
ಪಾಟ್ನಾ, ಜುಲೈ 7: ಬಿಹಾರದ ಪುರ್ನಿಯಾ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ಪ್ರದೇಶದ ಟೆಟ್ಗಾಮಾ ಗ್ರಾಮದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಲ್ಲಿ ಒಂದೇ ಕುಟುಂಬದ ಐವರು ಸದಸ್ಯರನ್ನು ವಾಮಾಚಾರದ ಆರೋಪದ ಮೇಲೆ ಕ್ರೂರವಾಗಿ ಥಳಿಸಿ ನಂತರ ಜೀವಂತವಾಗಿ ಸುಟ್ಟುಹಾಕಲಾಗಿದೆ. ಈ ಭೀಕರ ಕೊಲೆ ಸುತ್ತಮುತ್ತಲೂ ಆಘಾತ ಸೃಷ್ಟಿಸಿದೆ. ಎಲ್ಲಾ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ ಮತ್ತು ಪೊಲೀಸರು ಅವರಿಗಾಗಿ ಹುಡುಕುತ್ತಿದ್ದಾರೆ. ಈ ಭಯಾನಕ ಘಟನೆಯು 3 ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ಸ್ಥಳೀಯ ಭೂತೋಚ್ಚಾಟನೆ ಆಚರಣೆ ಮತ್ತು ಚಿಕಿತ್ಸೆಯ ಸಮಯದಲ್ಲಿ ರಾಮ್‌ದೇವ್ ಒರಾನ್ ಅವರ ಮಗನ ಸಾವಿನ ಬಳಿಕ ಗ್ರಾಮದಲ್ಲಿ ಆಕ್ರೋಶ ಹೆಚ್ಚಾಗಿತ್ತು. ಅವರ ಇನ್ನೊಬ್ಬ ಮಗ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದ. ಅವರ ಕುಟುಂಬದಲ್ಲಿ “ಮಾಟಗಾರರು” ಇರುವುದೇ ಈ ದುರಂತಗಳಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಇದರಿಂದ ಅವರೆಲ್ಲರೂ ಸೇರಿ ಆ ಕುಟುಂಬದ ಐವರನ್ನು ಸುಟ್ಟು ಕೊಂದಿದ್ದಾರೆ.
ಮೃತರನ್ನು ಬಾಬು ಲಾಲ್ ಒರಾನ್, ಸೀತಾ ದೇವಿ, ಮಂಜೀತ್ ಒರಾನ್, ರಾನಿಯಾ ದೇವಿ ಮತ್ತು ತಪ್ಟೋ ಮೊಸಾಮತ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಈ ಘಟನೆಯ ನಂತರ ಆ ಊರಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅನೇಕ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಪೊಲೀಸರು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದಾರೆ ಮತ್ತು ಎಫ್‌ಎಸ್‌ಎಲ್ (ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ) ತಂಡದೊಂದಿಗೆ ಶ್ವಾನ ದಳ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: Video: ಅತ್ತೆಯನ್ನು ದರ ದರನೆ ಎಳೆದು, ಥಳಿಸಿ ಚಿತ್ರಹಿಂಸೆ ಕೊಟ್ಟ ಸೊಸೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಕುಲ್ ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರೆಲ್ಲರನ್ನು ಜೀವಂತವಾಗಿ ಸುಡಲು ಗ್ರಾಮಸ್ಥರನ್ನು ನಕುಲ್ ಪ್ರಚೋದಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಮೃತಪಟ್ಟವರ ಕುಟುಂಬದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯೆಂದರೆ ಲಲಿತ್. ಆತ ಈ ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ತನ್ನ ಇಡೀ ಕುಟುಂಬವನ್ನು ಮೊದಲು ವಾಮಾಚಾರಿಗಳು ಎಂಬ ಆರೋಪದ ಮೇಲೆ ನಿರ್ದಯವಾಗಿ ಥಳಿಸಲಾಯಿತು. ನಂತರ ಥಳಿಸಿ, ಬೆಂಕಿ ಹಚ್ಚಲಾಯಿತು ಎಂದು ಆತ ಹೇಳಿದ್ದಾರೆ. ನಾನು ಹೇಗೋ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡೆ. ಸುಟ್ಟ ನಂತರ ಶವಗಳನ್ನು ನೀರಿಗೆ ಎಸೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 pm, Mon, 7 July 25