Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಧನ ಬೆಲೆ ಏರಿಕೆ ವಿರೋಧಿಸಿ ಭೂಪಿಂದರ್ ಸಿಂಗ್ ಹೂಡಾ ಪ್ರತಿಭಟನೆ; ಟ್ರ್ಯಾಕ್ಟರ್​ಗೆ ಹಗ್ಗ ಕಟ್ಟಿ ಎಳೆದ ಕಾಂಗ್ರೆಸ್ ಶಾಸಕಿಯರು

Bhupinder Singh Hooda: ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ವಿಧಾನಸಭೆಯಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರ ಪ್ರತಿಭಟನೆಯನ್ನು ಖಂಡಿಸಿದ್ದು, ಈ ಪ್ರತಿಭಟನೆಯ ದೃಶ್ಯ ನೋಡಿ ನನಗೆ ರಾತ್ರಿ ನಿದ್ದೆ ಬಂದಿಲ್ಲ, ಶಾಸಕಿಯರ ಜತೆ ಈ ರೀತಿ ವರ್ತಿಸುವುದು ಕೂಲಿ ಕಾರ್ಮಿಕರನ್ನು ದುಡಿಸಿಕೊಳ್ಳುವುದಕ್ಕಿಂತಲೂ ಕೆಟ್ಟದಾಗಿದೆ ಎಂದು ಭಾವುಕರಾಗಿ ನುಡಿದಿದ್ದಾರೆ.

ಇಂಧನ ಬೆಲೆ ಏರಿಕೆ ವಿರೋಧಿಸಿ ಭೂಪಿಂದರ್ ಸಿಂಗ್ ಹೂಡಾ ಪ್ರತಿಭಟನೆ; ಟ್ರ್ಯಾಕ್ಟರ್​ಗೆ ಹಗ್ಗ ಕಟ್ಟಿ ಎಳೆದ ಕಾಂಗ್ರೆಸ್ ಶಾಸಕಿಯರು
ಭೂಪಿಂದರ್ ಸಿಂಗ್ ಹೂಡಾ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on:Mar 12, 2021 | 2:48 PM

ನವದೆಹಲಿ: ಇಂಧನ ಬೆಲೆ ಏರಿಕೆ ವಿರೋಧಿಸಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ನಡೆಸಿದ ಪ್ರತಿಭಟನೆ ರೀತಿಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಖಂಡಿಸಿದ್ದಾರೆ. ಸೋಮವಾರ ಭೂಪಿಂದರ್ ಸಿಂಗ್ ಹೂಡಾ ಟ್ರ್ಯಾಕ್ಟರ್ ಏರಿ ಕುಳಿತು, ಆ ಟ್ರ್ಯಾಕ್ಟರ್​ನ್ನು ಕಾಂಗ್ರೆಸ್​ನ  ಶಾಸಕಿಯರು ಹಗ್ಗ ಕಟ್ಟಿ ಎಳೆಯುವ ಮೂಲಕ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೂಡಾ ಅವರು ಈ ರೀತಿ ಪ್ರತಿಭಟನೆ ನಡೆಸುತ್ತಾ ವಿಧಾನಸಭೆಗೆ ಬಂದಿದ್ದರು.

ಹೂಡಾ ಅವರ ಪ್ರತಿಭಟನೆ ರೀತಿಯನ್ನು ಖಂಡಿಸಿದ ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮತಿ ಇರಾನಿ, ಅವರ ಪ್ರತಿಭಟನೆ ಅರ್ಥವಾಗುತ್ತದೆ. ರಾಜಕೀಯ ಹೇಳಿಕೆ ನೀಡಬೇಕು ಎಂಬುದನ್ನು ಅವರು ಬಯಸುತ್ತಿರುವುದು ಅರ್ಥವಾಗುತ್ತದೆ. ಆದರೆ ಮಹಿಳೆಯರನ್ನು ಈ ರೀತಿ ಬಳಸಿದ್ದೇಕೆ? ಇದು ರಾಜಕೀಯದಲ್ಲಿ ಸರಿಯಲ್ಲ. ರಾಜಕೀಯ ಸಂಘಟನೆಗಳಲ್ಲಿರುವ ಮಹಿಳೆಯರನ್ನು, ವಿಶೇಷವಾಗಿ ನಾವು ನೋಡಿದ ಕಾಂಗ್ರೆಸ್ ಪ್ರತಿಭಟನೆಯ ದೃಶ್ಯಗಳಲ್ಲಿ ಮಹಿಳೆಯರನ್ನು ಬಂಧಿತ ಕಾರ್ಮಿಕರೆಂದು ಪರಿಗಣಿಸುತ್ತಾರೆಯೇ? ಕಾಂಗ್ರೆಸ್​ನ ಯಾವುದೇ ಪುರುಷ ಸದಸ್ಯರು ಅದನ್ನು ತಡೆಯಲು ಮಧ್ಯಪ್ರವೇಶಿಸಿಲ್ಲ ಎಂಬುದು ಆಘಾತಕಾರಿ ಎಂದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಮೃತಿ ಇರಾನಿ, ಅವರ ಪಕ್ಷದಲ್ಲಿ ಮಹಿಳೆಯರು ಪುರುಷರು ಮಾಡಲು ನಿರಾಕರಿಸಿದ ಕೆಲಸವನ್ನು ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ಅವರ ಮೌನವೇ ಹೇಳುತ್ತದೆ ಎಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಒಂದೆಡೆ ಮಹಿಳೆಯರ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಹೂಡಾ ಅವರು ಮಹಿಳೆಯರಲ್ಲಿ ಟ್ರ್ಯಾಕ್ಟರ್ ಎಳೆದೊಯ್ಯಲು ಒತ್ತಾಯಿಸುತ್ತಿರುವುದು ಕಾಣುತ್ತಾರೆ. ಮಹಿಳಾ ದಿನದಂದೇ ಅವರು ಈ ರೀತಿ ಮಾಡಿದ್ದಾರೆ . ಕಾಂಗ್ರೆಸ್​ನವರಿಗೆ ಆತ್ಮಸಾಕ್ಷಿ ಇಲ್ಲವೇ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ವಿಧಾನಸಭೆಯಲ್ಲಿ ಹೂಡಾ ಅವರ ಪ್ರತಿಭಟನೆಯನ್ನು ಖಂಡಿಸಿದ್ದು, ಈ ಪ್ರತಿಭಟನೆಯ ದೃಶ್ಯ ನೋಡಿ ನನಗೆ ರಾತ್ರಿ ನಿದ್ದೆ ಬಂದಿಲ್ಲ, ಮಹಿಳಾ ಶಾಸಕಿಯರ ಜತೆ ಈ ರೀತಿ ವರ್ತಿಸುವುದು ಕೂಲಿ ಕಾರ್ಮಿಕರನ್ನು ದುಡಿಸಿಕೊಳ್ಳುವುದಕ್ಕಿಂತಲೂ ಕೆಟ್ಟದಾಗಿದೆ ಎಂದು ಭಾವುಕರಾಗಿ ನುಡಿದಿದ್ದಾರೆ. ಪ್ರತಿಭಟನೆಯಲ್ಲಿ ಮಹಿಳೆಯರಿಗೆ ಟ್ರ್ಯಾಕ್ಟರ್ ಎಳೆಯಲು ಹೇಳುವ ಬದಲು ಹೂಡಾ ಅವರೇ ಟ್ರ್ಯಾಕ್ಟರ್ ಎಳೆಯಬಹುದಿತ್ತಲ್ಲವೇ? ಎಂದು ಖಟ್ಟರ್ ಕೇಳಿದ್ದರು.

ಈ ಬಗ್ಗೆ ಸಮರ್ಥಿಸಿಕೊಂಡ ಹೂಡಾ, ಅನಿಲ ಬೆಲೆ ಮತ್ತು ಇತರ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುವವರು ಮಹಿಳೆಯರೇ ಆಗಿದ್ದಾರೆ. ಕೇಂದ್ರದ ಕೃಷಿ ಕಾನೂನು ವಿರುದ್ಧ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಿರತ ರೈತ ಮಹಿಳೆಯರ ಕಷ್ಟಗಳ ಬಗ್ಗೆ ಸರ್ಕಾರ ತಿರುಗಿಯೂ ನೋಡಿಲ್ಲ. ಪ್ರತಿಭಟನೆ ಸ್ಥಳದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ನಿಮಗೆ ಅವರ ನೋವುಗಳು ಕಾಣುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಭೂಪಿಂದರ್ ಸಿಂಗ್ ಹೂಡಾ ಅವರ ಪ್ರತಿಭಟನೆ ರೀತಿಯವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಖಂಡಿಸಿದ್ದಾರೆ. ಮಹಿಳೆ ತನ್ನ ಬದುಕಿಗಾಗಿ ಹೆಣಗಾಟ ನಡೆಸುತ್ತಿದ್ದರೆ ನನಗೇನೂ ಸಮಸ್ಯೆ ಇಲ್ಲ. ಆದರೆ ಒಬ್ಬ ಪುರುಷ, ವಿಶೇಷವಾಗಿ ರಾಜಕಾರಣಿ ಟ್ರ್ಯಾಕ್ಟರ್​ನಲ್ಲಿ ಕುಳಿತು ಅದನ್ನು ಮಹಿಳೆಯರು ಎಳೆದುಕೊಂಡು ಹೋಗುತ್ತಿದ್ದರೆ ಅದು ಮಹಿಳೆಯ ಘನತೆಯನ್ನು ಮತ್ತು ಟ್ರ್ಯಾಕ್ಟರ್​ನಲ್ಲಿ ಕುಳಿತಿರುವ ವ್ಯಕ್ತಿಯ ಘನತೆಯನ್ನು ಕುಗ್ಗಿಸುತ್ತದೆ. ಇದು ಲಿಂಗ ತಾರತಮ್ಯವನ್ನು ತೋರಿಸುತ್ತದೆ. ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಿದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಮಹಿಳೆಯರಿಂದ ಇದನ್ನು ಬಲವಂತವಾಗಿ ಮಾಡಿಸಲಾಗಿದೆ ಎಂದಿದ್ದರೆ ನಮ್ಮನ್ನು ಸಮೀಪಿಸಬಹುದು. ಒಂದು ವೇಳೆ ಮಹಿಳೆಯರು ಒಪ್ಪಿಗೆಯಿಂದಲೇ ಇದನ್ನು ಮಾಡಿದ್ದರೆ, ಟ್ರ್ಯಾಕ್ಟರ್​ನಲ್ಲಿ ಕುಳಿತ ವ್ಯಕ್ತಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಯೋಚಿಸಬೇಕಿತ್ತು ಎಂದಿದ್ದಾರೆ ಶರ್ಮಾ.

ಇದನ್ನೂ ಓದಿ:  ಭದ್ರವಾಗಿದೆ ಹರ್ಯಾಣದ ಬಿಜೆಪಿ ಸರ್ಕಾರ: 55-32 ಅಂತರದಲ್ಲಿ ಖಟ್ಟರ್ ವಿಶ್ವಾಸಮತ ಸಾಬೀತು

Published On - 2:45 pm, Fri, 12 March 21