ಬಿಹಾರ ರಾಜಕೀಯದಲ್ಲಿ ಹೊಸ ಪರ್ವ: ಸಂಪುಟ ಸೇರಿದ ನಿತೀಶ್ ಪುತ್ರ ನಿಶಾಂತ್, 31 ನಾಯಕರಿಂದ ಮಂತ್ರಿಗಳಾಗಿ ಪ್ರಮಾಣ ವಚನ

ಬಿಹಾರ ರಾಜಕೀಯದಲ್ಲಿ ಹೊಸ ಪರ್ವ ಆರಂಭವಾಗಿದೆ. ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರವು ತನ್ನ ಸಂಪುಟವನ್ನು ವಿಸ್ತರಿಸಿದ್ದು, ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಸೇರಿ 31 ನಾಯಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವಿಸ್ತರಣೆಯು ಮುಂಬರುವ ಚುನಾವಣೆಗಳಿಗೆ ಎನ್‌ಡಿಎ ಮೈತ್ರಿಕೂಟದ ತಂತ್ರಗಾರಿಕೆ ಹಾಗೂ ರಾಜಕೀಯ ಹಿಡಿತವನ್ನು ಬಲಪಡಿಸುವ ಪ್ರಯತ್ನವಾಗಿದೆ.

ಬಿಹಾರ ರಾಜಕೀಯದಲ್ಲಿ ಹೊಸ ಪರ್ವ: ಸಂಪುಟ ಸೇರಿದ ನಿತೀಶ್ ಪುತ್ರ ನಿಶಾಂತ್, 31 ನಾಯಕರಿಂದ ಮಂತ್ರಿಗಳಾಗಿ ಪ್ರಮಾಣ ವಚನ
ನಿತೀಶ್-ನಿಶಾಂತ್
Image Credit source: Indian Express

Updated on: May 07, 2026 | 1:25 PM

ಪಾಟ್ನಾ, ಮೇ 07: ಬಿಹಾರ(Bihar)ದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಬಿಹಾರ ರಾಜಕೀಯದ ಚದುರಂಗದಾಟದಲ್ಲಿ ಗುರುವಾರ ಮತ್ತೊಂದು ದೊಡ್ಡ ನಡೆ ಕಂಡುಬಂದಿದೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದೆ. ಈ ವಿಸ್ತರಣೆಯ ಅತ್ಯಂತ ಗಮನಾರ್ಹ ಅಂಶವೆಂದರೆ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿರುವುದು.

ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ನಿಶಾಂತ್ ಕುಮಾರ್ ಸೇರಿದಂತೆ ಒಟ್ಟು 31 ನಾಯಕರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಿತೀಶ್ ಕುಮಾರ್ ಸಾಕ್ಷಿಯಾದರು. ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂಬರುವ ಚುನಾವಣೆಗೆ ತಮ್ಮ ಒಗ್ಗಟ್ಟಿನ ಸಂದೇಶ ರವಾನಿಸಿದರು.

ನೂತನ ಸಂಪುಟದಲ್ಲಿ ಅನುಭವ ಮತ್ತು ಯುವ ಉತ್ಸಾಹಕ್ಕೆ ಆದ್ಯತೆ ನೀಡಲಾಗಿದೆ, ನಿಶಾಂತ್ ಕುಮಾರ್ ನಿತೀಶ್ ಕುಮಾರ್ ಅವರ ಪುತ್ರನಾಗಿ ಸಂಪುಟ ಸೇರಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮಾಜಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಅನುಭವಿಗಳಾದ ಶ್ರಾವಣ್ ಕುಮಾರ್ ಮತ್ತು ಅಶೋಕ್ ಚೌಧರಿ ಅವರು ಮತ್ತೆ ಸಂಪುಟ ಸೇರಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಐದೂ ಪಕ್ಷಗಳಾದ ಬಿಜೆಪಿ, ಜೆಡಿ(ಯು), ಎಲ್‌ಜೆಪಿ (ರಾಮ್ ವಿಲಾಸ್), ಹ್ಯಾಮ್ (HAM) ಮತ್ತು ಆರ್‌ಎಲ್‌ಎಂ ನಾಯಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ.

ಮತ್ತಷ್ಟು ಓದಿ: ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?

ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕಳೆದ ತಿಂಗಳು ಬಿಹಾರದಲ್ಲಿ ದೊಡ್ಡ ಬದಲಾವಣೆ ಸಂಭವಿಸಿತ್ತು. ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ ಈ ವಿಸ್ತರಣೆಯ ಮೂಲಕ ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದೆ.

ಚಿರಾಗ್ ಪಾಸ್ವಾನ್ ಮತ್ತು ಜಿತನ್ ರಾಮ್ ಮಾಂಝಿ ಅವರಂತಹ ಪ್ರಭಾವಿ ನಾಯಕರ ಪಕ್ಷಗಳನ್ನು ಒಳಗೊಂಡಿರುವ ಈ ಮೈತ್ರಿಕೂಟವು ಮುಂಬರುವ ಚುನಾವಣಾ ಸವಾಲುಗಳನ್ನು ಎದುರಿಸಲು ಈ ಸಂಪುಟ ವಿಸ್ತರಣೆಯನ್ನು ಒಂದು ತಂತ್ರವಾಗಿ ಬಳಸಿಕೊಂಡಿದೆ.

ಎಲ್ಲಾ ಸಮುದಾಯ ಮತ್ತು ಮಿತ್ರಪಕ್ಷಗಳನ್ನು ಸಮಾಧಾನಪಡಿಸುವ ಮೂಲಕ ಬಿಹಾರದಲ್ಲಿ ತನ್ನ ಹಿಡಿತವನ್ನು ಗಟ್ಟಿಗೊಳಿಸಲು ಎನ್‌ಡಿಎ ಮುಂದಾಗಿದೆ. ಒಟ್ಟಾರೆಯಾಗಿ, ನಿತೀಶ್ ಕುಮಾರ್ ಅವರ ಪುತ್ರನ ರಾಜಕೀಯ ಪ್ರವೇಶ ಮತ್ತು ಬಿಜೆಪಿ ನೇತೃತ್ವದ ಸರ್ಕಾರದ ಈ ವಿಸ್ತರಣೆಯು ಬಿಹಾರದ ಮುಂದಿನ ರಾಜಕೀಯ ಭವಿಷ್ಯಕ್ಕೆ ಹೊಸ ದಿಕ್ಸೂಚಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:24 pm, Thu, 7 May 26

Follow Us