ ಫಾರೂಕ್ ಅಬ್ದುಲ್ಲಾ ಮತ್ತು ಅಬ್ದುಲ್ಲಾ ಮೊದಲಾದವರು ಕಾಂಗ್ರೆಸ್ನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪಿಡಿಪಿ ಅಧ್ಯಕ್ಷೆ ಮತ್ತು ಮಾಜಿ ಸಿಎಂ ಮೆಹಬೂಬ ಮುಫ್ತಿ ಮತ್ತವರ ಕುಟುಂಬದವರೂ ಕೂಡ ಮೊನ್ನೆ ಶನಿವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಕಾಂಗ್ರೆಸ್ನ ಈ ಭಾರತ್ ಜೋಡೋ ಯಾತ್ರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಳ್ಳೆಯ ಸ್ಪಂದನೆಯಂತೂ ಸಿಕ್ಕಿದೆ. ಜೊತೆಗೆ ಪ್ರಮುಖ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವ ಅಂಟಿನಂತೆ ಈ ಪಾದಯಾತ್ರೆ ಕೆಲಸ ಮಾಡಿದೆ. ಚುನಾವಣೆಗಳಲ್ಲಿ ಎನ್ಡಿಎಯೇತರ ಎಲ್ಲಾ ಪಕ್ಷಗಳು ಮಹಾಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯಗಳಿವೆ. 2020ರಲ್ಲಿಯೂ ಕಾಶ್ಮೀರದ ವಿವಿಧ ಪಕ್ಷಗಳು ಮೈತ್ರಿ ಮಾಡಿಕೊಂಡು ಜಮ್ಮು ಕಾಶ್ಮೀರದ ಸ್ಥಳೀಯ ಚುನಾವಣೆಯಲ್ಲಿ ಬಹಳಷ್ಟು ಸ್ಥಾನಗಳನ್ನು ಜಯಿಸಿದ್ದವು.
ಆದರೆ, ಪಿಡಿಪಿ ಮತ್ತು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಹಲವು ನಾಯಕರಲ್ಲಿ ಈ ಮಹಾಮೈತ್ರಿಗೆ ಇನ್ನೂ ಮನಸು ಬಂದಿಲ್ಲ. ಈ ಎರಡೂ ಪಕ್ಷಗಳು ಈ ರಾಜ್ಯದಲ್ಲಿ ಸಾಂಪ್ರದಾಯಿಕ ರಾಜಕೀಯ ವಿರೋಧಿಗಳಾಗಿರುವುದರಿಂದ ಒಟ್ಟುಗೂಡಿ ಚುನಾವಣಾ ಕಣಕ್ಕಿಳಿದರೆ ಲಾಭಕ್ಕಿಂತ ನಷ್ಟ ಹೆಚ್ಚು ಎಂಬ ಅನಿಸಿಕೆಗಳಿವೆ.
ಇನ್ನು, ಭಾರತ್ ಜೋಡೋ ಯಾತ್ರೆಗೆ ಜಮ್ಮು ಕಾಶ್ಮೀರದಲ್ಲಿ ಭಾರೀ ಸ್ಪಂದನೆ ಸಿಕ್ಕಿರುವ ವಿಚಾರಕ್ಕೆ ವಿರೋಧಿಗಳ ವ್ಯಾಖ್ಯಾನ ಭಿನ್ನವಾಗಿದೆ. ರಾಹುಲ್ ಗಾಂಧಿ ಒಬ್ಬ ದೊಡ್ಡ ನಾಯಕ. ಬೇರೆ ಯಾವುದೇ ದೊಡ್ಡ ನಾಯಕನನ್ನು ನೋಡಲು ಜನರು ಸೇರುವಂತೆ ಭಾರತ್ ಜೋಡೋ ಯಾತ್ರೆಗೆ ಜನರು ಬಂದಿದ್ದಾರೆ. ವಾಸ್ತವವಾಗಿ ಇದರಿಂದ ಏನೂ ಪರಿಣಾಮ ಆಗುವುದಿಲ್ಲ. ಕಾಂಗ್ರೆಸ್ಗೆ ಯಾವ ಲಾಭವೂ ಆಗುವುದಿಲ್ಲ ಎಂದು ಡೆಮಾಕ್ರಾಟಿಕ್ ಅಜಾದ್ ಪಕ್ಷದ ನಾಯಕ ಒಮರ್ ಕಾಕ್ರೂ ಹೇಳುತ್ತಾರೆ.
ಕುತೂಹಲವೆಂದರೆ ಕಳೆದ ವರ್ಷ ಉಗ್ರ ಪೀಡಿತ ರಾಜೋರಿ ಮತ್ತು ಬಾರಾಮುಲ್ಲಾ ಪ್ರದೇಶಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ರಾಜಕೀಯ ಸಭೆಗಳಿಗೆ ಸಾವಿರಾರು ಜನರು ಸೇರಿದ್ದರು. ಹಾಗಂತ ಇಲ್ಲಿ ಬಿಜೆಪಿಗೆ ಒಳ್ಳೆಯ ರಾಜಕೀಯ ಬೆಂಬಲ ಇದೆ ಎಂದು ಭಾವಿಸಲು ಆಗುವುದಿಲ್ಲ ಎಂಬುದು ಒಂದು ವಲಯದ ರಾಜಕೀಯದವರ ವಾದ.
ಆದರೆ, ಕಾಂಗ್ರೆಸ್ ವಕ್ತಾ ಶೇಖ್ ಆಮೀರ್ ಪ್ರಕಾರ, ಭಾರತ್ ಜೋಡೋ ಯಾತ್ರೆಯಿಂದ ಆಗಿರುವ ಒಂದು ಗಮನಾರ್ಹ ಪರಿವರ್ತನೆ ಎಂದರೆ ಯಾವುದೇ ಬಲವಂತ ಮತ್ತು ಒತ್ತಡ ಇಲ್ಲದೇ ಸ್ಥಳೀಯ ಜನರು ಮುಕ್ತವಾಗಿ ರಾಷ್ಟ್ರಧ್ವಜಗಳನ್ನು ಕೈಯಲ್ಲಿಡಿದಿದ್ದರು. ಇದು ಕಾಶ್ಮೀರದಲ್ಲಿ ರಾಹುಲ್ ಪಾದಯಾತ್ರೆ ತಂದ ದೊಡ್ಡ ಯಶಸ್ಸು ಎನ್ನುತ್ತಾರೆ.