ಅಲ್ಫಾ ಮತ್ತು ಡೆಲ್ಟಾ ವೈರಾಣುಗಳನ್ನು ನಿಷ್ಕ್ರಿಯಗೊಳಿಸಬಲ್ಲದು ಕೊವ್ಯಾಕ್ಸಿನ್ ಲಸಿಕೆ; ಯುಎಸ್ನ ಉನ್ನತ ಆರೋಗ್ಯ ಸಂಸ್ಥೆ ನೀಡಿದ ಗುಡ್ ನ್ಯೂಸ್ ಇದು
ಕೊವ್ಯಾಕ್ಸಿನ್ ಪಡೆದವರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯ, SARS-CoV-2ದ ಎರಡು ರೂಪಾಂತರಗಳಾದ B.1.1.7 (ಅಲ್ಫಾ) ಮತ್ತು B.1.617 (ಡೆಲ್ಟಾ) ಎರಡೂ ರೂಪಾಂತರಿ ವೈರಸ್ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.
ವಾಷಿಂಗ್ಟನ್: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆ ಅಲ್ಫಾ ಮತ್ತು ಡೆಲ್ಟಾ ರೂಪಾಂತರಿ ವೈರಾಣುಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಬಲ್ಲದು ಎಂದು ಯುಎಸ್ನ ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಹೇಳಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟಿಕ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ್ದು, ಇದು ಕೊರೊನಾ ವಿರುದ್ಧ ಶೇ.77 ರಷ್ಟು ಪರಿಣಾಮಕಾರಿಯಾಗಿದೆ. ಹಾಗೇ, ಇದೀಗ ಡೆಲ್ಟಾ ಮತ್ತು ಅಲ್ಫಾ ವಿರುದ್ಧವೂ ಅತ್ಯಂತ ಪ್ರಭಾವಶಾಲಿಯಾಗಿ ಹೋರಾಡುತ್ತದೆ ಎಂಬುದು ನಿಜಕ್ಕೂ ಗುಡ್ನ್ಯೂಸ್ ಆಗಿದೆ.
ಕೊವ್ಯಾಕ್ಸಿನ್ ಲಸಿಕೆ ಪಡೆದವರ ರಕ್ತದ ಸೀರಮ್ನ್ನು ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ವ್ಯಾಕ್ಸಿನ್ ಪಡೆದವರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯ, SARS-CoV-2ದ ಎರಡು ರೂಪಾಂತರಗಳಾದ B.1.1.7 (ಅಲ್ಫಾ) ಮತ್ತು B.1.617 (ಡೆಲ್ಟಾ) ಎರಡೂ ರೂಪಾಂತರಿ ವೈರಸ್ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಮತ್ತು ವೈರಾಣುಗಳನ್ನು ನಿಷ್ಕ್ರಿಯಗೊಳಿಸುತ್ತದೆ ಎಂಬುದು ಗೊತ್ತಾಗಿದೆ ಎಂದು ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ತಿಳಿಸಿದೆ. ಅಂದರೆ ಈ ಲಸಿಕೆ ಪಡೆದವರಿಗೆ ಇದೆರಡೂ ವೈರಾಣುಗಳ ಪ್ರಭಾವ ಬಾಧಿಸುವುದಿಲ್ಲ. ಅಲ್ಫಾ ಯುಕೆದಲ್ಲಿ ಮೊದಲು ಪತ್ತೆಯಾಗಿತ್ತು ಮತ್ತು ಡೆಲ್ಟಾ ಮೊದಲು ಭಾರತದಲ್ಲಿ ಕಾಣಿಸಿಕೊಂಡಿತ್ತು. ಅಲ್ಫಾ ಸೇರಿ ಉಳಿದೆಲ್ಲ ರೂಪಾಂತರಿ ವೈರಾಣುಗಳಿಗಿಂತಲೂ ಡೆಲ್ಟಾವೇ ಅಪಾಯಕಾರಿ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಹಾಗೆ, ಈ ವೈರಾಣು ಲಸಿಕೆ ಪಡೆಯದವರಲ್ಲಿ ವೇಗವಾಗಿ ಪ್ರಸರಣ ಆಗುತ್ತದೆ ಎಂದೂ ತಿಳಿಸಿದ್ದಾರೆ.
ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತದಲ್ಲಿ ಇದುವರೆಗೆ ಸುಮಾರು 25 ಮಿಲಿಯನ್ ಜನರಿಗೆ ನೀಡಲಾಗಿದೆ. ಕೊವಿಶೀಲ್ಡ್ಗೆ ಹೋಲಿಸಿದೆ ಈ ಲಸಿಕೆ ನೀಡುತ್ತಿರುವ ಪ್ರಮಾಣ ಕಡಿಮೆ ಇದೆ. ಕೊವ್ಯಾಕ್ಸಿನ್ ಲಸಿಕೆ ಸಾರ್ಸ್ ಕೊವ್-2 ದ ಅಸಮರ್ಥ ರೂಪವನ್ನು ಹೊಂದಿದೆ. ಆದರೆ ವೈರಸ್ ವಿರುದ್ಧ ಪ್ರತಿಕಾಯಗಳನ್ನು ತಯಾರಿಸಲು, ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಇದು ತುಂಬ ಸುರಕ್ಷಿತ ಮತ್ತು ತಾಳುವಿಕೆ ಪ್ರಮಾಣ ಜಾಸ್ತಿ ಇರುವ ಲಸಿಕೆ ಎಂಬುದು ಎರಡನೇ ಹಂತದ ಪ್ರಯೋಗದಲ್ಲಿ ಗೊತ್ತಾಗಿದೆ. ಹಾಗೇ, ಮೂರನೇ ಹಂತದ ಫಲಿತಾಂಶ ಈ ವರ್ಷದ ಅಂತ್ಯದೊಳಗೆ ಪ್ರಕಟಿಸಲಾಗುವುದು ಎಂದು ಯುಎಸ್ ಆರೋಗ್ಯ ಸಂಸ್ಥೆ ತಿಳಿಸಿದೆ.
ಕೊವ್ಯಾಕ್ಸಿನ್ ಲಸಿಕೆ ಕೊವಿಡ್ 19 ರೂಪಾಂತರಿಗಳಾದ ಅಲ್ಫಾ ಮತ್ತು ಡೆಲ್ಟಾ ವಿರುದ್ಧವೂ ಪರಿಣಾಮಕಾರಿ ಎಂದು ಹೇಳಲು ತುಂಬ ಸಂತೋಷವಾಗುತ್ತದೆ. ಈ ರೂಪಾಂತರಿ ವೈರಾಣುಗಳನ್ನು ಕೊವ್ಯಾಕ್ಸಿನ್ನಿ ಷ್ಕ್ರಿಯಗೊಳಿಸಬಲ್ಲದು. ಇದೊಂದು ಆಶಾದಾಯಕ ವಿಷಯವಾಗಿದೆ ಎಂದು ಯುಎಸ್ನ ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನ ಅಲರ್ಜಿ ಮತ್ತು ಸೋಂಕು ಕಾಯಿಲೆ ವಿಭಾಗದ ನಿರ್ದೇಶಕ ಅಂಥೋನಿ ಎಸ್ ಫೌಸಿ ತಿಳಿಸಿದ್ದಾರೆ.
ಇದನ್ನೂ ಓದಿ: ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ನಿಧನ; 49 ವರ್ಷಕ್ಕೇ ಬದುಕು ಮುಗಿಸಿದ ಬಾಲಿವುಡ್ ಸಿನಿಮಾ ನಿರ್ಮಾಪಕ
Covaxin Covid 19 vaccine Effectively Neutralises Delta and Alpha variants