ಸ್ಪೈಸ್‌ಜೆಟ್ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ: ದೆಹಲಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ
ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ 2 ದಿನಗಳ ಮೊದಲು, ದೆಹಲಿಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಅದರ ಎಲ್ಲಾ 210 ಪ್ರಯಾಣಿಕರನ್ನು ಸುರಕ್ಷಿತವಾಗಿ ಡಿಬೋರ್ಡ್ ಮಾಡಲಾಗಿದೆ. ವಿಮಾನವನ್ನು ಕೂಲಂಕುಷವಾಗಿ ಶೋಧಿಸಲಾಗಿತ್ತಾದರೂ ಯಾವುದೇ ಅನುಮಾನಾಸ್ಪದ ವಸ್ತು ಕಂಡಿಬಂದಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಘೋಷಿಸಲಾಗಿದೆ.
ನವದೆಹಲಿ, ಜನವರಿ 25: ದರ್ಭಾಂಗಾ-ದೆಹಲಿ ಸ್ಪೈಸ್‌ಜೆಟ್ ವಿಮಾನದಲ್ಲಿ (SpiceJet flight) ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಸಂದೇಶ ಬಂದ ಕಾರಣ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI Airport) ಬುಧವಾರ ರಾತ್ರಿ ಕಟ್ಟೆಚ್ಚರ ವಹಿಸಲಾಯಿತು. ವಿಮಾನದಲ್ಲಿದ್ದ 200ಕ್ಕೂ ಆತಂಕಕ್ಕೀಡಾದರು. ಬೆದರಿಕೆ ಸಂದೇಶ ದೊರೆತ ಬೆನ್ನಲ್ಲೇ ವಿಮಾನದಿಂದ ಪ್ರಯಾಣಿಕರನ್ನು ಇಳಿಸಿ ಸಂಪೂರ್ಣ ತಪಾಸಣೆಗಾಗಿ ಪ್ರತ್ಯೇಕ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಯಿತು. ನಂತರ ವಿಮಾನ ನಿಲ್ದಾಣದಲ್ಲಿ ಭದ್ರತಾ ಕಟ್ಟೆಚ್ಚರ ಘೋಷಿಸಲಾಯಿತು.
ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಎರಡು ದಿನಗಳ ಮುನ್ನವೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಆದಾಗ್ಯೂ, ಸ್ಪೈಸ್‌ಜೆಟ್ ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ನಂತರ ಶೋಧ ನಡೆಸಿದಾಗ ಅನುಮಾನಾಸ್ಪದ ಏನೂ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪರಿಗಣಿಸಲಾಯಿತು. ಬಿಹಾರದ ದರ್ಭಾಂಗಾದಿಂದ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಬುಕಿಂಗ್ ಕಚೇರಿಗೆ ಕರೆ ಬಂದಿತ್ತು ಎಂದು ಸ್ಪೈಸ್‌ಜೆಟ್ ಏರ್‌ಲೈನ್ಸ್ ತಿಳಿಸಿದೆ.
ಸಂಜೆ 6 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು ಮತ್ತು ಪ್ರತ್ಯೇಕ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ನಂತರ ವ್ಯಾಪಕ ಶೋಧ ನಡೆಸಲಾಯಿತು ಎಂದು ಏರ್‌ಲೈನ್ಸ್ ತಿಳಿಸಿದೆ. ಸಂಜೆಯ ವೇಳೆಗೆ ಸ್ಪೈಸ್‌ಜೆಟ್ ವಿಮಾನಕ್ಕೆ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದಲ್ಲಿ ಒಟ್ಟು 210 ಮಂದಿ ಪ್ರಯಾಣಿಕರಿದ್ದರು.
ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಗಿದೆ ಮತ್ತು ಇದು ಹುಸಿ ಎಂಬುದು ತಿಳಿದುಬಂದಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭದ್ರತಾ ಏಜೆನ್ಸಿಗಳು ವಿಮಾನವನ್ನು ಇನ್ನೂ ಹೆಚ್ಚಿನ ಶೋಧನೆಗೆ ಒಳಪಡಿಸುತ್ತಿವೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಗಣರಾಜ್ಯೋತ್ಸವಕ್ಕೆ ದೆಹಲಿ ಸಿದ್ಧ
ಗಣರಾಜ್ಯೋತ್ಸವ ಸಮಾರಂಭಕ್ಕೆ ದೆಹಲಿ ಸಿದ್ಧಗೊಂಡಿದೆ. ಹಲವೆಡೆ ಸಂಚಾರ ನಿರ್ಬಂಧವನ್ನೂ ವಿಧಿಸಲಾಗಿದೆ. ವಿಜಯ್ ಚೌಕ್, ಕರ್ತವ್ಯ ಪಥ, ಸುಭಾಸ್ ಚಂದ್ರ ಬೋಸ್ ವೃತ್ತ, ತಿಲಕ್ ಮಾರ್ಗ, ಬಹದ್ದೂರ್ ಷಾ ಜಾಫರ್ ಮಾರ್ಗ, ನೇತಾಜಿ ಸುಭಾಸ್ ಮಾರ್ಗ ಮತ್ತು ಕೆಂಪು ಕೋಟೆಯನ್ನು ಒಳಗೊಂಡ ಪರೇಡ್ ಮಾರ್ಗದಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ದೆಹಲಿಯ ಗಡಿಯನ್ನು ಜನವರಿ 26 ರ ಮೊದಲು ಮುಚ್ಚಲಾಗುವುದು ಮತ್ತು ಭಾರೀ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ರಾಮಮಂದಿರ ಭೇಟಿಯನ್ನು ಮಾರ್ಚ್‌ಗೆ ಮುಂದೂಡುವಂತೆ ಕೇಂದ್ರ ಸಚಿವರಿಗೆ ಮೋದಿ ಮನವಿ
ಬುಧವಾರ ಸಂಜೆ 6 ಗಂಟೆಯಿಂದ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೆ ಕರ್ತವ್ಯ ಪಥದಲ್ಲಿ ಯಾವುದೇ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಪರೇಡ್ ಮುಗಿಯುವವರೆಗೂ ಈ ನಿರ್ಬಂಧಗಳು ಮುಂದುವರಿಯಲಿವೆ. ಅಲ್ಲದೆ ರಫಿ ಮಾರ್ಗ, ಜನಪಥ್, ಮಾನ್ ಸಿಂಗ್ ರಸ್ತೆಯಲ್ಲಿರುವ ಕರ್ತವ್ಯ ಪಥದಲ್ಲಿ ಬುಧವಾರ ರಾತ್ರಿ 10 ರಿಂದ ಶುಕ್ರವಾರ ಪರೇಡ್ ಮುಗಿಯುವವರೆಗೆ ಸಂಚಾರಕ್ಕೆ ಹಲವು ನಿರ್ಬಂಧ ವಿಧಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ