ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ ಹೆಚ್ಚಳ: ಜನರಿಗೆ ಧನ್ಯವಾದ ಹೇಳಿದ ಜೆ.ಪಿ.ನಡ್ಡಾ
2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ ಈ ಬಾರಿ ಹೆಚ್ಚು ಮತಗಳಿಸಲು ಸಫಲವಾಗಿದೆ. 7000 ವಾರ್ಡ್ಗಳಲ್ಲಿ ಅರ್ಧದಷ್ಟಾದರೂ ವಾರ್ಡ್ಗಳನ್ನು ಗೆಲ್ಲಬೇಕು ಎಂದು ಎನ್ಡಿಎ ಕಾರ್ಯತಂತ್ರ ರೂಪಿಸಿದ್ದರೂ ಗೆಲ್ಲಲು ಸಾಧ್ಯವಾಗಿದ್ದು 2000 ವಾರ್ಡ್ಗಳು.
ನವದೆಹಲಿ: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ ಹೆಚ್ಚಳವಾಗಿದ್ದು, ಕೇರಳದ ಮತದಾರರಿಗೆ ಧನ್ಯವಾದಗಳು. ಇನ್ನು ಮುಂದೆಯೂ ನಾವು ಎಲ್ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ಭ್ರಷ್ಟಾಚಾರ, ಕೋಮುವಾದ ಮತ್ತು ಬೂಟಾಟಿಕೆಯನ್ನು ಬಯಲು ಮಾಡುವ ಕಾರ್ಯ ಮುಂದುವರಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟಿಸಿದ್ದಾರೆ.
ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ಡಿಎಫ್ ಭರ್ಜರಿ ಗೆಲುವು ಸಾಧಿಸಿತ್ತು. ಎರಡನೇ ಸ್ಥಾನದಲ್ಲಿ ಯುಡಿಎಫ್ ಮತ್ತು ಬಿಜೆಪಿಗೆ ಮೂರನೇ ಸ್ಥಾನ ಲಭಿಸಿತ್ತು.
ಚುನಾವಣೆ ಫಲಿತಾಂಶ ಕೇರಳದ ಆರು ಮಹಾನಗರಪಾಲಿಕೆಗಳ ಪೈಕು ಐದನ್ನು ಎಲ್ಡಿಎಫ್ ಗೆದ್ದುಕೊಂಡಿದೆ. 86 ನಗರಸಭೆಗಳ ಪೈಕಿ 45ರಲ್ಲಿ ಯುಡಿಎಫ್, 35ರಲ್ಲಿ ಎಲ್ಡಿಎಫ್, 2 ಕಡೆ ಬಿಜೆಪಿ ಮತ್ತು 4 ಕಡೆ ಸ್ವತಂತ್ರ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲಾ ಪಂಚಾಯತಿಗಳಲ್ಲಿ ಎಲ್ಡಿಎಫ್ 11, ಯುಡಿಎಫ್ 3 ಕಡೆ ಗೆಲುವು ಸಾಧಿಸಿದೆ. ಗ್ರಾಮ ಪಂಚಾಯತಿಗಳಲ್ಲಿ ಎಲ್ಡಿಎಫ್ 514, ಯುಡಿಎಫ್ 375, ಎನ್ಡಿಎ 29, ಇತರರು 29 ಕಡೆ ಮುನ್ನಡೆ ಸಾಧಿಸಿದ್ದಾರೆ. 152 ಬ್ಲಾಕ್ ಪಂಚಾಯತಿಗಳ ಪೈಕಿ 108 ಎಲ್ಡಿಎಫ್ ಮತ್ತು 44 ಕಡೆ ಯುಡಿಎಫ್ ಗೆಲುವು ಸಾಧಿಸಿದೆ.
ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರ ಬ್ಲಾಕ್ ಪಂಚಾಯತ್ ಡಿವಿಷನ್ ಕಲ್ಲಾಮಲಯಿಲ್ನಲ್ಲಿ ಸಿಪಿಎಂ ಅಭ್ಯರ್ಥಿ ಡಾ. ಆಶಿಷ್ ಗೆದ್ದಿದ್ದಾರೆ. ತ್ರಿಶ್ಶೂರ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯ ಮೇಯರ್ ಅಭ್ಯರ್ಥಿ, ಬಿಜೆಪಿ ವಕ್ತಾರ ಬಿ. ಗೋಪಾಲಕೃಷ್ಣನ್ ಪರಾಭವಗೊಂಡಿದ್ದಾರೆ.
ಪಿಣರಾಯಿ, ಕತಿರೂರ್ ಪಂಚಾಯತ್ನ ಎಲ್ಲ ವಾರ್ಡ್ಗಳನ್ನು ಎಲ್ಡಿಎಫ್ ಗೆದ್ದುಕೊಂಡಿದೆ. ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುದುಪ್ಪಳ್ಳಿ ಪಂಚಾಯತಿಯಲ್ಲಿಯೂ ಎಡರಂಗ ವಿಜಯ ಗಳಿಸಿದೆ. ವೆಂಙಾನ್ನೂರ್ ಜಿಲ್ಲಾ ಪಂಚಾಯತ್ ಡಿವಿಷನ್ ನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್ . ಸುರೇಶ್ ಅವರು ಸೋತಿದ್ದಾರೆ.
I thank the people of Kerala for giving an improved mandate to BJP in Local Body Elections. @BJP4Keralam President @surendranbjp Ji & Karyakartas worked tirelessly & with this mandate, we will continue to expose the corrupt, communal & hypocrite politics of both LDF & UDF fronts.
— Jagat Prakash Nadda (@JPNadda) December 17, 2020
ಕೇರಳದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದ್ದರೂ ಮತಗಳಿಕೆ ಹೆಚ್ಚಳ
2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ ಈ ಬಾರಿ ಹೆಚ್ಚು ಮತಗಳಿಸಲು ಸಫಲವಾಗಿದೆ. 7000 ವಾರ್ಡ್ಗಳಲ್ಲಿ ಅರ್ಧದಷ್ಟಾದರೂ ವಾರ್ಡ್ಗಳನ್ನು ಗೆಲ್ಲಬೇಕು ಎಂದು ಎನ್ಡಿಎ ಕಾರ್ಯತಂತ್ರ ರೂಪಿಸಿದ್ದರೂ ಗೆಲ್ಲಲು ಸಾಧ್ಯವಾಗಿದ್ದು 2000 ವಾರ್ಡ್ಗಳು.
ತಿರುವನಂತಪುರಂ ಮತ್ತು ತ್ರಿಶ್ಶೂರ್ ಮಹಾನಗರಪಾಲಿಕೆಗಳಲ್ಲಿ ಗೆಲ್ಲುವ ಆತ್ಮವಿಶ್ವಾಸ ಬಿಜೆಪಿಗಿದ್ದರೂ ಅಲ್ಲಿ ಗೆಲುವು ಸಾಧ್ಯವಾಗಲಿಲ್ಲ. ಏತನ್ಮಧ್ಯೆ ಎಡರಂಗದ ಭದ್ರಕೋಟೆ ಎಂದೇ ಕರೆಯಲ್ಪಡುವ ಕಣ್ಣೂರ್ ಸೇರಿದಂತೆ ಎಲ್ಲ ಕಾರ್ಪೊರೇಷನ್ಗಳಲ್ಲಿ ಎನ್ಡಿಎ ಕೆಲವು ಸೀಟುಗಳನ್ನು ಗೆದ್ದುಕೊಂಡಿತು.
ಬಿಜೆಪಿಯನ್ನು ಪರಾಭವಗೊಳಿಸಲು ಯುಡಿಎಫ್ ಮತ್ತು ಎಲ್ಡಿಎಫ್ ಜತೆಯಾಗಿ ಪ್ರಯತ್ನಿಸಿದೆ ಎಂದು ಬಿಜೆಪಿ ಆರೋಪಿಸಿದೆ. ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಯುಡಿಎಫ್ ಕೇವಲ 10 ಸೀಟುಗಳಿಸಿದ್ದು ಇದಕ್ಕೆ ಉದಾಹರಣೆ ಎಂದು ಬಿಜೆಪಿ ಹೇಳಿದೆ.