ಕಾಂಗ್ರೆಸ್ ಏನೋ ಪ್ಲಾನ್ ಮಾಡಿದೆಯೆಂದು ನಾನೇ ಪ್ರಧಾನಿ ಮೋದಿಗೆ ಗೈರಾಗಲು ಸೂಚಿಸಿದ್ದೆ; ಸ್ಪೀಕರ್ ಓಂ ಬಿರ್ಲಾ
ನಿನ್ನೆ (ಬುಧವಾರ) ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರವಾಗಿ ಭಾಷಣ ಮಾಡಬೇಕಿತ್ತು. ಆದರೆ, ಅವರು ಸದನಕ್ಕೆ ಗೈರುಹಾಜರಾಗಿದ್ದರು. ಸಂಜೆ ಪ್ರಧಾನಿ ಮೊದಿಯವರ ಭಾಷಣ ಸಮಯ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದರು ಪ್ರಧಾನಿಯ ಕುರ್ಚಿಗೆ ಮುತ್ತಿಗೆ ಹಾಕಿ ಗದ್ದಲ ಎಬ್ಬಿಸಿದ್ದರು. ತಮಗೆ ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಸಿಕ್ಕಿದ್ದರಿಂದಲೇ ಭದ್ರತಾ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಕಲಾಪಕ್ಕೆ ಗೈರುಹಾಜರಾಗಲು ಸಲಹೆ ನೀಡಿದ್ದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಈ ಹೇಳಿಕೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

ನವದೆಹಲಿ, ಫೆಬ್ರವರಿ 5: “ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಏನೋ ಮಾಡಲು ಪ್ಲಾನ್ ಮಾಡಿದ್ದರು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಹೀಗಾಗಿಯೇ ನಿನ್ನೆಯ ಅಧಿವೇಶನಕ್ಕೆ ಬಾರದಂತೆ ಮತ್ತು ಕಲಾಪವನ್ನು ಉದ್ದೇಶಿಸಿ ಭಾಷಣ ಮಾಡದಂತೆ ನಾನೇ ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ್ದೆ” ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮುನ್ನ ಲೋಕಸಭಾ ಅಧಿವೇಶನವನ್ನು (Lok Sabha Session) ಮುಂದೂಡಲಾಗಿತ್ತು. ಇದಕ್ಕೆ ಕಾರಣವಾದ ಗದ್ದಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ಸದಸ್ಯರು ಪ್ರಧಾನಮಂತ್ರಿಗಳ ಕುರ್ಚಿಯನ್ನು ಸುತ್ತುವರೆದಿದ್ದರಿಂದ ಭದ್ರತಾ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಲೋಕಸಭೆಗೆ ಬರದಂತೆ ನಾನೇ ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.
“ಲೋಕಸಭೆಯ ಕೊಠಡಿಯೊಳಗೆ ಕೆಲವು ವಿರೋಧ ಪಕ್ಷದ ಸದಸ್ಯರು “ದುರ್ವರ್ತನೆ” ತೋರಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಧಾನಿ ಭಾಷಣದ ಸಮಯದಲ್ಲಿ ಅವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸಬಹುದು ಎಂಬ ಪೂರ್ವ ಮಾಹಿತಿ ನನಗೆ ಸಿಕ್ಕಿತ್ತು. ಇತಿಹಾಸದಲ್ಲಿ ಎಂದಿಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಂಸತ್ತಿನ ಸದನಕ್ಕೆ ತಂದಿರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಪ್ರಧಾನಿಯವರ ಪೀಠದ ಬಳಿಗೆ ಹೋಗಿ ಗದ್ದಲ ನಡೆಸಿದರು. ಇದು ಅನಿರೀಕ್ಷಿತ ದಾಳಿಗೂ ಕಾರಣವಾಗಬಹುದು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಅಂತಹ ಘಟನೆ ಸಂಭವಿಸಿದ್ದರೆ ಅದು ರಾಷ್ಟ್ರದ ಘನತೆಗೆ ತೀವ್ರ ಹಾನಿಯನ್ನುಂಟು ಮಾಡುತ್ತಿತ್ತು. ಅದಕ್ಕಾಗಿಯೇ ನಾನು ಪ್ರಧಾನಿಯನ್ನು ಸಂಸತ್ತಿಗೆ ಬರದಂತೆ ಒತ್ತಾಯಿಸಿದೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಕಲಾಪವನ್ನು ಮುಂದೂಡಲಾಯಿತು. ನಿನ್ನೆ ನಡೆದದ್ದು ಸಂಸತ್ತಿನ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ” ಎಂದು ಲೋಕಸಭಾ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Parliament Session: ಇಂದು ಪ್ರಧಾನಿ ಮೋದಿ ಭಾಷಣ ರದ್ದು; ವಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗಗಳನ್ನು ಓದದಂತೆ ನಿರ್ಬಂಧಿಸಿದ ನಂತರ ಬುಧವಾರ ಲೋಕಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಬಿಜೆಪಿಯ ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ರಾಹುಲ್ ಗಾಂಧಿಯ ಈ ಕ್ರಮವನ್ನು ಬಲವಾಗಿ ವಿರೋಧಿಸಿದರು.
“Opposition MPs could have turned unruly”: Om Birla
Lok Sabha Speaker Om Birla said he personally requested Prime Minister Narendra Modi to skip Wednesday’s scheduled address after repeated disruptions in the House
Birla said Opposition MPs had surrounded the… pic.twitter.com/Tjl9uce5LD
— Nabila Jamal (@nabilajamal_) February 5, 2026
ಬಳಿಕ ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಎಡ್ವಿನಾ ಮತ್ತು ನೆಹರು ಮತ್ತು ದಿ ಮಿತ್ರೋಖಿನ್ ಆರ್ಕೈವ್‌ನಂತಹ ಪುಸ್ತಕಗಳನ್ನು ಉಲ್ಲೇಖಿಸಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದರು. ಸದನದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೊರತುಪಡಿಸಿ ಯಾವುದೇ ಪುಸ್ತಕ, ಪತ್ರಿಕೆ ಅಥವಾ ಪತ್ರವನ್ನು ಸಂಸದರು ಓದುವಂತಿಲ್ಲ. ರಾಹುಲ್ ಗಾಂಧಿ ನರವಾಣೆ ಅವರ ಪುಸ್ತಕವನ್ನು ಉಲ್ಲೇಖಿಸುವುದನ್ನು ತಡೆಯಲು ಇದೇ ನಿಯಮವನ್ನು ಅನ್ವಯಿಸಲಾಗಿತ್ತು ಎಂದು ಸದನದಲ್ಲಿ ತಿಳಿಸಲಾಯಿತು.
ಇದನ್ನೂ ಓದಿ: ಮಹಿಳಾ ಸಂಸದರನ್ನು ಛೂ ಬಿಟ್ಟ ಕಾಂಗ್ರೆಸ್; ಇಂದು ಸಂಸತ್ನಲ್ಲಿ ಮೋದಿ ಭಾಷಣ ಮಾಡದಿರಲು ಕಾರಣವೇನು?
ಆದರೂ ನಿಶಿಕಾಂತ್ ದುಬೆ ಅವರ ಹೇಳಿಕೆಗಳು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರಿಂದ ಪ್ರತಿಭಟನೆಗೆ ಕಾರಣವಾಯಿತು. ಅವರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಬಳಿಕ ಸಂಜೆ 5 ಗಂಟೆಯವರೆಗೆ ಕಲಾಪ ಮುಂದೂಡಬೇಕಾಯಿತು. ಕಲಾಪ ಮುಂದೂಡಿಕೆಯ ನಂತರ ಕಾಂಗ್ರೆಸ್ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ದುಬೆ ಅವರಿಗೆ ಪುಸ್ತಕಗಳಿಂದ ಉಲ್ಲೇಖಿಸಲು ಅವಕಾಶ ನೀಡಿದ್ದನ್ನು ಆಕ್ಷೇಪಿಸಿದರು. ಅದೇ ನಿಯಮವನ್ನು ಉಲ್ಲೇಖಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪುಸ್ತಕವನ್ನು ಓದಲು ಅವಕಾಶವನ್ನು ನಿರಾಕರಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದಂತೆ ನಿಶಿಕಾಂತ್ ದುಬೆ ಅವರನ್ನು ಕೂಡ ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ಆದರೆ, ಸ್ಪೀಕರ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಸಂಜೆ 5 ಗಂಟೆಗೆ ಸದನ ಮತ್ತೆ ಸೇರಿದಾಗ ಪ್ರತಿಭಟನೆಗಳು ತೀವ್ರಗೊಂಡವು. ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ನೇತೃತ್ವದಲ್ಲಿ ಮಹಿಳಾ ಸಂಸದರು ಪ್ರತಿಭಟನೆಯ ವೇಳೆ ಪ್ರಧಾನಿಯವರ ಕುರ್ಚಿಯ ಕಡೆಗೆ ತೆರಳಿ ಮುತ್ತಿಗೆ ಹಾಕಿದರು. ಯಾವುದೇ ಕಾರಣಕ್ಕೂ ಮೋದಿಗೆ ಭಾಷಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಹೀಗಾಗಿ, 1 ದಿನದ ಕಲಾಪವನ್ನು ಮುಂದೂಡಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Thu, 5 February 26
