
ನವದೆಹಲಿ, ಜೂನ್ 05: ಬಿಜೆಪಿಗೆ ಕೆ ಅಣ್ಣಾಮಲೈ(K Annamalai) ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅಂಗೀಕರಿಸಿದ್ದಾರೆ. ಕೆ. ಅಣ್ಣಾಮಲೈ ಅವರ ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆಗಿನ ಸಂಬಂಧ ಶುಕ್ರವಾರ ಕೊನೆಗೊಂಡಿದೆ. ಬಿಜೆಪಿಯ ತಮಿಳುನಾಡು ಘಟಕದ ಮುಖ್ಯಸ್ಥ ಅಣ್ಣಾಮಲೈ ಅವರು ಮಧ್ಯಾಹ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ತಮ್ಮ ಭವಿಷ್ಯದ ಯೋಜನೆಗಳನ್ನು ಪ್ರಕಟಿಸಲಿದ್ದಾರೆ.
ತಮಿಳುನಾಡು ರಾಜಕಾರಣದಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದ್ದ ತೀವ್ರ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದ್ದು, ಹಿರಿಯ ನಾಯಕ ಹಾಗೂ ತಮಿಳುನಾಡು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಕ್ಷದ (BJP) ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಅಣ್ಣಾಮಲೈ ಅವರ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರ ಈ ದಿಢೀರ್ ನಿರ್ಧಾರವು ದಕ್ಷಿಣ ಭಾರತದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ತಮ್ಮ ಮುಂದಿನ ನಡೆ ಹಾಗೂ ಭವಿಷ್ಯದ ರಾಜಕೀಯ ಯೋಜನೆಗಳ ಕುರಿತು ಸಾರ್ವಜನಿಕವಾಗಿ ಪ್ರಕಟಿಸಲು ಅಣ್ಣಾಮಲೈ ಅವರು ಇಂದು ಮಧ್ಯಾಹ್ನ ಕೋಯಮತ್ತೂರಿನಲ್ಲಿ ಪ್ರಮುಖ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದಾರೆ. ಯುವ ಜನತೆಯಲ್ಲಿ ಭಾರಿ ಕ್ರೇಜ್ ಹೊಂದಿರುವ ಅಣ್ಣಾಮಲೈ ಅವರ ಹೊಸ ರಾಜಕೀಯ ಪಯಣವು ತಮಿಳುನಾಡಿನ ಭವಿಷ್ಯದ ಸಮೀಕರಣಗಳನ್ನು ಮರುರೂಪಿಸಲಿದೆ ಎಂದು ವಿಶ್ಲೇಷಕರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: K Annamalai Birthday: ಕೆ ಅಣ್ಣಾಮಲೈ ಹುಟ್ಟುಹಬ್ಬ: ಕರ್ನಾಟಕದಲ್ಲಿ ವೃತ್ತಿಜೀವನ, ರಾಜೀನಾಮೆ ಮತ್ತು ಬಿಜೆಪಿ ಪಯಣದ ಸಮಗ್ರ ನೋಟ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಅಣ್ಣಾಮಲೈ ಅವರ ಈ ಸ್ವತಂತ್ರ ನಿರ್ಧಾರವನ್ನು ಗೌರವಿಸಿ, ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ತಮ್ಮ ಈ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸುವ ಮುನ್ನ ಅಣ್ಣಾಮಲೈ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ್ದರು.
ಜನಪ್ರಿಯ ನಾಯಕನಾಗಿ ಹೊರಹೊಮ್ಮಿರುವ ಅಣ್ಣಾಮಲೈ ಅವರ ಕಾರ್ಯಕ್ಷಮತೆಯನ್ನು ಮೆಚ್ಚಿದ್ದ ಉನ್ನತ ನಾಯಕರು, ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅತ್ಯಂತ ಪ್ರೀತಿಯಿಂದ ವಿನಂತಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ, ತಮಿಳುನಾಡಿನ ಜನರ ಸೇವೆಗಾಗಿ ವಿಶಾಲವಾದ ಮತ್ತು ಮುಕ್ತ ರಾಜಕೀಯ ವೇದಿಕೆಯೊಂದನ್ನು ನಿರ್ಮಿಸುವ ಅಣ್ಣಾಮಲೈ ಅವರ ಮಹತ್ವಾಕಾಂಕ್ಷೆಯ ದೃಷ್ಟಿಕೋನಕ್ಕೆ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಮುಕ್ತವಾಗಿ ಹಾರೈಸಿದೆ.
‘ಸಿಂಗಮ್’ ಅಣ್ಣಾಮಲೈ ಅವರ ಯಶಸ್ವಿ ರಾಜಕೀಯ ಪಯಣ
2020 ರಲ್ಲಿ ತಮ್ಮ ಪ್ರತಿಷ್ಠಿತ ಐಪಿಎಸ್ ಹುದ್ದೆಯನ್ನು ತ್ಯಜಿಸಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ್ದ ಅಣ್ಣಾಮಲೈ ಅವರನ್ನು ಬೆಂಬಲಿಗರು ಪ್ರೀತಿಯಿಂದ ‘ಸಿಂಗಮ್’ ಎಂದೇ ಕರೆಯುತ್ತಾರೆ.
ಬಿಜೆಪಿಯಲ್ಲಿ ಉನ್ನತ ಸ್ಥಾನ: ಕೇವಲ ಒಂದು ವರ್ಷದಲ್ಲೇ (2021 ರಲ್ಲಿ) ಅವರ ಅತ್ಯುತ್ತಮ ಆಡಳಿತ ಮತ್ತು ಸಂಘಟನಾ ಚತುರತೆಯನ್ನು ಗುರುತಿಸಿ ತಮಿಳುನಾಡು ಬಿಜೆಪಿ ಘಟಕದ ಸಾರಥ್ಯವನ್ನು ನೀಡಲಾಯಿತು.
ಸ್ವತಂತ್ರ ರಾಜಕೀಯ ಚಿಂತನೆ: ಅವರ ದೃಢ ನಾಯಕತ್ವದ ಅವಧಿಯಲ್ಲಿ, ತಮಿಳುನಾಡಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಅತ್ಯಂತ ಯಶಸ್ವಿಯಾಗಿ ಸಂಘಟಿಸಲಾಯಿತು. ಪ್ರಮುಖ ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ (AIADMK) ಜೊತೆಗಿನ ಮೈತ್ರಿ ಸಮೀಕರಣಗಳನ್ನು ಪಕ್ಷದ ಹಿತದೃಷ್ಟಿಯಿಂದ ಅತ್ಯಂತ ಚಾಣಾಕ್ಷತನದಿಂದ ನಿರ್ವಹಿಸಿ, ಯುವ ಸಮೂಹವನ್ನು ರಾಜಕೀಯದ ಮುಖ್ಯವಾಹಿನಿಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:02 am, Fri, 5 June 26