ಗಾಜೀಪುರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ರೈತ ಪ್ರತಿಭಟನಾಕಾರರ ನಡುವೆ ಸಂಘರ್ಷ; ಇದು ಸರ್ಕಾರದ ಪಿತೂರಿ ಎಂದ ರೈತ ನಾಯಕರು

| Updated By: ರಶ್ಮಿ ಕಲ್ಲಕಟ್ಟ

Updated on: Jun 30, 2021 | 3:30 PM

Ghazipur Clash: ಬಿಜೆಪಿ ಕಾರ್ಯಕರ್ತರು ರೈತರೊಂದಿಗೆ ಕೆಟ್ಟದಾಗಿ ವರ್ತಿಸಿದರು ಪಿತೂರಿಯ ಭಾಗವಾಗಿ ತಮ್ಮ ವಾಹನಗಳನ್ನು ಹಾನಿಗೊಳಿಸಿದರು. ಸರ್ಕಾರದ ಈ ಪಿತೂರಿ ಯಶಸ್ವಿಯಾಗುವುದಿಲ್ಲ ಏಕೆಂದರೆ ರೈತರ ಪ್ರತಿಭಟನೆಯನ್ನು ಕೊನೆಗೊಳಿಸಲು ಇಂತಹ ತಂತ್ರಗಳನ್ನು ಈ ಹಿಂದೆ ಸಹ ಬಳಸಲಾಗಿದೆ, ”ಎಂದು ಬಜ್ವಾ ಹೇಳಿದರು.

ಗಾಜೀಪುರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ರೈತ ಪ್ರತಿಭಟನಾಕಾರರ ನಡುವೆ ಸಂಘರ್ಷ; ಇದು ಸರ್ಕಾರದ ಪಿತೂರಿ ಎಂದ ರೈತ ನಾಯಕರು
ಪ್ರತಿಭಟನೆ ನಿರತ ರೈತರು (ಸಂಗ್ರಹ ಚಿತ್ರ)
Follow us on

ಲಕ್ನೊ: ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಮತ್ತು ಕೃಷಿ ಕಾನೂನು ಪ್ರತಿಭಟನಾಕಾರರು ನಡುವೆ ಸಂಘರ್ಷವೇರ್ಪಟ್ಟಿದೆ. ಕೃಷಿ ಕಾನೂನು ವಿರೋಧಿಸುತ್ತಿರುವ ಪ್ರತಿಭಟನಾಕಾರರು, ಮುಖ್ಯವಾಗಿ ಭಾರತೀಯ ಕಿಸಾನ್ ಒಕ್ಕೂಟದ ಬೆಂಬಲಿಗರು 2020 ರ ನವೆಂಬರ್‌ನಿಂದ ಕ್ಯಾಂಪಿಂಗ್ ಮಾಡುತ್ತಿರುವ ಫ್ಲೈವೇನಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸುತ್ತಿದ್ದಾಗ ಈ ಸಂಘರ್ಷವೇರ್ಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಮಧ್ಯಾಹ್ನ 12 ರ ಸುಮಾರಿಗೆ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡೂ ಕಡೆಯವರು ಮುಖಾಮುಖಿಯಾಗುತ್ತಿದ್ದಂತೆ ಗಲಾಟೆ ನಡೆದು ಹೊಡಿಬಡಿಗೆ ಕಾರಣವಾಯಿತು ಎಂದು ಅವರು ಹೇಳಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಸಂಘರ್ಷದ ವಿಡಿಯೊಗಳು ಮತ್ತು ಚಿತ್ರಗಳು ಹರಿದಾಡುತ್ತಿದ್ದು ಬಿಜೆಪಿ ರಾಜಕಾರಣಿ ಅಮಿತ್ ವಾಲ್ಮೀಕಿ ಅವರ ಬೆಂಗಾವಲು ವಾಹನಗಳಿಗೆ ಹಾನಿಯಾಗಿದೆ. ವಾಲ್ಮೀಕಿ ಅವರಿಗೆ ಸ್ವಾಗತ ಕೋರಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದರು.


ಆದಾಗ್ಯೂ, ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ತಗ್ಗಿಸಲು ಮತ್ತು ಅದಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಇದೆಲ್ಲ ನಡೆಯುತ್ತಿದ್ದು ಇದು “ಸರ್ಕಾರದ ಪಿತೂರಿ” ಎಂದು ರೈತ ಮುಖಂಡರು ಆರೋಪಿಸಿದರು.

ಸ್ವಾಗತ ಮೆರವಣಿಗೆ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸುತ್ತಿರುವುದರಿಂದ ಪಕ್ಷದ ಕಾರ್ಯಕರ್ತರನ್ನು ಚದುರಿಸುವಂತೆ ಗಾಜಿಪುರ ಗಡಿಯಲ್ಲಿನ ರೈತರು ಜಿಲ್ಲಾಡಳಿತ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ವಕ್ತಾರ ಜಗ್ತಾರ್ ಸಿಂಗ್ ಬಾಜ್ವಾ ಹೇಳಿದ್ದಾರೆ.
“ಅವರು ರೈತರೊಂದಿಗೆ ಕೆಟ್ಟದಾಗಿ ವರ್ತಿಸಿದರು ಪಿತೂರಿಯ ಭಾಗವಾಗಿ ತಮ್ಮ ವಾಹನಗಳನ್ನು ಹಾನಿಗೊಳಿಸಿದರು. ಸರ್ಕಾರದ ಈ ಪಿತೂರಿ ಯಶಸ್ವಿಯಾಗುವುದಿಲ್ಲ ಏಕೆಂದರೆ ರೈತರ ಪ್ರತಿಭಟನೆಯನ್ನು ಕೊನೆಗೊಳಿಸಲು ಇಂತಹ ತಂತ್ರಗಳನ್ನು ಈ ಹಿಂದೆ ಸಹ ಬಳಸಲಾಗಿದೆ, ”ಎಂದು ಬಜ್ವಾ ಹೇಳಿದರು.

ಇಂದಿನ (ಬುಧವಾರದ) ಘಟನೆಯ ಕುರಿತು ನಾವು ಪೊಲೀಸರಿಗೆ ದೂರು ನೀಡಲಿದ್ದೇವೆ ಮತ್ತು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅದಕ್ಕೆ ಅನುಗುಣವಾಗಿ ನಮ್ಮ ಭವಿಷ್ಯದ ಕಾರ್ಯತಂತ್ರವನ್ನು ನಾವು ಯೋಜಿಸುತ್ತೇವೆ ”ಎಂದು ಅವರು ಹೇಳಿದರು.

“ಬಿಜೆಪಿ ಕಾರ್ಯಕರ್ತರ ಕೃತ್ಯವನ್ನು ನಾವು ಖಂಡಿಸುತ್ತೇವೆ” ಎಂದು ಬಜ್ವಾ ಹೇಳಿದರು. ಕಳೆದ ಏಳು ತಿಂಗಳುಗಳಿಂದ ರೈತರ ಚಳುವಳಿ ಶಾಂತಿಯುತವಾಗಿ ನಡೆಯುತ್ತಿರುವುದರಿಂದ ಅಂತಹ ತಂತ್ರಗಳು ಕಾರ್ಯನಿರ್ವಹಿಸುವುದಿಲ್ಲ ಮತ್ತು ಭವಿಷ್ಯದಲ್ಲಿಯೂ ಇದನ್ನು ಆಗಲು ಬಿಡುವುದಿಲ್ಲ ಎಂದಿದ್ದಾರೆ ಬಜ್ವಾ.

ಇದನ್ನೂ ಓದಿ: Farmers Protest: ‘ಆಂದೋಲನ ನಿಲ್ಲಿಸಿ ಬನ್ನಿ, ಮಾತುಕತೆಗೆ ನಾವು ಸಿದ್ಧರಿದ್ದೇವೆ’-ಪ್ರತಿಭಟನಾ ನಿರತ ರೈತರಿಗೆ ಕರೆ ನೀಡಿದ ಕೃಷಿ ಸಚಿವ

(BJP workers and farm law protesters clashed in Ghazipur on the Delhi-Uttar Pradesh border )