ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ; ಶುರುವಾಗಿದೆ ಮತ್ತೊಂದು ಆತಂಕ

Black Fungus: ಬ್ಲ್ಯಾಕ್​ ಫಂಗಸ್​ ದಿನೇದಿನೆ ಮಾರಕವಾಗಿ ಪರಿಣಮಿಸುತ್ತಿದೆ. ದೇಶಾದ್ಯಂತ ಇಲ್ಲಿಯವರೆಗೆ ಈ ಕಾಯಿಲೆಯಿಂದ 219 ಮಂದಿ ಮೃತಪಟ್ಟಿದ್ದಾಗಿ ಆರೋಗ್ಯ ಇಲಾಖೆಯ ಡಾಟಾದಲ್ಲಿ ಉಲ್ಲೇಖವಾಗಿದೆ.

ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ; ಶುರುವಾಗಿದೆ ಮತ್ತೊಂದು ಆತಂಕ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: May 22, 2021 | 8:07 PM

ಮ್ಯೂಕೋರ್ಮೈಕೋಸಿಸ್​ (ಬ್ಲ್ಯಾಕ್ ಫಂಗಸ್​) ಸೋಂಕು ಪ್ರತಿದಿನ ಹೊಸಹೊಸ ಸ್ವರೂಪದಲ್ಲಿ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ದೆಹಲಿಯ ಸರ್​ ಗಂಗಾ ರಾಮ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳಿಗೆ ಸಣ್ಣಕರುಳಿನಲ್ಲಿ ಬ್ಲ್ಯಾಕ್​ ಫಂಗಸ್​ (ಕಪ್ಪುಶಿಲೀಂದ್ರ) ಪತ್ತೆಯಾಗಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ. ಹಾಗೇ ಇದು ಅತಿವಿರಳ ಪ್ರಕರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಬ್ಲ್ಯಾಕ್​ ಫಂಗಸ್​ ದಿನೇದಿನೆ ಮಾರಕವಾಗಿ ಪರಿಣಮಿಸುತ್ತಿದೆ. ದೇಶಾದ್ಯಂತ ಇಲ್ಲಿಯವರೆಗೆ ಈ ಕಾಯಿಲೆಯಿಂದ 219 ಮಂದಿ ಮೃತಪಟ್ಟಿದ್ದಾಗಿ ಆರೋಗ್ಯ ಇಲಾಖೆಯ ಡಾಟಾದಲ್ಲಿ ಉಲ್ಲೇಖವಾಗಿದೆ. ಇಂದು ಹೇಳಿಕೆ ಬಿಡುಗಡೆ ಮಾಡಿರುವ ಸರ್ ಗಂಗಾರಾಮ್ ಆಸ್ಪತ್ರೆ, ನಮ್ಮಲ್ಲಿ ದಾಖಲಾಗಿರುವ ಇಬ್ಬರು ಕೊವಿಡ್​ 19 ಸೋಂಕಿತರ ಸಣ್ಣ ಕರುಳಲ್ಲಿ ಕಪ್ಪು ಶಿಲೀಂದ್ರ ಪತ್ತೆಯಾಗಿದೆ ಎಂದು ಹೇಳಿದೆ. ಇಲ್ಲಿಯವರೆಗೆ ಬ್ಲ್ಯಾಕ್ ಫಂಗಸ್​ ಸೋಂಕು ಸಾಮಾನ್ಯವಾಗಿ ಕೊವಿಡ್ 19 ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳ ಶ್ವಾಸಕೋಶದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸಣ್ಣಕರುಳಲ್ಲಿ ಪತ್ತೆಯಾಗುವ ಮೂಲಕ ಅಪರೂಪದ ಪ್ರಕರಣ ಎನಿಸಿಕೊಂಡಿದೆ.

ಈ ಇಬ್ಬರೂ ಮಧುಮೇಹಿಗಳಾಗಿದ್ದು ಕೊವಿಡ್​ 19ನಿಂದ ಚೇತರಿಸಿಕೊಳ್ಳುತ್ತಿದ್ದರು. ಸಿಟಿ ಸ್ಕ್ಯಾನ್ ಮಾಡಿದಾಗ ಬ್ಲ್ಯಾಕ್ ಫಂಗಸ್​ ಇರುವುದು ಗೊತ್ತಾಯಿತು. ಸಣ್ಣ ಕರುಳಲ್ಲಿ ಕಪ್ಪು ಶಿಲೀಂದ್ರ ಇರುವುದನ್ನು ನೋಡಿ ಅನುಮಾನಗೊಂಡು ಬಯಾಪ್ಸಿ ಮಾಡಲಾಯಿತು. ಬಯಾಪ್ಸಿ ವರದಿಯಿಂದ ಬ್ಲ್ಯಾಕ್​ ಫಂಗಸ್​ ಇರುವುದು ದೃಢಪಟ್ಟಿದೆ ಎಂದು ಆಸ್ಪತ್ರೆ ತಿಳಿಸಿದೆ. ಹಾಗೇ, ಇವರಿಬ್ಬರಲ್ಲಿ ಒಬ್ಬರಿಗೆ ಮಾತ್ರ ಚಿಕಿತ್ಸೆಯ ವೇಳೆ ಸ್ಟೀರಾಯ್ಡ್​ ಕೊಡಲಾಗಿತ್ತು. ಮತ್ತೊಬ್ಬರಿಗೆ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಬಳಕೆ ಮಾಡಲಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಸಣ್ಣಕರುಳಿನಲ್ಲಿ ಮ್ಯೂಕೋರ್ಮೈಕೋಸಿಸ್​ ಪತ್ತೆಯಾದ ಇಬ್ಬರು ರೋಗಿಗಳಲ್ಲಿ ಒಬ್ಬರಿಗೆ 56 ವರ್ಷವಾಗಿದೆ. ಇವರ ಕುಟುಂಬದ ಮೂವರು ಕೊವಿಡ್​ 19 ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ಇವರಿಗೆ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆದರೆ ಆ್ಯಸಿಡಿಟಿ ಎಂದು ಮನೆಯಲ್ಲೇ ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಕಡಿಮೆಯಾಗದೆ ಇದ್ದಾಗ ಮತ್ತೆ ಬಂದು ದಾಖಲಾದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹಾಗೇ ಇವರಿಗೆ ತತ್​ಕ್ಷಣವೇ ಆ್ಯಂಟಿ-ಫಂಗಲ್​ ಚಿಕಿತ್ಸೆ ಶುರು ಮಾಡಿದ್ದೇವೆ ಎಂದೂ ಹೇಳಿದ್ದಾರೆ. ಹಾಗೇ ಇನ್ನೊಬ್ಬ ರೋಗಿಯ ವಯಸ್ಸು 68 ವರ್ಷ. ಇವರಿಗೆ ಕೊವಿಡ್​ 19 ಸೋಂಕಿಗೆ ಚಿಕಿತ್ಸೆ ನೀಡುವಾಗ ಸ್ಟೀರಾಯ್ಡ್ ಬಳಕೆ ಮಾಡಲಾಗಿತ್ತು. ಇವರೂ ಸಹ ಸೋಂಕಿನಿಂದ ಮುಕ್ತರಾದ ಬಳಿಕ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸಿಟಿ ಸ್ಕ್ಯಾನ್ ಮಾಡಿದಾಗ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Ashden Award: ಅಂತಿಮ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್

ಬ್ಲ್ಯಾಕ್​ಫಂಗಸ್ ರೋಗಕ್ಕೆ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲು ಸೋನಿಯಾ ಗಾಂಧಿ ಸಲಹೆ; ಪ್ರಧಾನಿ ಮೋದಿಗೆ ಪತ್ರ

Black Fungus in two Covid-19 patients intestine revealed by Delhi Sir Ganga Ram Hospital