ಗ್ರೀನ್ ಕಾರ್ಡ್ ಆಕಾಂಕ್ಷಿಗಳಿಗೆ ಟ್ರಂಪ್ ವಿಧಿಸಿದ್ದ ನಿಷೇಧ ತೆರವುಗೊಳಿಸಿದ ಬೈಡನ್
ಹಸಿರು ಕಾರ್ಡ್ ಅರ್ಜಿದಾರರಿಗೆ ನಿಷೇಧ ಹೇರಲು ಟ್ರಂಪ್ ನೀಡಿದ ಕಾರಣವನ್ನು ತಿರಸ್ಕರಿಸಿರುವ ಬೈಡನ್, ಅವರು ತೆಗೆದುಕೊಂಡ ನಿರ್ಧಾರವು ಸಾವಿರಾರು ಕುಟುಂಬಗಳಿಗೆ ಅಮೆರಿಕಾಗೆ ವಾಪಸ್ಸು ಬರದಿರುವಂತೆ ತಡೆದಿರುವುದರಿಂದ ದೇಶದ ವ್ಯಾಪಾರ-ವಹಿವಾಟು ಕುಂಠಿತಗೊಂಡಿದೆ ಎಂದು ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿ: ಉದ್ಯೋಗವರಿಸಿ ವಲಸೆ ಹೋಗುವ ಲಕ್ಷಾಂತರ ಗ್ರೀನ್ ಕಾರ್ಡ್ ಆಕಾಂಕ್ಷಿಗಳಿಗೆ ಅಮೆರಿಕ ಪ್ರವೇಶಿಸದಂತೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ನಿಷೇಧವನ್ನು ಈಗಿನ ಅಧ್ಯಕ್ಷ ಜೊ ಬೈಡನ್ ತೆರವುಗೊಳಿಸಿದ್ದಾರೆ. ಬೈಡನ್ ಅವರ ನಿರ್ಧಾರವನ್ನು ಭಾರತೀಯರು ಸ್ವಾಗತಿಸಿದ್ದಾರೆ. ಬೈಡನ್ ಅಧಿಕಾರ ವಹಿಸಿಕೊಳ್ಳುವ ಮೊದಲು ಅಧ್ಯಕ್ಷರಾಗಿದ್ದ ಟ್ರಂಪ್ ಕಳೆದ ವರ್ಷ ಹಸಿರು ಕಾರ್ಡ್ ಅರ್ಜಿದಾರರಿಗೆ ಪ್ರವೇಶ ನಿಷೇಧಿಸುವ ಘೋಷಣೆ ಮಾಡಿದ್ದರು. ಕೊವಿಡ್-19 ಪಿಡುಗಿನಿಂದಾಗಿ ಅಮೆರಿಕದಲ್ಲೂ ನಿರುದ್ಯೋಗದ ಸಮಸ್ಯೆ ಹೆಚ್ಚಿದ್ದು, ಅಮೆರಿಕ ಪ್ರಜೆಗಳ ಹಿತಾಸಕ್ತಿಯನ್ನು ಕಾಯುವುದು ಮುಖ್ಯ ಎಂದು ವಾದಿಸಿದ್ದ ಟ್ರಂಪ್ ನಿಷೇಧ ಹೇರಿದ್ದರು.
ಹಸಿರು ಕಾರ್ಡ್ ಅರ್ಜಿದಾರರಿಗೆ ನಿಷೇಧ ಹೇರಲು ಟ್ರಂಪ್ ನೀಡಿದ ಕಾರಣವನ್ನು ತಿರಸ್ಕರಿಸಿರುವ ಬೈಡನ್, ಅವರು ತೆಗೆದುಕೊಂಡ ನಿರ್ಧಾರವು ಸಾವಿರಾರು ಕುಟುಂಬಗಳಿಗೆ ಅಮೆರಿಕಾಗೆ ವಾಪಸ್ಸು ಬರದಿರುವಂತೆ ತಡೆದಿರುವುದರಿಂದ ದೇಶದ ವ್ಯಾಪಾರ-ವಹಿವಾಟು ಕುಂಠಿತಗೊಂಡಿದೆ ಎಂದು ಹೇಳಿದ್ದಾರೆ.
ಡೆಮೊಕ್ರಾಟ್ ಪಕ್ಷವನ್ನು ಪ್ರತಿನಿಧಿಸುವ ಬೈಡನ್ ವಲಸೆಗೆ ಸಂಬಂಧಿಸಿದಂತೆ ಟ್ರಂಪ್ ತೆಗೆದುಕೊಂಡಿದ್ದ ಹಲವಾರು ಕಠಿಣ ನಿಲುವುಗಳನ್ನು ಹಿಂಪಡೆಯುವ ಭರವಸೆಯನ್ನು ನೀಡಿದ್ದಾರೆ. ಮಾರ್ಚ್ 31 ಕ್ಕೆ ಅವಧಿ ಪೂರ್ಣಗೊಳಿಸಲಿರುವ ವಿಸಾ ನಿಷೇಧವನ್ನು ತೆರವುಗೊಳಿಸಿಬೇಕೆಂದು ವಲಸೆ ಆಯಾಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಳೆದ ಕೆಲ ವಾರಗಳಿಂದ ಬೈಡನ್ರನ್ನು ಒತ್ತಾಯಿಸುತ್ತಿದ್ದರು.
ವಿದೇಶಿ ಮೂಲದ ಅರೆಕಾಲಿಕ ಉದ್ಯೋಗಿಗಳ ಮೇಲಿರುವ ನಿಷೇಧ ಕುರಿತು ಬೈಡನ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ ಅಕ್ಟೋಬರ್ನಲ್ಲಿ ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಧೀಶರೊಬ್ದರು, ವಿದೇಶಿ ಮೂಲದ ಅರೆಕಾಲಿಕ ಉದ್ಯೋಗಿಗಳ ಮೇಲೆ ಟ್ರಂಪ್ ಸರ್ಕಾರ ವಿಧಿಸಿದ್ದ ನಿಷೇಧವನ್ನು ತಡೆಹಿಡಿದಿದ್ದರು. ಟ್ರಂಪ್ ಅವರ ನಿರ್ಧಾರ ಅಮೆರಿಕಾದ ವ್ಯಾಪಾರದ ಮೇಲೆ ಭಾರೀ ಪರಿಣಾಮ ಬೀರಿ ಹಲವಾರು ಕಂಪನಿಗಳು ಸರ್ಕಾರದ ನಿರ್ಧಾರವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದವು.
ನಿಷೇಧಕ್ಕೊಳಗಾಗಿರುವ ಜನರನ್ನು ಪ್ರತಿನಿಧಿಸುವ ಕ್ಯಾಲಿಫೋರ್ನಿಯಾದಲ್ಲಿ ನೆಲೆಗೊಂಡಿರುವ ವಲಸೆ ವಕೀಲ ಕರ್ಟಿಸ್ ಮಾರಿಸನ್ ಅವರು, ಕೊವಿಡ್-19 ಪಿಡುಗಿನಿಂದಾಗಿ ಜಾರಿಗೊಳಿಸಿದ ಲಾಕ್ಡೌನ್ ಅವಧಿಯಲ್ಲಿ ವಿಸಾ ಪ್ರಕ್ರಿಯೆ ನಡೆಯುವ ಇಲಾಖೆಯು ಮುಚ್ಚಿದ್ದರಿಂದ ಕೆಲಸಗಳನ್ನು ಕೇಳಿಕೊಂಡು ಬರುತ್ತಿದ್ದ ಸಹಸ್ರಾರು ಅರ್ಜಿಗಳು ಕುಪ್ಪೆ ಬಿದ್ದಿದ್ದು ಅವುಗಳನ್ನು ಕರಗಿಸುವುದು ಬೈಡನ್ ಎದುರಿರುವ ಆದ್ಯತೆಯಾಗಿದೆ ಅಂತ ಹೇಳಿದ್ದಾರೆ. ಇದು ಇಂದೆರಡು ತಿಂಗಳುಗಳಲ್ಲಿ ಮುಗಿಯುವಂಥ ಕೆಲಸವಲ್ಲ, ವರ್ಷಗಳೇ ಹಿಡಿಯಲಿವೆ ಎಂದು ಅವರು ಹೇಳಿದ್ದಾರೆ.
‘ಇಂಥ ಸ್ಥಿತಿಯನ್ನು ಟ್ರಂಪ್ ಸೃಷ್ಟಿಸಿದ್ದಾರೆ, ವಲಸೆಗೆ ಸಂಬಂಧಿಸಿದ ವ್ಯವಸ್ಥೆಯನ್ನೇ ಅವರು ಬುಡಮೇಲು ಮಾಡಿದರು,’ ಎಂದು ಮಾರಿಸನ್ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳು ಕೇಳಿದ ಪ್ರತಿಕ್ರಿಯೆಗೆ ಅಮೆರಿಕಾದ ಸ್ಟೇಟ್ ಇಲಾಖೆ ಸ್ಪಂದಿಸಿಲ್ಲ.
ಇದನ್ನೂ ಓದಿ: ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕರೊಂದಿಗೆ ಅಮೆರಿಕ ಅಧ್ಯಕ್ಷರ ಮಾತುಕತೆ; ನಾನೂ ಬರಬಹುದಾ ಎಂದು ಪ್ರಶ್ನಿಸಿದ ಜೋ ಬೈಡನ್
Published On - 9:45 pm, Thu, 25 February 21