ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ, ಸಮಾಜವಾದಿ ಪಕ್ಷಕ್ಕೆ ಭಾರೀ ಮುಖಭಂಗ
2016ರಲ್ಲಿ ನಡೆದ ಚುನಾವಣೆಗಳಿಗೆ ಹೋಲಿಸಿದರೆ, ಫಲಿತಾಂಶಗಳು ಅಕ್ಷರಶಃ ಉಲ್ಟಾ ಹೊಡೆದಿವೆ. ಆಗ 75 ಸೀಟುಗಳ ಪೈಕಿ ಯಾದವ್ ಅವರ ಎಸ್ಪಿ ಪಕ್ಷಕ್ಕೆ 60 ಸೀಟುಗಳು ಲಭಿಸಿದ್ದವು.
ಲಖನೌ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಗೆಲುವು ದಕ್ಕಲಿರುವುದು ಖಾತ್ರಿಯಾಗಿದ್ದು ಕಳೆದ ಬಾರಿಯ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಈ ಸಲ ದೊಡ್ಡ ನಿರಾಸೆ ಎದುರಾಗಲಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರ 75 ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದ್ದು 60ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವುದು ಖಚಿತಪಟ್ಟಿದೆ. ಯಾದವ್ ಅವರ ಪಕ್ಷ ಕೇವಲ 6 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಹೇಳಲಾಗಿದೆ.
2016ರಲ್ಲಿ ನಡೆದ ಚುನಾವಣೆಗಳಿಗೆ ಹೋಲಿಸಿದರೆ, ಫಲಿತಾಂಶಗಳು ಅಕ್ಷರಶಃ ಉಲ್ಟಾ ಹೊಡೆದಿವೆ. ಆಗ 75 ಸೀಟುಗಳ ಪೈಕಿ ಯಾದವ್ ಅವರ ಎಸ್ಪಿ ಪಕ್ಷಕ್ಕೆ 60 ಸೀಟುಗಳು ಲಭಿಸಿದ್ದವು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳ ವಿಶ್ಲೇಷಣೆ ಮಾಡುತ್ತಿರುವ ತಜ್ಞರ ಪ್ರಕಾರ ಸದರಿ ಚುನಾವಣೆಯ ಫಲಿತಾಂಶಗಳು ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಗಾಳಿ ಯಾವ ಕಡೆ ಬೀಸುತ್ತದೆ ಎನ್ನುವುದಕ್ಕೆ ನಿದರ್ಶನವಲ್ಲ ಎಂದು ಹೇಳಿದ್ದಾರೆ. ವಿಧಾನ ಸಭೆ ಚುಣಾವಣೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಲಿಟ್ಮಸ್ ಟೆಸ್ಟ್ ಆಗಿ ಪರಿಣಮಿಸಲಿದೆ. ಆದಾಗ್ಯೂ, ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವನ್ನು ಬಹಳ ಕಾತುರತೆಯಿಂದ ನಿರೀಕ್ಷಿಸಲಾಗುತ್ತಿದೆ.
ಹಿಂದೆ ಅಲಹಾಬಾದ್ ಎಂದು ಕರೆಸಿಕೊಳ್ಳುತ್ತಿದ್ದ ಪ್ರಯಾಗ್ರಾಜ್ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಿಗ್ಗಿಂಗ್ ನಡೆದಿದೆ ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ನಗರದ ಬೀದಿಗಳಿಗೆ ಇಳಿದಾಗ ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಚುನಾವಣೆಗಳಲ್ಲಿ ದಕ್ಕಿರುವ ಜಯ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ. ‘ಉತ್ತರ ಪ್ರದೇಶದ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಗೆ ದೊರೆತಿರುವ ಅಮೋಘ ಗೆಲುವು ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕ ಸೇವೆ ಮತ್ತು ನಾಡಿನ ಕಾನೂನಿಗೆ ಜನರು ನೀಡಿರುವ ಆಶೀರ್ವಾದವಾಗಿದೆ. ಯಶಸ್ಸಿನ ಶ್ರೇಯಸ್ಸು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜಾರಿಗೆ ತಂದಿರುವ ನೀತಿಗಳಿಗೆ ಮತ್ತು ದಣಿವರಿಯದೆ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಸಲ್ಲುತ್ತದೆ,’ ಎಂದು ಪ್ರಧಾನಿಗಳು ಟ್ವೀಟ್ ಮಾಡಿದ್ದಾರೆ.
यूपी जिला पंचायत चुनाव में भाजपा की शानदार विजय विकास, जनसेवा और कानून के राज के लिए जनता जनार्दन का दिया हुआ आशीर्वाद है।इसका श्रेय मुख्यमंत्री योगी जी की नीतियों और पार्टी कार्यकर्ताओं के अथक परिश्रम को जाता है। यूपी सरकार और भाजपा संगठन को इसके लिए हार्दिक बधाई।
— Narendra Modi (@narendramodi) July 3, 2021
‘ಬಿಜೆಪಿ 75 ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 67ರಲ್ಲಿ ಗೆಲುವು ಕಂಡಿದೆ. ನಾವು 2022ರ ವಿಧಾನ ಸಭೆ ಚುನಾವಣೆಯನ್ನು ಸಹ ಗೆಲ್ಲಲಿದ್ದೇವೆ,’ ಎಂದು ಯುಪಿ ಬಿಜೆಪಿ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರು ಎಎನ್ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಇದಕ್ಕೆ ಮೊದಲು ಬಿಜೆಪಿಯ 21 ಮತ್ತು ಸಮಾಜವಾದಿ ಪಕ್ಷದ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದರು. ಉತ್ತರ ಪ್ರದೇಶದಲ್ಲಿ ಸುಮಾರು 3,000 ಜಿಲ್ಲಾ ಪಂಚಾಯತ್ ಸದಸ್ಯರಿದ್ದಾರೆ. ಈ ಚುನಾವಣೆಯು 75 ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ಆಯ್ಕೆ ಮಾಡಿದೆ.
ಮಾಯಾವತಿಯವರ ಬಹುಜನ ಸಮಾಜ ಪಕ್ಷ ಈ ಚುನಾವಣೆಗಳಲ್ಲಿ ಸ್ಪರ್ಧಿಸಲಿಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿರುವುದು ಹೊಸದೇನೂ ಅಲ್ಲ. 2016 ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಸಮಾಜವಾದಿ ಪಕ್ಷದ 60 ಅಭ್ಯರ್ಥಿಗಳ ಪೈಕಿ 30 ಜನ ಅವಿರೋಧವಾಗಿ ಅಯ್ಕೆಯಾಗಿದ್ದರು. ಆಗ ಅಖಿಲೇಶ್ ಯಾದವ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೆ ಕೇವಲ ಒಂದು ವರ್ಷದ ನಂತರ ಬಿಜೆಪಿ ವಿಧಾನ ಸಭೆ ಚುನಾಣೆಯಲ್ಲಿ ಭರ್ಜರಿ ಜಯ ಸಾಧಿಸಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿಯವರಿಂದ ಅಯೋಧ್ಯೆ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆ; ರೂಪುರೇಷೆ, ಕಾರ್ಯಪ್ರಗತಿ ವಿವರಿಸಿದ ಸಿಎಂ ಯೋಗಿ
Published On - 10:38 pm, Sat, 3 July 21