ತಮಿಳುನಾಡು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ; ಕುಟುಂಬದವರೂ ಮೋಸ ಮಾಡಿದರು !
ತಮಿಳುನಾಡಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕೂಡ, ಆಡಳಿತ ಪಕ್ಷ ಡಿಎಂಕೆ ಅಭೂತಪೂರ್ವ ಜಯಗಳಿಸಿದೆ. ಚೆನ್ನೈನಲ್ಲೇ 134 ವಾರ್ಡ್ಗಳನ್ನು ಗೆದ್ದುಕೊಂಡಿದೆ.
ಈರೋಡ್: ತಮಿಳುನಾಡಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ (TN Urban Local Body Polls) ಬಿಜೆಪಿಯಿಂದ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬರಿಗೆ ಕೇವಲ ಒಂದೇ ಒಂದು ವೋಟ್ ಬಂದಿದೆ. ತಮಿಳುನಾಡಿನಾದ್ಯಂತ ಪಟ್ಟಣ ಪಂಚಾಯಿತಿ ಚುನಾವಣೆ ನಡೆದಿತ್ತು. ಅದರಲ್ಲಿ ನರೇಂದ್ರನ್ ಎಂಬುವರು ಈರೋಡ್ ಜಿಲ್ಲೆಯ ಭವಾನಿಸಾಗರ್ ಪಟ್ಟಣದ 11ನೇ ವಾರ್ಡ್ನಿಂದ ಸ್ಪರ್ಧಿಸಿದ್ದರು. ಆದರೆ ಮತ ಎಣಿಕೆ ಮುಗಿದ ಬಳಿಕ ಅಕ್ಷರಶಃ ಶಾಕ್ ಆಗಿದ್ದಾರೆ. ಅವರಿಗೆ ಬಿದ್ದಿದ್ದು ಒಂದೇ ಮತವಾಗಿತ್ತು. ಅದೂ ಕೂಡ ಅವರೇ ತಮಗೆ ತಾವು ಹಾಕಿಕೊಂಡ ಮತ !
ಈ ಬಗ್ಗೆ ಮಾತನಾಡಿದ ನರೇಂದ್ರನ್, ನನಗೆ ನಾನೊಬ್ಬನೇ ಮತ ಹಾಕಿಕೊಂಡಿದ್ದೇನೆ. ಅದು ಬಿಟ್ಟರೆ ನನ್ನ ಕುಟುಂಬದವರು, ಸ್ನೇಹಿತರು, ಪಕ್ಷದವರೂ ಕೂಡ ನನಗೆ ಮತ ಹಾಕಲಿಲ್ಲ. ಸುಳ್ಳು ಭರವಸೆ ಕೊಟ್ಟು ಎಲೆಕ್ಷನ್ಗೆ ನಿಲ್ಲಿಸಿದರು. ಈಗ ಯಾರೂ ಮತಹಾಕಲಿಲ್ಲ. ಈ ಮೂಲಕ ನನಗೆ ಅವಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹೇಳಬೇಕೆಂದರೆ ತಮಿಳುನಾಡಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕೂಡ, ಆಡಳಿತ ಪಕ್ಷ ಡಿಎಂಕೆ ಅಭೂತಪೂರ್ವ ಜಯಗಳಿಸಿದೆ. ಚೆನ್ನೈನಲ್ಲೇ 134 ವಾರ್ಡ್ಗಳನ್ನು ಗೆದ್ದುಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಹುದ್ದೆಗೆ ಏರಿರುವ ಎಂ.ಕೆ.ಸ್ಟಾಲಿನ್ ಇದೀಗ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿದ್ದರ ಬಗ್ಗೆ ತುಂಬ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾಗೇ, ಈ ವಿಜಯಕ್ಕಾಗಿ ತಮಿಳುನಾಡು ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂಭತ್ತು ತಿಂಗಳು ಒಳ್ಳೆಯ ಆಡಳಿತ ನೀಡಿದ್ದಕ್ಕೆ ಪ್ರತಿಯಾಗಿ ರಾಜ್ಯದ ಜನರು ನೀಡಿದ ಸರ್ಟಿಫಿಕೇಟ್ ಇದು. ನಾವು ಜನರ ಆಶೋತ್ತರಗಳನ್ನು ಈಡೇರಿಸುತ್ತಿದ್ದೇವೆ. ಜನರು ನಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೀನಿನ ಎಣ್ಣೆಯ ಬಳಕೆಯಿಂದಾಗುವ ಲಾಭಗಳೇನು? ಇಲ್ಲಿದೆ ಮಾಹಿತಿ