
ನಂದಿಗ್ರಾಮ, ಅಕ್ಟೋಬರ್ 9: ಪಶ್ಚಿಮ ಬಂಗಾಳದ ನಂದಿಗ್ರಾಮದ ವಿಧಾನಸಭಾ ಉಪಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಹಾಸಿ ರಾಣಿ ರಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ 1,22,753 ಭಾರೀ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. ಚುನಾವಣಾ ಆಯೋಗ ಹಂಚಿಕೊಂಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿದ್ಯುನ್ಮಾನ ಮತಯಂತ್ರಗಳ (EVM) ಹಲವು ಸುತ್ತುಗಳ ಎಣಿಕೆಯ ನಂತರ ಈ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳದ ರಾಜಕೀಯವಾಗಿ ಅತ್ಯಂತ ಪ್ರಮುಖವಾದ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಸಿ ರಾಣಿ ರಥ್ ಆರಂಭದಿಂದಲೇ ಭಾರಿ ಮುನ್ನಡೆ ಸಾಧಿಸಿ, ಅಂತಿಮವಾಗಿ 1,22,753 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಈ ಗೆಲುವನ್ನು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.
ರೇಜಿನಗರದಲ್ಲೂ ಬಿಜೆಪಿ ಜಯಭೇರಿ:
ಇನ್ನೊಂದೆಡೆ, ರೇಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಖರವ್ ಸರ್ಕಾರ್ ಅವರು 1,29,914 ಮತಗಳನ್ನು ಪಡೆದು, ಆಮ್ ಜನತಾ ಉನ್ನಯನ್ ಪಾರ್ಟಿಯ ಗುಲಾಂ ನಬಿ ಆಜಾದ್ (ರಾಬಿನ್) ಅವರ ವಿರುದ್ಧ 75,816 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆ ಕದನ: ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್‌ಗೆ ಅಕ್ಟೋಬರ್ 21ರವರೆಗೆ ಮಧ್ಯಂತರ ಜಾಮೀನು
ಉಪಚುನಾವಣೆಗೆ ಕಾರಣ:
ನಂದಿಗ್ರಾಮ ಕ್ಷೇತ್ರ: ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ನಡೆಯಿತು.
ರೇಜಿನಗರ ಕ್ಷೇತ್ರ: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆಮ್ ಜನತಾ ಉನ್ನಯನ್ ಪಾರ್ಟಿ (AJUP) ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ರೇಜಿನಗರ ಮತ್ತು ನೌದಾ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ನಂತರ ಅವರು ನೌದಾ ಕ್ಷೇತ್ರವನ್ನು ಉಳಿಸಿಕೊಂಡು ರೇಜಿನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಇಲ್ಲಿ ಉಪಚುನಾವಣೆ ಎದುರಾಯಿತು.
ಇದನ್ನೂ ಓದಿ: ‘ಹೆದರಿ ತಲೆಬಾಗಲ್ಲ, ತಿರುಗಿಬೀಳುತ್ತೇವೆ’; ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ
ಈ ವರ್ಷದ ಆರಂಭದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಈ ಉಪಚುನಾವಣೆ ಮೊದಲ ದೊಡ್ಡ ರಾಜಕೀಯ ಪರೀಕ್ಷೆಯಾಗಿತ್ತು.
ಗಮನ ಸೆಳೆದ ಹಾಸಿ ರಾಣಿ ರಥ್ ಸ್ಪರ್ಧೆ:
ಸುವೇಂದು ಅಧಿಕಾರಿ ಅವರ ನಿಕಟವರ್ತಿಯಾಗಿದ್ದ ಚಂದ್ರನಾಥ್ ರಥ್ ಅವರನ್ನು ಮೇ 6ರಂದು (ವಿಧಾನಸಭಾ ಫಲಿತಾಂಶ ಪ್ರಕಟವಾದ 2 ದಿನಗಳ ನಂತರ) ಗುಂಡಿಕ್ಕಿ ಕೊಲ್ಲಲಾಗಿತ್ತು. ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಕ್ಷೇತ್ರವನ್ನು ತೆರವುಗೊಳಿಸಿದಾಗ, ಅವರ ಬೆಂಬಲದೊಂದಿಗೆ ಬಿಜೆಪಿ ಚಂದ್ರನಾಥ್ ಅವರ ತಾಯಿ ಹಾಸಿ ರಾಣಿ ರಥ್ ಅವರನ್ನು ಕಣಕ್ಕಿಳಿಸಿತ್ತು.
ಕಾಂಗ್ರೆಸ್-ಟಿಎಂಸಿ ಮೈತ್ರಿ:
ಈ ಉಪಚುನಾವಣೆಯು ವಿರೋಧ ಪಕ್ಷಗಳ ನಡುವಿನ ರಾಜಕೀಯ ಮರುಜೋಡಣೆಗೂ ಸಾಕ್ಷಿಯಾಯಿತು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಣದಿಂದ ಕಣಕ್ಕಿಳಿದಿದ್ದ ಸಂಚಿತಾ ಪ್ರಧಾನ್ ಡೇ ಅವರು ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ನಂತರ ಅವರು ತಮ್ಮ ಸ್ಪರ್ಧೆಯಿಂದ ಹಿಂದೆ ಸರಿದರು. ನಂತರ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮಿಲನ್ ಪ್ರಧಾನ್ ಅವರನ್ನು ಹಳೆಯ ಕೇಸೊಂದರಲ್ಲಿ ಪೊಲೀಸರು ಬಂಧಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Fri, 9 October 26