ನಮ್ಮ ಪಕ್ಷ ಅಪರಾಧಿಗಳಿಗೆ ಆಶ್ರಯ ನೀಡುವುದಿಲ್ಲ: ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ
Annamalai “ನಾವು ಈ ಹಿಂದೆ ಅನೇಕ ಪ್ರದೇಶಗಳಲ್ಲಿ ಇದನ್ನು ಹೇಳಿದ್ದೇವೆ ಮತ್ತು ಈಗ ನಾನು ಅದನ್ನು ಪುನರುಚ್ಚರಿಸುತ್ತಿದ್ದೇನೆ. ಪೊಲೀಸರು ಯಾರನ್ನು ಹುಡುಕುತ್ತಾರೋ ಆ ಕ್ರಿಮಿನಲ್‌ಗಳಿಗೆ ಬಿಜೆಪಿ ಆಶ್ರಯ ನೀಡುವುದಿಲ್ಲ,
ಚೆನ್ನೈ: ಬಿಜೆಪಿಯಲ್ಲಿ ಅಪರಾಧಿಗಳಿಗೆ ಅವಕಾಶವಿಲ್ಲ, ಅಂಥವರಿಗೆ ಆಶ್ರಯ ನೀಡುವುದಿಲ್ಲ ಎಂದು ತಮಿಳುನಾಡು (Tamil Nadu) ಭಾರತೀಯ ಜನತಾ ಪಕ್ಷದ (BJP) ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರು ಬುಧವಾರ ಹೇಳಿದ್ದಾರೆ. “ನಾವು ಈ ಹಿಂದೆ ಅನೇಕ ಪ್ರದೇಶಗಳಲ್ಲಿ ಇದನ್ನು ಹೇಳಿದ್ದೇವೆ ಮತ್ತು ಈಗ ನಾನು ಅದನ್ನು ಪುನರುಚ್ಚರಿಸುತ್ತಿದ್ದೇನೆ. ಪೊಲೀಸರು ಯಾರನ್ನು ಹುಡುಕುತ್ತಾರೋ ಆ ಕ್ರಿಮಿನಲ್‌ಗಳಿಗೆ ಬಿಜೆಪಿ ಆಶ್ರಯ ನೀಡುವುದಿಲ್ಲ,” ಎಂದು ಅವರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಬಿಜೆಪಿಯ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ರೌಡಿ ಶೀಟರ್ ಪಡಪ್ಪೈ ಗುಣ ಅವರ ಕುಟುಂಬವನ್ನು ಇತ್ತೀಚೆಗೆ ಭೇಟಿಯಾದ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರು ಈ ಹೇಳಿಕೆ ನೀಡಿದ್ದಾರೆ. ಈ ಭೇಟಿ ಬಗ್ಗೆ ಹಿರಿಯ ನಾಯಕರನ್ನು ಕೇಳುವುದಾಗಿ ಅಣ್ಣಾಮಲೈ ಹೇಳಿದರು. ನಾನು ಅದರ ಬಗ್ಗೆ ತಿಳಿದುಕೊಂಡೆ. ಹಲವು ಮಾಧ್ಯಮಗಳೂ ಈ ಬಗ್ಗೆ ಬರೆದಿವೆ. ಅವರು (ರಾಧಾಕೃಷ್ಣನ್) ಕೇಂದ್ರ ಸಚಿವರಾಗಿದ್ದಾರೆ, ಅವರಿಗೆ ನಿಯಮಗಳು ಮತ್ತು ನಿಬಂಧನೆಗಳು ತಿಳಿದಿವೆ ಆದ್ದರಿಂದ ಆ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸುವುದು ಅವರ ಉದ್ದೇಶವಾಗಿರಲಿಲ್ಲ ಎಂದು ಅಣ್ಣಾಮಲೈ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸಭೆಯ ಬಗ್ಗೆ ತನಗೆ ಮಾಹಿತಿ ಇಲ್ಲ ಮತ್ತು ಪ್ರತಿದಿನ ಯಾರು ಯಾರನ್ನು ಭೇಟಿಯಾಗುತ್ತಿದ್ದಾರೆ ಎಂಬುದರ ಕುರಿತು ನೋಡಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಪೊನ್ ರಾಧಾಕೃಷ್ಣನ್ ಅವರು ರೌಡಿ ಶೀಟರ್ ಗುಣ ಅವರ ಕುಟುಂಬವನ್ನು ಭೇಟಿ ಮಾಡಿದ್ದು, ಗುಣ ಬಿಜೆಪಿ ಸೇರಬಹುದು ಎಂಬ ಊಹಾಪೋಹಕ್ಕೆ ಕಾರಣವಾಯಿತು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಒಂದೆರಡು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡಾಗ ತಮಿಳುನಾಡು ಬಿಜೆಪಿಯಲ್ಲಿ ವಿವಾದ ಸೃಷ್ಟಿಯಾಗಿತ್ತು.
ಶ್ರೀಪೆರಂಬದೂರ್ ಪಂಚಾಯತ್ ಯೂನಿಯನ್‌ನಲ್ಲಿ ವಾರ್ಡ್ ಕೌನ್ಸಿಲರ್ ಆಗಿರುವ ಗುಣ ಅವರ ಪತ್ನಿ ಎಲ್ಲಮಾಳ್ ಅವರನ್ನು ಕಾಂಚೀಪುರಂ ಪೊಲೀಸರು ಇತ್ತೀಚೆಗೆ ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಆರು ತಿಂಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಗುಣ ಪತ್ತೆಗಾಗಿ ಪೊಲೀಸರು ಇತರರನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಕೊಲೆ, ಸುಲಿಗೆ, ಅಪಹರಣ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳಿವೆ.
ತಮಿಳುನಾಡಿನಲ್ಲಿ 11 ಹೊಸ ವೈದ್ಯಕೀಯ ಕಾಲೇಜುಗಳ ಉದ್ಘಾಟನೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಂದ ಜನತೆಗೆ ಪೊಂಗಲ್ ಉಡುಗೊರೆಯಾಗಿದೆ ಎಂದು ಅಣ್ಣಾಮಲೈ ಹೇಳಿದರು.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಕುರಿತು ಪ್ರತಿಕ್ರಿಯಿಸಿದ ಅಣ್ಣಾಮಲೈ, ಪರೀಕ್ಷೆಯು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿಲ್ಲ ಆದರೆ ವಿದ್ಯಾರ್ಥಿಗಳಿಗೆ ಪ್ರವೇಶಕ್ಕಾಗಿ ಭಾರಿ ಕ್ಯಾಪಿಟೇಶನ್‌ಗೆ ಬೇಡಿಕೆಯಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ವಿರುದ್ಧ ಮಾತ್ರ ಗುರಿಯಾಗಿದೆ ಎಂದು ಹೇಳಿದರು. ಕೆಲವು ರಾಜಕೀಯ ಪಕ್ಷಗಳು ನೀಟ್ ಬಡವರ ಮತ್ತು ದೀನದಲಿತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂಬ ಅನಿಸಿಕೆ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಅಣ್ಣಾಮಲೈ, ಇದು ತಮ್ಮ ಮಹತ್ವಾಕಾಂಕ್ಷೆಯನ್ನು ಮುಂದುವರಿಸುವಲ್ಲಿ ಅನೇಕ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಈಡೇರಿಸಿದೆ ಎಂದಿದ್ದಾರೆ.
ಏತನ್ಮಧ್ಯೆ, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳುನಾಡಿಗೆ ನೀಟ್ ವಿನಾಯಿತಿಯನ್ನು ಸಾಕಾರಗೊಳಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. “ನಮ್ಮ ಆರೋಗ್ಯ ಮೂಲಸೌಕರ್ಯದಲ್ಲಿ ತಮಿಳುನಾಡಿನ ಪ್ರವೇಶ ನೀತಿಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದನ್ನು ಸಂರಕ್ಷಿಸಲು ತಮಿಳುನಾಡಿಗೆ ನೀಟ್‌ನಿಂದ ವಿನಾಯಿತಿ ನೀಡಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ. ನಮ್ಮ ಮನವಿಯನ್ನು ಅನುಕೂಲಕರವಾಗಿ ಪರಿಗಣಿಸುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸ್ಟಾಲಿನ್ ಹೇಳಿದರು.
ನಂತರ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ. ಮಧುರೈನಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಿರ್ಮಾಣ ಮತ್ತು ಸ್ಥಾಪನೆಯನ್ನು ತ್ವರಿತಗೊಳಿಸುವಂತೆ, ಸಂಪೂರ್ಣ ರಾಜ್ಯ ಅನುದಾನಿತ ವೈದ್ಯಕೀಯ ಸಂಸ್ಥೆಗಳಿಗೆ ಅಖಿಲ ಭಾರತ-ಕೋಟಾ ರದ್ದತಿ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಹೆಚ್ಚುವರಿ ಧನಸಹಾಯ ಮತ್ತು ಇತರ ಬೇಡಿಕೆಗಳ ಜ್ಞಾಪಕ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ಮಾನವಸಹಿತ ಗಗನಯಾನ ಯೋಜನೆಗೆ ಇಸ್ರೊ ಸಿದ್ಧತೆ; ಇಸ್ರೊ ನೂತನ ಮುಖ್ಯಸ್ಥ ಸೋಮನಾಥ್ ಮುಂದಿದೆ ದೊಡ್ಡ ಸವಾಲು