Rajya Sabha ByPoll: ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಕೇಂದ್ರ ಸಚಿವ ಎಲ್.ಮುರುಗನ್
ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯರಾಗಿದ್ದ ಥಾವರ್ಚಂದ್ ಗೆಹ್ಲೋಟ್ ಕಳೆದ ಜುಲೈನಲ್ಲಿ ರಾಜೀನಾಮೆ ನೀಡಿದ್ದು, ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು.
ಬಿಜೆಪಿ ನಾಯಕ, ಕೇಂದ್ರ ಸಚಿವ ಎಲ್.ಮುರುಗನ್ ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಯೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ. ಅಕ್ಟೋಬರ್ 4ರಂದು ರಾಜ್ಯಸಭಾ ಉಪಚುನಾವಣೆ ನಡೆಯಲಿದ್ದರೂ, ಇಲ್ಲಿ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನೂ ನಿಲ್ಲಿಸಲಿಲ್ಲ. ಹೀಗಾಗಿ ಮುರುಗನ್ ಅವಿರೋಧ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಮಧ್ಯಪ್ರದೇಶದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಬಿಜೆಪಿಯಿಂದ ಎಲ್. ಮುರುಗನ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ನಿನ್ನೆ ನಾಮಪತ್ರ ಹಿಂಪಡೆಯಲು ಕೊನೇದಿನವಾಗಿದ್ದರೂ ಕಾಂಗ್ರೆಸ್ ಸೇರಿ ಯಾವುದೇ ಪಕ್ಷದ ಅಭ್ಯರ್ಥಿಯೂ ಕಣಕ್ಕೆ ಇಳಿಯಲಿಲ್ಲ. ಹೀಗಾಗಿ ಎಲ್. ಮುರುಗನ್ ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು. ಮುರುಗನ್ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಬೇರೆ ಯಾವುದೇ ಅಭ್ಯರ್ಥಿಯೂ ಇಲ್ಲ. ಆಡಳಿತ ಪಕ್ಷಕ್ಕೆ ಸ್ಪಷ್ಟಬಹುಮತ ಇದೆ ಎಂದು ಮಧ್ಯಪ್ರದೇಶ ವಿಧಾನಸಭೆ ಸೆಕ್ರೆಟರಿಯೇಟ್ ಪ್ರಧಾನ ಕಾರ್ಯದರ್ಶಿ ಮತ್ತು ರಿಟರ್ನಿಂಗ್ ಅಧಿಕಾರಿ ಎ.ಪಿ.ಸಿಂಗ್ ಹೇಳಿದ್ದಾರೆ. ಅಲ್ಲದೆ, ಮುರುಗನ್ ಅವರಿಗೆ ಗೆಲುವಿನ ಪ್ರಮಾಣಪತ್ರವನ್ನೂ ನೀಡಲಾಗಿದೆ ಎಂದಿದ್ದಾರೆ.
ಥಾವರ್ಚಂದ್ ಗೆಹ್ಲೋಟ್ ರಾಜೀನಾಮೆಯಿಂದ ತೆರವು ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯರಾಗಿದ್ದ ಥಾವರ್ಚಂದ್ ಗೆಹ್ಲೋಟ್ ಕಳೆದ ಜುಲೈನಲ್ಲಿ ರಾಜೀನಾಮೆ ನೀಡಿದ್ದು, ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು. ಮುರುಗನ್ ಅವರು ಜುಲೈನಲ್ಲಿ ಪ್ರಧಾನಿ ಮೋದಿ ಕ್ಯಾಬಿನೆಟ್ ಸೇರಿದ್ದರು. ಅದಕ್ಕೂ ಮೊದಲು ತಮಿಳುನಾಡು ಬಿಜೆಪಿ ಘಟಕಕ್ಕಾಗಿ ಕೆಲಸ ಮಾಡುತ್ತಿದ್ದರು. ಕೇಂದ್ರ ಮಾಹಿತಿ, ಪ್ರಸಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಇಲಾಖೆ ರಾಜ್ಯಸಚಿವರಾಗಿದ್ದ ಎಲ್.ಮುರುಗನ್ ಇದೀಗ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ 230 ಸದಸ್ಯರಿದ್ದು, ಅದರಲ್ಲಿ ಬಿಜೆಪಿಯ 125 ಶಾಸಕರು, ಕಾಂಗ್ರೆಸ್ನ 95, ಬಹುಜನ ಸಮಾಜ ಪಾರ್ಟಿಯ 2, ಸಮಾಜವಾದಿ ಪಕ್ಷದ 1 ಮತ್ತು ಸ್ವತಂತ್ರ ಶಾಸಕರು ನಾಲ್ವರು ಇದ್ದಾರೆ. ಮೂರು ಸ್ಥಾನಗಳು ಖಾಲಿ ಇವೆ. ಹಾಗೇ, ಮಧ್ಯಪ್ರದೇಶದಿಂದ ಒಟ್ಟು 11 ರಾಜ್ಯಸಭಾ ಸೀಟ್ಗಳಿವೆ. ಇದೀಗ ಮುರುಗನ್ ಆಯ್ಕೆಯ ಮೂಲಕ ಬಿಜೆಪಿ ಸದಸ್ಯರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ನ ಮೂವರು ರಾಜ್ಯಸಭಾ ಸದಸ್ಯರು ಇದ್ದಾರೆ.
ಮಧ್ಯಪ್ರದೇಶದ ಬಿಜೆಪಿ ರಾಜ್ಯಸಭಾ ಸದಸ್ಯರು: ಎಂ.ಜೆ.ಅಕ್ಬರ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್, ಅಜಯ್ ಪ್ರತಾಪ್ ಸಿಂಗ್, ಕೈಲಾಶ್ ಸೋನಿ, ಸುಮರ್ ಸಿಂಗ್ ಸೋಲಂಕಿ, ಸಂಪತಿಯ ಉಯಿಕೆ ಮತ್ತು ಎಲ್. ಮುರುಗನ್. ಕಾಂಗ್ರೆಸ್ ಸದಸ್ಯರು: ದಿಗ್ವಿಜಯ್ ಸಿಂಗ್, ವಿವೇಕ್ ತಂಖಾ ಮತ್ತು ರಾಜಮಣಿ ಪಟೇಲ್.
ಇದನ್ನೂ ಓದಿ: Rajya Sabha Bypolls: ರಾಜ್ಯಸಭೆಯ 7 ಸ್ಥಾನಕ್ಕೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ
ಬಾಬನಿಪುರದಲ್ಲಿ ಸೆಕ್ಷನ್ 144 ಜಾರಿಮಾಡಲು ಬಿಜೆಪಿ ನಿಯೋಗ ಆಗ್ರಹ; ಗಲಾಟೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ದೂರು
(BJP Leader L Murugan elected uncontested to the Rajya Sabha from Madhya Pradesh)
Published On - 9:47 am, Tue, 28 September 21