ಬುಡಕಟ್ಟು ಜನರ ಮತಕ್ಕಾಗಿ ಮಾತ್ರ ಬಿಜೆಪಿ ದ್ರೌಪದಿ ಮುರ್ಮುರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು: ಮೇಧಾ ಪಾಟ್ಕರ್
ತಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ತರಲು ಸಾಧ್ಯವಾಗದೇ ಇರುವ ಮುರ್ಮು ಅಥವಾ ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿರುವ ಆರ್ಥಿಕ ತಜ್ಞ ಯಶವಂತ್ ಸಿನ್ಹಾ ಅವರು ರಾಷ್ಚ್ರಪತಿಯಾದರೆ ಏನು ಮಾಡುತ್ತಾರೆ?
ಕೊಲ್ಕತ್ತಾ: ಬಿಜೆಪಿ (BJP) ಆದಿವಾಸಿಗಳ ಪರವೇನೂ ಅಲ್ಲ. ಬುಡಕಟ್ಟು ಜನಾಂಗದವರ ಮತ ಪಡೆಯುವುದಕ್ಕಾಗಿ ಮಾತ್ರ ಬಿಜೆಪಿ ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು (Droupadi Murmu) ಅವರನ್ನು ರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ (Medha Patkar) ಹೇಳಿದ್ದಾರೆ. ತಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ತರಲು ಸಾಧ್ಯವಾಗದೇ ಇರುವ ಮುರ್ಮು ಅಥವಾ ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿರುವ ಆರ್ಥಿಕ ತಜ್ಞ ಯಶವಂತ್ ಸಿನ್ಹಾ ಅವರು ರಾಷ್ಚ್ರಪತಿಯಾದರೆ ಏನು ಮಾಡುತ್ತಾರೆ? ಇವರು ರಾಷ್ಟ್ರಪತಿಯಾದರೆ ಆಡಳಿತ ಪಕ್ಷದ ರಬ್ಬರ್ ಸ್ಟ್ಯಾಂಪ್ ಗಳಷ್ಟೇ ಎಂದಿದ್ದಾರೆ ಮೇಧಾ. ಬಿಜೆಪಿಗೆ ಆಕೆಯಂಥಾ ಬುಡಕಟ್ಟು ಜನಾಂಗದವರು ಬೇಕು, ಮಧ್ಯಪ್ರದೇಶದಂತ ಹಲವಾರು ರಾಜ್ಯಗಳಲ್ಲಿ ಆದಿವಾಸಿಗಳು ಪ್ರಮುಖ ಮತಬ್ಯಾಂಕ್ ಎಂದು ತಿಳಿದಿರುವುದರಿಂದ ಬಿಜೆಪಿಯವರಿಗೆ ಬಿರ್ಸಾ ಮುಂಡಾ ಜಯಂತಿ ಆಚರಣೆ ಮಾಡಬೇಕಿದೆ. ಆದಿವಾಸಿಗಳಿಗೆ ಅರಣ್ಯಗಳ ಹಕ್ಕುಗಳನ್ನು ನೀಡದೆ ಕಾರ್ಪೊರೇಟ್ ಗಳಿಗೆ ಅರಣ್ಯದ ಹಕ್ಕು ನೀಡಲು ಯೋಚಿಸುತ್ತಿರುವ ಬಿಜೆಪಿ ಆದಿವಾಸಿ ಪರ ಎಂದು ಹೇಳುವಂತಿಲ್ಲ ಎಂದು ಪಿಟಿಐ ಜತೆ ಟೆಲಿಫೋನ್ ಸಂಭಾಷಣೆ ನಡೆಸಿದ ಮೇಧಾ ಪಾಟ್ಕರ್ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮೋದಿ ಭೋಪಾಲ್ಗೆ ಭೇಟಿ ನೀಡಿ ಬುಡಕಟ್ಟು ಜನಾಂಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜಯಂತಿ ಆಚರಣೆ ಮಾಡಿದ್ದನ್ನು ಉಲ್ಲೇಖಿಸಿದ ಮೇಧಾ, ಅದೇ ಹೊತ್ತಲ್ಲಿ ಬುಡಕಟ್ಟು ಜನಾಂಗದವರ ಮೇಲೆ ಹಿಂಸಾಚಾರ ನಡೆದಿತ್ತು ಎಂದಿದ್ದಾರೆ.
ಭೋಪಾಲದಲ್ಲಿ ಮೋದಿಯವರ ಒಂದು ದಿನದ ಕಾರ್ಯಕ್ರಮಕ್ಕಾಗಿ 30 ಕೋಟಿ ಖರ್ಚು ಮಾಡಲಾಗಿತ್ತು. ಅದೇ ಹೊತ್ತಲ್ಲಿ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನರನ್ನು ಹೊಡೆದು ಕೊಲ್ಲಲಾಗಿತ್ತು ಎಂದು ಮೇಧಾ ಪಾಟ್ಕರ್ ಹೇಳಿದ್ದಾರೆ. ನರ್ಮದಾ ಬಚಾವೋ ಆಂದೋಲನದ ಸಂಸ್ಥಾಪಕ ಸದಸ್ಯರಾದ ಮೇಧಾ, ಬಿಜೆಪಿ ಈವರೆಗೆ ಜವಾಹರ್ ಲಾಲ್ ನೆಹರೂ ಅವರ ಟ್ರೈಬಲ್ ಪಂಚಶೀಲ್, ಪಂಚಾಯತ್ ಎಕ್ಸ್ ಟೆನ್ಶನ್ ಟು ಶೆಡ್ಯೂಲ್ಡ್ ಏರಿಯಾಸ್ ಕಾಯ್ದೆ ಮತ್ತು ಅರಣ್ಯ ಹಕ್ಕುಗಳ ಕಾಯ್ದೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಹೇಳಿದ್ದಾರೆ.