Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯ ಪಕ್ಕದಲ್ಲಿದ್ದ ಚರಂಡಿಯಲ್ಲಿ 4 ವರ್ಷದ ಮಗುವಿನ ಶವ ಪತ್ತೆ, ಬಿಹಾರದಲ್ಲಿ ಭುಗಿಲೆದ್ದ ಪ್ರತಿಭಟನೆ

ಶಾಲೆಯ ಪಕ್ಕದಲ್ಲಿದ್ದ ಚರಂಡಿಯಲ್ಲಿ 4 ವರ್ಷದ ಮಗುವಿನ ಶವ ಪತ್ತೆಯಾಗಿರುವುದು ಬಿಹಾರ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಹತ್ಯೆಯ ಹಿಂದಿರುವ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ, ಮಗುವಿನ ತಂದೆಗೂ ಹಂತಕನಿಗೂ ಏನಾದರೂ ವೈಷಮ್ಯವಿತ್ತೇ ಎಂಬುದು ಕೂಡ ತಿಳಿದುಬಂದಿಲ್ಲ.

ಶಾಲೆಯ ಪಕ್ಕದಲ್ಲಿದ್ದ ಚರಂಡಿಯಲ್ಲಿ 4 ವರ್ಷದ ಮಗುವಿನ ಶವ ಪತ್ತೆ, ಬಿಹಾರದಲ್ಲಿ ಭುಗಿಲೆದ್ದ ಪ್ರತಿಭಟನೆ
ಶಾಲೆ
Follow us
ನಯನಾ ರಾಜೀವ್
|

Updated on: May 17, 2024 | 9:38 AM

ಬಿಹಾರದ ಶಾಲೆಯೊಂದರ ಪಕ್ಕದಲ್ಲಿದ್ದ ಚರಂಡಿಯಲ್ಲಿ 4 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಪೋಷಕರು ಸೇರಿದಂತೆ ಗ್ರಾಮದ ಹಲವು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲೆಯಲ್ಲೇ ಮಗುವನ್ನು ಕೊಲೆ ಮಾಡಿ ಶವವನ್ನು ತರಗತಿ ಕೊಠಡಿಯ ಚರಂಡಿಗೆ ಎಸೆದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಜನರು ಬೀದಿಗಿಳಿದಿದ್ದಾರೆ. ಜನರು ಡಣಾಪುರ-ಗಾಂಧಿ ಮೈದಾನ ರಸ್ತೆ ತಡೆ ನಡೆಸಿದರು.

ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ತೀವ್ರ ಪ್ರತಿಭಟನೆ ನಡೆಸಿದರು. ಸಿಟ್ಟಿಗೆದ್ದ ಜನರು ಶಾಲೆಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲ ಶಾಲೆಯ ಹಲವು ಕೊಠಡಿಗಳಿಗೂ ಬೆಂಕಿ ಹಚ್ಚಲಾಗಿದೆ. ಶಾಲಾ ವಾಹನಗಳಿಗೂ ಹಾನಿಯಾಗಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆ ಈ ಮಾರ್ಗವಾಗಿ ಸಂಚರಿಸುವ ಜನರು, ಇತರೆ ಶಾಲೆಗಳ ಮಕ್ಕಳು, ಶಿಕ್ಷಕರು ಸಹ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ . ಪೊಲೀಸರು ಜನರ ಮನವೊಲಿಸುವ ಮೂಲಕ ಸಮಾಧಾನಪಡಿಸಲು ಪ್ರಯತ್ನಿಸಿದರು. ಎಲ್ಲರೂ ಹಂತಕನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ, ನಾಲ್ಕು ವರ್ಷದ ಮಗುವಿನ ಶವ ಪತ್ತೆಯಾದ ನಂತರ ನೂರಾರು ಜನರು ರಸ್ತೆಯಲ್ಲಿ ಜಮಾಯಿಸಿದರು.

ಮತ್ತಷ್ಟು ಓದಿ: ಕರ್ನಾಟಕದಲ್ಲಿ ಸರಣಿ ಕೊಲೆಗಳು, ಭುಗಿಲೆದ್ದ ಆಕ್ರೋಶ: ಕಾನೂನು ಸುವ್ಯವಸ್ಥೆ ಬಗ್ಗೆ ಕಾಂಗ್ರೆಸ್ ನಾಯಕರಿಂದಲೇ ಅಸಮಾಧಾನ

ಮೃತ ಮಗುವನ್ನು ದಿಘಾದ ರಾಮ್‌ಜಿ ಚಾಕ್ ನಿವಾಸಿ ಶೈಲೇಂದ್ರ ರೈ ಅವರ ಪುತ್ರ ಆಯುಷ್ ಕುಮಾರ್ (4) ಎಂದು ಗುರುತಿಸಲಾಗಿದೆ. ಶಾಲೆಯ ಆಡಳಿತ ಮಂಡಳಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ. ಈ ವಿಚಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ತರಗತಿ ಮುಗಿದ ಬಳಿಕ ಕೋಚಿಂಗ್ ನಡೆಯುತ್ತಿತ್ತು, ಮಗು ಸಂಜೆಯಾದರೂ ಮನೆಗೆ ಬಾರದಿದ್ದಾಗ ಪ್ರಾಂಶುಪಾಲರಿಗೆ ಕರೆ ಮಾಡಿದ್ದಾರೆ. ಶಾಲಾ ವಾಹನದ ಚಾಲಕನನ್ನು ಕರೆಸಲಾಯಿತು. ಬೆಳಗ್ಗೆ 6.30ಕ್ಕೆ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿದ್ದೆ ಎಂದು ಹೇಳಿದ್ದಾರೆ.

ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಯುಷ್ ಶಾಲೆಯಲ್ಲಿ ಕಾಣಿಸಿಕೊಂಡಿದ್ದಾನೆ. ಅದಾದ ಬಳಿಕ ನಾಪತ್ತೆಯಾಗಿದ್ದ. ಪೊಲೀಸರು ಮಗುವಿನ ಹಂತಕನನ್ನು ಬಂಧಿಸುವವರೆಗೂ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಜನರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ