ಬಿಜೆಪಿ ಮತ್ತು ಅವರ ಕೋಟ್ಯಾಧಿಪತಿ ಗೆಳೆಯರು ಮಾತ್ರ ದೇಶದಲ್ಲಿ ಸುರಕ್ಷಿತರು: ಪ್ರಿಯಾಂಕಾ ಗಾಂಧಿ ವಾದ್ರಾ
Priyanka Gandhi Vadra ಈ ದೇಶದಲ್ಲಿ ಕೇವಲ ಎರಡು ಗುಂಪುಗಳ ಜನರು ಮಾತ್ರ ಸುರಕ್ಷಿತರಾಗಿದ್ದಾರೆ. ಬಿಜೆಪಿ ನಾಯಕರು ಮತ್ತು ಅವರ ಕೋಟ್ಯಧಿಪತಿ ಸ್ನೇಹಿತರು. ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ಯಾರೂ ಸುರಕ್ಷಿತವಾಗಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ದೆಹಲಿ: ಲಖಿಂಪುರ್ ಖೇರಿ (Lakhimpur Kheri) ಪ್ರಕರಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶಿಶ್ ಅವರನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಭಾನುವಾರ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ಪಕ್ಷದ 2022 ಯುಪಿ ಚುನಾವಣಾ ಪ್ರಚಾರವನ್ನು ಆರಂಭಿಸಿದ ಅವರು, ಬಿಜೆಪಿ ನಾಯಕರು ಮತ್ತು ಅವರ “ಕೋಟ್ಯಾಧಿಪತಿ” ಸ್ನೇಹಿತರು ಮಾತ್ರ ದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಪ್ರಿಯಾಂಕಾ ಪಕ್ಷದ ಕಿಸಾನ್ ನ್ಯಾಯ ರ್ಯಾಲಿಯಲ್ಲಿ ದುರ್ಗಾ ದೇವಿಯನ್ನು ಸ್ತುತಿಸಿ ಭಾಷಣವನ್ನು ಆರಂಭಿಸಿದರು. “ನಾನು ಉಪವಾಸದಲ್ಲಿದ್ದೇನೆ ಮತ್ತು ಮಾ ಅವರ ಸ್ತುತಿ (ಪ್ರಾರ್ಥನೆ) ಯೊಂದಿಗೆ ನಾನು ನನ್ನ ಭಾಷಣವನ್ನು ಪ್ರಾರಂಭಿಸುತ್ತೇನೆ” ಎಂದು ಅವರು ಹೇಳಿದರು. ಸಂಸ್ಕೃತದಲ್ಲಿ ಎರಡು ಶ್ಲೋಕಗಳನ್ನು ಪಠಿಸಿದ ಅವರು ‘ಜೈ ಮಾತಾ ದಿ’ ಎಂದು ಘೋಷಣೆ ಕೂಗಿದ್ದಾರೆ. ರೈತರ ಚಳವಳಿ,ಹಣದುಬ್ಬರ ಮತ್ತು ನಿರುದ್ಯೋಗ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಯೋಗಿ ಆದಿತ್ಯನಾಥ ಸರ್ಕಾರವನ್ನು ಬದಲಿಸುವ ಮೂಲಕ ರಾಜ್ಯದಲ್ಲಿ “ಪರಿವರ್ತನ್” (ಬದಲಾವಣೆ) ಯನ್ನು ಜಾರಿಗೆ ತರುವಂತೆ ಜನರನ್ನು ಒತ್ತಾಯಿಸಿದರು.
हमें शक्ति हमारे संघर्षों से मिलती है। भाजपा सरकार चाहे हमें जेल में डाले, चाहे जितनी रुकावट डाले, लेकिन हम किसानों, नौजवानों, दलितों, महिलाओं और गरीबों की आवाज दबने नहीं देंगे।
मैं उप्र की जनता से आह्वान करती हूं कि न्याय की लड़ाई में हमारे साथ आएं।#KisanKoNyayDo pic.twitter.com/jhadWoRZsd
— Priyanka Gandhi Vadra (@priyankagandhi) October 10, 2021
ಈ ದೇಶದಲ್ಲಿ ಕೇವಲ ಎರಡು ಗುಂಪುಗಳ ಜನರು ಮಾತ್ರ ಸುರಕ್ಷಿತರಾಗಿದ್ದಾರೆ. ಬಿಜೆಪಿ ನಾಯಕರು ಮತ್ತು ಅವರ ಕೋಟ್ಯಧಿಪತಿ ಸ್ನೇಹಿತರು. ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ಯಾರೂ ಸುರಕ್ಷಿತವಾಗಿಲ್ಲ. ಕಾರ್ಮಿಕರಾಗಲಿ, ದೋಣಿಯವರು, ದಲಿತರು, ಅಲ್ಪಸಂಖ್ಯಾತರು, ಬಡವರು, ಮಹಿಳೆಯರು ಸುರಕ್ಷಿತವಾಗಿಲ್ಲ. ಈ ದೇಶದಲ್ಲಿ ಪ್ರಧಾನಿ, ಅವರ ಸಚಿವರು , ಅಧಿಕಾರದಲ್ಲಿರುವವರು ಮತ್ತು ಅವರ ಎಲ್ಲ ಕೋಟ್ಯಾಧಿಪತಿ ಸ್ನೇಹಿತರನ್ನು ರಕ್ಷಿಸಲಾಗಿದೆ”ಎಂದು ಪ್ರಿಯಾಂಕಾ ಹೇಳಿದರು.
ಆಶಿಶ್ ಮಿಶ್ರಾ ಅವರನ್ನು ಬಿಜೆಪಿ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದ ಪ್ರಿಯಾಂಕಾ, “ಕಳೆದ ವಾರ, ಕೇಂದ್ರ ರಾಜ್ಯ ಸಚಿವ (ಗೃಹ) ಮಗ ಅಜಯ್ ಮಿಶ್ರಾ ತಮ್ಮ ವಾಹನವನ್ನು ರೈತರ ಮೇಲೆ ಹರಿಸಿದರು . ಎಲ್ಲಾ ಸಂತ್ರಸ್ತರ ಕುಟುಂಬಗಳು ತಮಗೆ ನ್ಯಾಯ ಬೇಕು ಎಂದು ಕೇಳಿದರು. ಸರ್ಕಾರವು ಮಂತ್ರಿ ಮತ್ತು ಆತನ ಮಗನನ್ನು ರಕ್ಷಿಸುವಲ್ಲಿ ಹೇಗೆ ನಿರತವಾಗಿದೆ ಎಂಬುದನ್ನು ನೀವು ನೋಡಿರಬೇಕು. ಆಡಳಿತವು ಪ್ರತಿಪಕ್ಷ ನಾಯಕರನ್ನು ನಿಲ್ಲಿಸುವಲ್ಲಿ ನಿರತರಾಗಿದ್ದಾಗ ರಾತ್ರಿಯಲ್ಲಿ ನನ್ನನ್ನು ತಡೆಯಲು ಮತ್ತು ಸಂತ್ರಸ್ತರ ಕುಟುಂಬ ಸದಸ್ಯರನ್ನು ಗೃಹಬಂಧನದಲ್ಲಿರಿಸಲು ಪೋಲಿಸರನ್ನು ನಿಯೋಜಿಸಲಾಯಿತು. ಒಬ್ಬನೇ ಒಬ್ಬ ಪೊಲೀಸರು ಆರೋಪಿಯನ್ನು ಹಿಡಿಯಲು ಹೋಗಲಿಲ್ಲ. ಬದಲಾಗಿ ವಿಚಾರಣೆಗಾಗಿ ಆತನಿಗೆ ಪೊಲೀಸರಿಂದ ಆಹ್ವಾನವನ್ನು ಕಳುಹಿಸಲಾಯಿತು.”ಉತ್ತರ ಪ್ರದೇಶ ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ) ಅವರು ಸಾರ್ವಜನಿಕ ವೇದಿಕೆಯಿಂದ ಸಚಿವರನ್ನು ಬೆಂಬಲಿಸುತ್ತಿದ್ದಾರೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.
ಕೊಲೆಯಾದ ರೈತರ ಕುಟುಂಬಗಳನ್ನು ಭೇಟಿ ಮಾಡಲು ಲಖಿಂಪುರ್ ಖೇರಿಗೆ ಭೇಟಿ ನೀಡದ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ “ಪ್ರಧಾನಿ ಪ್ರಪಂಚದ ಮೂಲೆ ಮೂಲೆಗೂ ಭೇಟಿ ನೀಡಬಹುದು . ಅಮೆರಿಕ, ಜಪಾನ್ ಗೆ ಹೋಗಬಹುದು. ಆದರೆ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತನಾಡಲು ದೆಹಲಿ ಗಡಿಭಾಗಕ್ಕೆ ಹೋಗಲು ಸಾಧ್ಯವಾಗಿಲ್ಲ. ಪ್ರಧಾನಿ ಲಖನೌಗೆ ಬಂದರು ಆದರೆ ಲಖಿಂಪುರ್ ಖೇರಿಯಲ್ಲಿ ರೈತರ ಕುಟುಂಬಗಳನ್ನು ಭೇಟಿ ಮಾಡಲು ಅವರ ಕಣ್ಣೀರು ಒರೆಸಲು ಮತ್ತು ಅವರ ಕೈಗಳನ್ನು ಹಿಡಿಯಲು ಇನ್ನೂ ಎರಡು ಗಂಟೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಲಖಿಂಪುರ್ ಖೇರಿಯಲ್ಲಿ ಹತ್ಯೆಯಾದ ರೈತರ ಎಲ್ಲಾ ಕುಟುಂಬಗಳು ತಮಗೆ ನ್ಯಾಯದ ನಿರೀಕ್ಷೆಯಿಲ್ಲ ಎಂದು ಹೇಳಿದರು. ಈ ದೇಶದಲ್ಲಿ ಯಾರಾದರೂ ದೌರ್ಜನ್ಯವನ್ನು ಎದುರಿಸಿದರೆ, ಸರ್ಕಾರ, ಸಿಎಂ, ಪಿಎಂ, ಗೃಹಸಚಿವಾಲದ ರಾಜ್ಯಸಚಿವರು , ಶಾಸಕರು, ಎಲ್ಲರೂ ಕೈ ಜೋಡಿಸಿದ್ದಾರೆ ಮತ್ತು ನ್ಯಾಯ ಕೇಳಲು ಹೋದರೆ ಜನರಿಗೆ ಬೆನ್ನು ಹಾಕಿದ್ದಾರೆ ಎಂದಿದ್ದಾರೆ.
ಜೈ ಮಾತಾ ದಿ ಘೋಷಣೆಯೊಂದಿಗೆ ಪ್ರಿಯಾಂಕಾ ಭಾಷಣ ಮುಗಿಸಿ, ಜನರಿಗೆ ನವರಾತ್ರಿಯ ಶುಭಾಶಯ ಹೇಳಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಪ್ರಿಯಾಂಕಾ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಇತರ ಕಾಂಗ್ರೆಸ್ ನಾಯಕರು ‘ಹರ್ ಹರ್ ಮಹದೇವ್’ ಎಂದು ಘೋಷಣೆ ಕೂಗಿದರು. ಅದರ ನಂತರ ಕುರಾನ್ ಮತ್ತು ಗುರ್ಬಾನಿಯ ಆಯ್ದ ಭಾಗಗಳ ಓದುವ ಕಾರ್ಯ ನಡೆಯಿತು.