AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಖ್ ವಿರೋಧಿ ಹೇಳಿಕೆಗೆ ಕ್ಷಮೆ ಕೋರಿ ರಾಹುಲ್ ಗಾಂಧಿ ನಿವಾಸದ ಮುಂದೆ ಬಿಜೆಪಿ ಪ್ರತಿಭಟನೆ

ರಾಹುಲ್ ಗಾಂಧಿಯವರ ಸಿಖ್ ವಿರೋಧಿ ಟೀಕೆಗಳನ್ನು ವಿರೋಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮನೆಯ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸಿಖ್ ವಿರೋಧಿ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿಖ್ ವಿರೋಧಿ ಹೇಳಿಕೆಗೆ ಕ್ಷಮೆ ಕೋರಿ ರಾಹುಲ್ ಗಾಂಧಿ ನಿವಾಸದ ಮುಂದೆ ಬಿಜೆಪಿ ಪ್ರತಿಭಟನೆ
ರಾಹುಲ್ ಗಾಂಧಿ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಸುಷ್ಮಾ ಚಕ್ರೆ
|

Updated on: Sep 11, 2024 | 7:13 PM

Share

ನವದೆಹಲಿ: ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಖ್ ಸಮುದಾಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳನ್ನು ವಿರೋಧಿಸಿ ದೆಹಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಿಖ್ ಸೆಲ್ ಸದಸ್ಯರು ರಾಹುಲ್ ಗಾಂಧಿ ಅವರ ನಿವಾಸದ ಮುಂದೆ ಇಂದು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಸಿಖ್ ಸಮುದಾಯದ ಸದಸ್ಯರು, ಮಹಿಳೆಯರು ಸೇರಿದಂತೆ ಹಲವು ಜನ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

ವಿಜ್ಞಾನ ಭವನದಿಂದ ಮೆರವಣಿಗೆ ಹೊರಟ ಅವರು ರಾಹುಲ್ ಗಾಂಧಿಯವರ ನಿವಾಸವನ್ನು ತಲುಪಲು ಪ್ರಯತ್ನಿಸಿದರು. ಆದರೆ, ಪೊಲೀಸರು ಅವರನ್ನು ತಡೆದರು. ಬಿಜೆಪಿ ನಾಯಕ ಆರ್‌ಪಿ ಸಿಂಗ್ ಅವರು “ರಾಹುಲ್ ಗಾಂಧಿ ಸಿಖ್ಖರ ಕ್ಷಮೆ ಯಾಚಿಸಬೇಕು. ಅವರು ಭಾರತದ ಮಾನಹಾನಿ ಮಾಡಲು ವಿದೇಶಿ ನೆಲವನ್ನು ಬಳಸಿದ್ದಾರೆ. ಸಿಖ್ಖರು ಪೇಟವನ್ನು ಧರಿಸಲು ಮತ್ತು ಗುರುದ್ವಾರಕ್ಕೆ ಹೋಗಲು ಅನುಮತಿಸುವುದಿಲ್ಲ ಎಂದು ಸಿಖ್ಖರ ಬಗ್ಗೆ ಹೇಳಿಕೆ ನೀಡಿದ್ದಾರೆ.” ಎಂದಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಸಿಖ್ಖರ ಬಗ್ಗೆ ಹೇಳಿದ್ದನ್ನು ಭಾರತದಲ್ಲಿ ಮತ್ತೊಮ್ಮೆ ಹೇಳಲಿ: ಬಿಜೆಪಿ ಮುಖಂಡನ ಸವಾಲು

ಈ ವೇಳೆ ಪ್ರತಿಭಟನಾಕಾರರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಸಿಖ್ಖರನ್ನು “ಅವಮಾನಿಸಿದ” ಆರೋಪಕ್ಕಾಗಿ ಕ್ಷಮೆ ಯಾಚಿಸಲು ಒತ್ತಾಯಿಸಿದರು. ದೇಶದಲ್ಲಿ 1984ರ ಸಿಖ್ ವಿರೋಧಿ ದಂಗೆಗಳಿಗೆ ಕಾಂಗ್ರೆಸ್ ಹೊಣೆಯಾಗಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಹೇಳಿದ್ದೇನು?:

ಸೋಮವಾರ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನೂರಾರು ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಕೆಲವು ಧರ್ಮಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಇತರರಿಗಿಂತ ಕೀಳು ಎಂದು ಪರಿಗಣಿಸುತ್ತಿದೆ ಎಂದು ಆರೋಪಿಸಿದ್ದರು. ಭಾರತದಲ್ಲಿ ಕಾಂಗ್ರೆಸ್​ನ ಹೋರಾಟವು ಇದರ ಬಗ್ಗೆಯೇ ಹೊರತು ರಾಜಕೀಯದ ಬಗ್ಗೆ ಅಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಸಿಖ್ಖರ ಬಗ್ಗೆ ಹೇಳಿದ್ದನ್ನು ಭಾರತದಲ್ಲಿ ಮತ್ತೊಮ್ಮೆ ಹೇಳಲಿ: ಬಿಜೆಪಿ ಮುಖಂಡನ ಸವಾಲು

ಆ ಕಾರ್ಯಕ್ರಮದ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿದ್ದ ಸಿಖ್ ಸಮುದಾಯದವರಲ್ಲಿ ಒಬ್ಬರ ಹೆಸರನ್ನು ಕೇಳಿದ ರಾಹುಲ್ ಗಾಂಧಿ, ಪೇಟ ತೊಟ್ಟ ಅಣ್ಣ ನಿನ್ನ ಹೆಸರೇನು? ಎಂದು ಕೇಳಿದರು. “ಈ ಹೋರಾಟವು ಭಾರತದಲ್ಲಿ ಸಿಖ್‌ಗೆ ತನ್ನ ಪೇಟವನ್ನು ಧರಿಸಲು ಅವಕಾಶ ನೀಡಬೇಕೇ ಅಥವಾ ಭಾರತದಲ್ಲಿ ಕದವನ್ನು ಧರಿಸಲು ಅನುಮತಿಸುವುದೇ ಎಂಬುದಾಗಿದೆ. ಆಗ ಅವನು ಸಿಖ್ ಆಗಿ ಗುರುದ್ವಾರಕ್ಕೆ ಹೋಗಲು ಸಾಧ್ಯವಾಗುತ್ತದೆ. ಅದು ಹೋರಾಟದ ವಿಷಯವಾಗಿದೆ. ಅವರಿಗೆ ಮಾತ್ರವಲ್ಲ, ಎಲ್ಲಾ ಧರ್ಮಗಳಿಗೆ ಇದು ಹೋರಾಟದ ವಿಷಯವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ