
ನವದೆಹಲಿ, ಅಕ್ಟೋಬರ್ 15: ನವದೆಹಲಿಯಲ್ಲಿ ನಡೆದ ಪ್ರಮುಖ ಆರ್ಥಿಕತೆಗಳ ಒಕ್ಕೂಟವಾದ ಬ್ರಿಕ್ಸ್ ಶೃಂಗಸಭೆಯಿಂದ ಹೊರಗುಳಿಯುವ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರ ನಿರ್ಧಾರವನ್ನು ಮಾಜಿ ಪ್ರಧಾನಿ ಶೇಖ್ ಹಸೀನಾ ಕಟುವಾಗಿ ಟೀಕಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ನಿರ್ಧಾರ ಬಾಂಗ್ಲಾದೇಶದ ರಾಷ್ಟ್ರೀಯ ಹಿತಾಸಕ್ತಿಗೆ ತೀವ್ರ ಹಾನಿ ಮಾಡಿದೆ ಎಂದು ಕಿಡಿಕಾರಿದ್ದಾರೆ.
ವೈಯಕ್ತಿಕ ಹಗೆತನ, ಪ್ರತೀಕಾರ ಅಥವಾ ಅಲ್ಪಾವಧಿಯ ದೇಶೀಯ ರಾಜಕೀಯ ಲೆಕ್ಕಾಚಾರಗಳ ಆಧಾರದ ಮೇಲೆ ವಿದೇಶಾಂಗ ನೀತಿಯನ್ನು ರೂಪಿಸುವುದು ದೇಶಕ್ಕೆ ಮಾರಕ ಎಂದು ಎಚ್ಚರಿಸಿರುವ ಹಸೀನಾ, ಜವಾಬ್ದಾರಿಯುತ ಸರ್ಕಾರವು ದೇಶದ ಪ್ರಗತಿಗೆ ಬಾಗಿಲುಗಳನ್ನು ತೆರೆಯಬೇಕೇ ಹೊರತು, ಮುಚ್ಚಬಾರದು ಎಂದು ಹೇಳಿದ್ದಾರೆ.
ಬ್ರಿಕ್ಸ್ ಕೇವಲ ರಾಜತಾಂತ್ರಿಕ ಸಮಾವೇಶವಲ್ಲ. ಇದು ವಿಶ್ವದ ಪ್ರಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸಿ ವ್ಯಾಪಾರ, ಹೂಡಿಕೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬೃಹತ್ ಸಹಕಾರಕ್ಕೆ ವೇದಿಕೆ ಕಲ್ಪಿಸುತ್ತದೆ. ಈ ಸಭೆಯಲ್ಲಿ ಭಾಗವಹಿಸಿದ್ದರೆ ಬಾಂಗ್ಲಾದೇಶಕ್ಕೆ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳುತ್ತಿದ್ದವು. ಆದರೆ ಆ ಸುವರ್ಣಾವಕಾಶವನ್ನು ಕಳೆದುಕೊಳ್ಳಲಾಯಿತು ಎಂದು ಹಸೀನಾ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: ‘ಬ್ರಿಕ್ಸ್ ಯಾರ ವಿರುದ್ಧದ ಒಕ್ಕೂಟವೂ ಅಲ್ಲ’; ಪಾಶ್ಚಿಮಾತ್ಯ ದೇಶಗಳಿಗೆ ಪ್ರಧಾನಿ ಮೋದಿ ಸಂದೇಶ
ದೆಹಲಿಯಲ್ಲಿ ತಾನು ನೆಲೆಸಿರುವುದೇ ತಾರಿಕ್ ರೆಹಮಾನ್ ಶೃಂಗಸಭೆಯಿಂದ ದೂರ ಉಳಿಯಲು ಕಾರಣವಾಗಿದ್ದರೆ, ಅದು ಅತ್ಯಂತ ವಿಷಾದನೀಯ ಎಂದು ಹಸೀನಾ ಹೇಳಿದ್ದಾರೆ. ಇಬ್ಬರು ನಾಯಕರ ನಡುವಿನ ವೈಯಕ್ತಿಕ ಸಂವೇದನೆ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾರಿಕ್ ರೆಹಮಾನ್ ಅವರ ತಂದೆ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಉದಾಹರಣೆಯನ್ನು ಪ್ರಸ್ತಾಪಿಸಿದ ಹಸೀನಾ, 1979 ರಲ್ಲಿ ಜಿಯಾವುರ್ ರೆಹಮಾನ್ ದೆಹಲಿಗೆ ಭೇಟಿ ನೀಡಿದಾಗ ನಾನು ದೆಹಲಿಯಲ್ಲೇ ಇದ್ದೆ. 1980 ರಲ್ಲಿ ಅವರು ಲಂಡನ್ಗೆ ಬಂದಾಗಲೂ ನಾನು ಲಂಡನ್ನಲ್ಲೇ ಇದ್ದೆ. ಆ ಎರಡೂ ನಗರಗಳಲ್ಲಿ ನನ್ನ ಉಪಸ್ಥಿತಿಯು ಅವರ ಭೇಟಿಗೆ ಎಂದೂ ಅಡ್ಡಿಯಾಗಲಿಲ್ಲ. ಹಾಗಿದ್ದಾಗ, ಇಂದು ದೆಹಲಿಯಲ್ಲಿ ನಾನಿದ್ದೇನೆ ಎಂಬ ಕಾರಣಕ್ಕೆ ಅವರ ಮಗ ತಾರಿಕ್ ರೆಹಮಾನ್ ಭಾರತಕ್ಕೆ ಬರಲು ಏಕೆ ಹಿಂಜರಿಯಬೇಕು? ಈ ನಿರ್ಧಾರದ ಹಿಂದಿನ ಅಸಲಿ ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ಭಾರತ ನಮ್ಮ ಐತಿಹಾಸಿಕ ವಿಮೋಚನಾ ಯುದ್ಧದ ಒಡನಾಡಿ ಮತ್ತು ಹತ್ತಿರದ ನೆರೆಹೊರೆ. ಚೀನಾ, ಅಮೆರಿಕ, ಯುರೋಪ್ ಹಾಗೂ ಮುಸ್ಲಿಂ ರಾಷ್ಟ್ರಗಳೊಂದಿಗೂ ಬಾಂಗ್ಲಾದೇಶ ಉತ್ತಮ ಬಾಂಧವ್ಯ ಹೊಂದಿರಬೇಕು. ಆದರೆ ದೇಶೀಯ ಮತಬ್ಯಾಂಕ್ ರಾಜಕಾರಣಕ್ಕಾಗಿ ಭಾರತ ವಿರೋಧಿ ಭಾವನೆಗಳನ್ನು ಕೆರಳಿಸುವುದು ಮತ್ತು ಒಂದು ದೇಶದೊಂದಿಗಿನ ಸಂಬಂಧವನ್ನು ಮತ್ತೊಂದು ದೇಶದ ವಿರುದ್ಧ ಬಳಸಲು ಹೋಗುವುದು ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದು ಹಸೀನಾ ಎಚ್ಚರಿಸಿದ್ದಾರೆ.
ಬಾಂಗ್ಲಾದೇಶ ಪ್ರಸ್ತುತ ಗಂಭೀರ ಸಾಂವಿಧಾನಿಕ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ ಎಂದು ಆರೋಪಿಸಿದ ಹಸೀನಾ, ರಾಜಕೀಯ ಸೇಡು ತೀರಿಸಿಕೊಳ್ಳಲು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದ್ದು, ಕಾನೂನು ಸುವ್ಯವಸ್ಥೆ ಕುಸಿದಿದೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಅಭದ್ರತೆಯಿಂದ ಬದುಕುತ್ತಿದ್ದಾರೆ. ಉಗ್ರಗಾಮಿ ಶಕ್ತಿಗಳು ಮತ್ತೆ ತಲೆಯೆತ್ತಿವೆ ಎಂದು ದೂರಿದ್ದಾರೆ.
ದೇಶದ ಅತಿದೊಡ್ಡ ರಾಜಕೀಯ ಶಕ್ತಿಯಾದ ಅವಾಮಿ ಲೀಗ್ ಪಕ್ಷವನ್ನು ಮೂಲೆಗುಂಪು ಮಾಡಿ, ಲಕ್ಷಾಂತರ ಕಾರ್ಯಕರ್ತರ ರಾಜಕೀಯ ಹಕ್ಕುಗಳನ್ನು ಕಸಿದುಕೊಂಡು ಬಾಂಗ್ಲಾದೇಶದಲ್ಲಿ ಎಂದಿಗೂ ಸ್ಥಿರತೆ ತರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸರ್ಕಾರವು ಬ್ರಿಕ್ಸ್ ಶೃಂಗಸಭೆಗೆ ಬಾಂಗ್ಲಾದೇಶ ಪ್ರಧಾನಿಯನ್ನು ‘ಬಿಮ್ಸ್ಟೆಕ್’ ಒಕ್ಕೂಟದ ಹಾಲಿ ಅಧ್ಯಕ್ಷ ರಾಷ್ಟ್ರದ ಮುಖ್ಯಸ್ಥರಾಗಿ ಅಧಿಕೃತವಾಗಿ ಆಹ್ವಾನಿಸಿತ್ತು. ಆದರೆ ಬಾಂಗ್ಲಾದೇಶದ ಹಾಲಿ ಆಡಳಿತವು ಈ ಆಹ್ವಾನವನ್ನು ತಿರಸ್ಕರಿಸಿ ಸಭೆಯಿಂದ ದೂರ ಉಳಿದಿತ್ತು.
2024 ರ ಆಗಸ್ಟ್ನಲ್ಲಿ ನಡೆದ ಬೃಹತ್ ವಿದ್ಯಾರ್ಥಿ-ಜನತಾ ಆಂದೋಲನದ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದ ಶೇಖ್ ಹಸೀನಾ ಅವರು ದೆಹಲಿಯಲ್ಲೇ ಆಶ್ರಯ ಪಡೆದಿದ್ದಾರೆ. ಅವರ ಹಸ್ತಾಂತರಕ್ಕೆ ಬಾಂಗ್ಲಾದೇಶ ಸರ್ಕಾರ ಒತ್ತಾಯಿಸುತ್ತಿರುವುದು ಮತ್ತು ಹಸೀನಾ ಅವರ ಭಾರತ ವಾಸ್ತವ್ಯವು ನವದೆಹಲಿ ಮತ್ತು ಢಾಕಾ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಕಗ್ಗಂಟಾಗಿ ಪರಿಣಮಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 am, Thu, 15 October 26