ಫೆ. 4ರಂದು ಅಧಿವೇಶನದಲ್ಲಿ ನಡೆದಿದ್ದೇನು? ಕಾಂಗ್ರೆಸ್ ಮಹಿಳಾ ಸಂಸದರ 2 ವಿಡಿಯೋ ರಿಲೀಸ್ ಮಾಡಿದ ಬಿಜೆಪಿ

ಫೆ. 4ರಂದು ಲೋಕಸಭಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕಿತ್ತು. ಆದರೆ, ಕಾಂಗ್ರೆಸ್ ಮಹಿಳಾ ಸಂಸದರು ಪ್ರಧಾನಿ ಕುರ್ಚಿಯನ್ನು ಸುತ್ತುವರೆದು ಗದ್ದಲ ಎಬ್ಬಿಸಿದ್ದರಿಂದ ಪ್ರಧಾನಿ ಮೋದಿ ಸದನಕ್ಕೆ ಹಾಜರಾಗಲಿಲ್ಲ. ಹೀಗಾಗಿ, ಅವರ ಭಾಷಣ ರದ್ದಾಯಿತು. ಪ್ರಧಾನಿ ಮೋದಿಗೆ ನಾವು ಬೆದರಿಕೆ ಹಾಕಿಲ್ಲ ಎಂದು ಕಾಂಗ್ರೆಸ್ ಪುನರುಚ್ಛರಿಸುತ್ತಿರುವುದರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆ ದಿನ ನಡೆದ ಘಟನೆಯ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.

ಫೆ. 4ರಂದು ಅಧಿವೇಶನದಲ್ಲಿ ನಡೆದಿದ್ದೇನು? ಕಾಂಗ್ರೆಸ್ ಮಹಿಳಾ ಸಂಸದರ 2 ವಿಡಿಯೋ ರಿಲೀಸ್ ಮಾಡಿದ ಬಿಜೆಪಿ
Kiren Rijiju Releases Congress Women Mps Video
Image Credit source: PTI

Updated on: Feb 10, 2026 | 4:00 PM

ನವದೆಹಲಿ, ಫೆಬ್ರವರಿ 10: ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಭಾಷಣ ಮಾಡಬೇಕಾಗಿದ್ದ ದಿನವಾದ ಫೆ. 4ರಂದು ಲೋಕಸಭೆಯ ಒಳಗೆ ಏನೆಲ್ಲ ನಡೆಯಿತು ಎಂಬುದರ 2 ವಿಡಿಯೋಗಳನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. ಇಂದು ಬಿಜೆಪಿಯ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ ದೂರನ್ನು ಕೂಡ ಅವರು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಸಂಸದರು ಸಂಸತ್ತಿನ ಮಿತಿಗಳನ್ನು ಮೀರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದ ಕಿರಣ್ ರಿಜಿಜು, “ಕಾಂಗ್ರೆಸ್ ಪಕ್ಷವು ತಮ್ಮ ಸಂಸದರ ಅತ್ಯಂತ ಅವಮಾನಕರ ನಡವಳಿಕೆಯ ಬಗ್ಗೆ ಹೆಮ್ಮೆಪಡುತ್ತದೆ!! ನಾವು ಆ ದಿನ ಎಲ್ಲಾ ಬಿಜೆಪಿ ಸಂಸದರನ್ನು ತಡೆಯದಿದ್ದರೆ ಆ ದಿನ ತುಂಬಾ ಮುಜುಗರದ ದೃಶ್ಯಕ್ಕೆ ಕಾರಣವಾಗುತ್ತಿತ್ತು. ಸಂಸತ್ತಿನ ಘನತೆ ಮತ್ತು ಪಾವಿತ್ರ್ಯವನ್ನು ರಕ್ಷಿಸಲು ನಾವು ಆ ದಿನ ಸುಮ್ಮನಿದ್ದೆವು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಏನೋ ಪ್ಲಾನ್ ಮಾಡಿದೆಯೆಂದು ನಾನೇ ಪ್ರಧಾನಿ ಮೋದಿಗೆ ಗೈರಾಗಲು ಸೂಚಿಸಿದ್ದೆ; ಸ್ಪೀಕರ್ ಓಂ ಬಿರ್ಲಾ

ಫೆಬ್ರವರಿ 4ರಂದು ಮೋದಿಯವರ ಭಾಷಣಕ್ಕೆ ಕೆಲವೇ ನಿಮಿಷಗಳ ಮೊದಲು ಅಧಿವೇಶನವನ್ನು ಮುಂದೂಡಬೇಕಾಯಿತು. ಕಾಂಗ್ರೆಸ್ ಮಹಿಳಾ ಸಂಸದರ ಗದ್ದಲದಿಂದ ಸ್ಪೀಕರ್ ಓಂ ಬಿರ್ಲಾ ತಾವೇ ಪ್ರಧಾನಿ ಮೋದಿಗೆ ಅಧಿವೇಶನಕ್ಕೆ ಹಾಜರಾಗದಿರಲು ಸೂಚಿಸಿದ್ದಾಗಿ ಹೇಳಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು.


ಈ ಹಿನ್ನೆಲೆಯಲ್ಲಿ ಇಂದು 2 ವಿಡಿಯೋಗಳನ್ನು ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. “ಗೌರವಾನ್ವಿತ ಸಂಸದರ ಇಂತಹ ನಡವಳಿಕೆಗಳನ್ನು ಯಾರಾದರೂ ಸಮರ್ಥಿಸಲು ಸಾಧ್ಯವೇ? ನಾವು ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕು. ಯಾವುದೇ ಬಿಜೆಪಿ ಸಂಸದರು ಅಸಭ್ಯವಾಗಿ ವಿರೋಧ ಪಕ್ಷದ ಸಂಸದರೊಂದಿಗೆ ದೈಹಿಕ ಘರ್ಷಣೆಗೆ ಇಳಿಯಬಾರದು ಎಂಬುದು ನಮ್ಮ ಹೈಕಮಾಂಡ್​ನ ಸ್ಪಷ್ಟ ನಿರ್ದೇಶನವಾಗಿತ್ತು” ಎಂದು ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಮೋದಿ ಕುರ್ಚಿ ಸುತ್ತುವರೆದಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್​ಗೆ ಪತ್ರ ಬರೆದ ಬಿಜೆಪಿಯ ಮಹಿಳಾ ಸಂಸದರು

“ಬಿಜೆಪಿ ಮಹಿಳಾ ಸಂಸದರು ಕಾಂಗ್ರೆಸ್ ಸಂಸದರ ವರ್ತನೆಯ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಸಂಸದರು ಪ್ರಧಾನಿ ಕುಳಿತುಕೊಳ್ಳುವ ಬೆಂಚನ್ನು ದಾಟಿ, ಖಜಾನೆ ಕಡೆಗೆ ಹೋದರು. ಅವರು ಇಡೀ ಪ್ರದೇಶವನ್ನು ಬಹುತೇಕ ಮುತ್ತಿಗೆ ಹಾಕಿದ್ದರು. ಕಾಂಗ್ರೆಸ್ ಸಂಸದರು ಖಜಾನೆ ಕಡೆಗೆ ದಾಟಿದ ನಂತರ ಬಿಜೆಪಿ ಮಹಿಳಾ ಸಂಸದರು ಕೋಪಗೊಂಡರು. ಆ ವೇಳೆ ನಮ್ಮ ಬಿಜೆಪಿ ಹಾಗೂ ಎನ್‌ಡಿಎ ಸಂಸದರನ್ನು ನಾವು ನಿಯಂತ್ರಿಸಬೇಕಾಗಿತ್ತು. ಕಾಂಗ್ರೆಸ್ ಸಂಸದರ ಈ ವರ್ತನೆಯಿಂದ ಬಿಜೆಪಿ ಮಹಿಳಾ ಸಂಸದರು ತುಂಬಾ ಉದ್ರೇಕಗೊಂಡರು. ಆದರೂ ನಾವು ಸದನಕ್ಕೆ ಗೌರವ ಕೊಟ್ಟು ನಮ್ಮ ಸಂಸದರು ದೈಹಿಕ ಘರ್ಷಣೆ ಮಾಡದಂತೆ ತಡೆದಿದ್ದೇವೆ. ನಂತರ ಕಾಂಗ್ರೆಸ್ ಸಂಸದರು ಸ್ಪೀಕರ್ ಕೊಠಡಿಗೆ ಹೋಗಿ ಸ್ಪೀಕರ್‌ಗೆ ಬೆದರಿಕೆ ಹಾಕಿದರು. ಹೀಗಾಗಿ ಬಿಜೆಪಿ ಮಹಿಳಾ ಸಂಸದರು ದೂರು ದಾಖಲಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ