ಕಾಂಗ್ರೆಸ್​ ಪಕ್ಷಕ್ಕೆ ‘ಕೈ’ ಚಿಹ್ನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೂಟಾ ಸಿಂಗ್​!

| Updated By: ರಾಜೇಶ್ ದುಗ್ಗುಮನೆ

Updated on: Jan 02, 2021 | 9:56 PM

ರಾಜೀವ್​ ಗಾಂಧಿ, ಇಂದಿರಾ ಗಾಂಧಿಯವರಿಗೆ ಅತ್ಯಾಪ್ತ ಎನಿಸಿಕೊಂಡಿದ್ದ ಬೂಟಾ ಸಿಂಗ್​, 1978ರಲ್ಲಿ ಕಾಂಗ್ರೆಸ್​ ವಿಭಜನೆಯಾದ ನಂತರ ‘ಕೈ’ ಚಿಹ್ನೆಯನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಾಂಗ್ರೆಸ್​ ಪಕ್ಷಕ್ಕೆ ‘ಕೈ’ ಚಿಹ್ನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೂಟಾ ಸಿಂಗ್​!
ಬೂಟಾ ಸಿಂಗ್​
Follow us on

ತಮ್ಮ ಹೂಟ್ಟೂರಿನ ಕೂಗುಗಳಿಗೆ ಕಿವಿಯಾಗುತ್ತಲೇ ರಾಷ್ಟ್ರಮಟ್ಟದಲ್ಲಿ ಆಲೋಚನೆ ಮಾಡುತ್ತಿದ್ದ ಕಾಂಗ್ರೆಸ್ ಹಿರಿಯ ನಾಯಕ, ಭಾರತದ ಮಾಜಿ ಗೃಹ ಸಚಿವ ಬೂಟಾ ಸಿಂಗ್ (86) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ ಬೂಟಾ ಸಿಂಗ್ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಿಹಾರದ ರಾಜ್ಯಪಾಲರಾಗಿ, ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಬೂಟಾ ಸಿಂಗ್​ ಕಾಂಗ್ರೆಸ್​ ಪಕ್ಷದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ರಾಜೀವ್​ ಗಾಂಧಿ ಅವರ ನಂಬಿಕಸ್ಥರೂ, ಅಂದಿನ ಕಾಂಗ್ರೆಸ್ ಪಕ್ಷದ ಬಹುಮುಖ್ಯ ದಲಿತ ನಾಯಕರೂ ಆಗಿದ್ದ ಬೂಟಾ ಸಿಂಗ್​ ವಿವಾದಕ್ಕೆ ಹೊರತಾದವರೇನು ಆಗಿರಲಿಲ್ಲ. ಆದರೆ, ಎಷ್ಟೇ ವಿವಾದಗಳಿದ್ದರೂ ಅದರಿಂದ ಆಚೆ ಬರುವ ಚಾಣಾಕ್ಷತನ ಅವರಿಗಿತ್ತು.

ಪಂಜಾಬ್​ ರಾಜ್ಯದ ಜಲಂಧರ್​ ಜಿಲ್ಲೆಯ ಮುಸ್ತಫಾಪುರ್​ನಲ್ಲಿ 1934ರ ಮಾರ್ಚ್​ 21ರಂದು ಜನಿಸಿದ ಬೂಟಾ ಸಿಂಗ್​ ತಮ್ಮ ರಾಜಕೀಯ ಬದುಕಿನಲ್ಲಿ 8 ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 980ರ ಸುಮಾರಿಗೆ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ ಸಿಂಗ್​ ಆಪರೇಷನ್​ ಬ್ಲೂ ಸ್ಟಾರ್​ ಮತ್ತು ಸಿಖ್​ ವಿರೋಧಿ ಆಂದೋಲನಗಳ ಬಳಿಕ ರಾಜೀವ್​ ಗಾಂಧಿ ಸರ್ಕಾರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ ಏಕೈಕ ಸಿಖ್​ ನಾಯಕ ಆಗಿದ್ದರು.

ವಿಭಜನೆ ನಂತರ ‘ಕೈ’ ಹಿಡಿದ ಬೂಟಾ ಸಿಂಗ್​
ರಾಜೀವ್​ ಗಾಂಧಿ, ಇಂದಿರಾ ಗಾಂಧಿಯವರಿಗೆ ಅತ್ಯಾಪ್ತ ಎನಿಸಿಕೊಂಡಿದ್ದ ಬೂಟಾ ಸಿಂಗ್​, 1978ರಲ್ಲಿ ಕಾಂಗ್ರೆಸ್​ ವಿಭಜನೆಯಾದ ನಂತರ ‘ಕೈ’ ಚಿಹ್ನೆಯನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಗಾಂಧಿ ಕುಟುಂಬಕ್ಕೆ ಆಪ್ತರು ಎಂಬ ಕಾರಣವೇ ಸಿಂಗ್​ ಅವರಿಗೆ ಹಲವು ಬಾರಿ ಮುಳುವಾಯಿತು ಎಂಬುದು ಕಟು ಸತ್ಯವೂ ಹೌದು.

ಇತ್ತ ಆಪರೇಷನ್​ ಬ್ಲೂ ಸ್ಟಾರ್​ ಮತ್ತು ಸಿಖ್​ ವಿರೋಧಿ ಆಂದೋಲನಗಳಿಂದ ಸಿಟ್ಟಿಗೆದ್ದಿದ್ದ ಸಿಖ್​ ಸಮುದಾಯ ಕೂಡ ಬೂಟಾ ಸಿಂಗ್​ ಅವರನ್ನು ದೂರ ಮಾಡಿತ್ತು. ನಂತರ ಬೂಟಾ ಸಿಂಗ್ ಸಿಖ್​ ಸಮುದಾಯದ ಬಳಿ ಕ್ಷಮೆಯನ್ನೂ ಕೇಳಿದ್ದರು. ಆ ಸಂದರ್ಭದಲ್ಲಿ ಬೂಟಾ ಸಿಂಗ್ ಗೋಲ್ಡನ್​ ಟೆಂಪಲ್​ ನತ್ತು ಗುರುದ್ವಾರಗಳಲ್ಲಿ ಪ್ರಾಯಶ್ಚಿತ್ತಕ್ಕಾಗಿ ತಾನು ತಪ್ಪಿತಸ್ಥ ಎಂಬ ಪಟ್ಟಿ ಧರಿಸಿ ತಟ್ಟೆ ತೊಳೆದ, ನೆಲ ಒರೆಸಿದ, ಬೂಟ್​ಗಳ ದೂಳು ಹೊಡೆಯುತ್ತಿದ್ದ ಚಿತ್ರಗಳು ಭಾರೀ ಸದ್ದು ಮಾಡಿದ್ದವು.

ವಿವಾದಗಳ ಸುಳಿಯಲ್ಲಿ ಆಗಾಗ್ಗೆ ಸಿಲುಕುತ್ತಿದ್ದ ಬೂಟಾ ಸಿಂಗ್​, ಅಯೋಧ್ಯಾ ರಾಮ ಮಂದಿರದ ಇಟ್ಟಿಗೆಗಳಿಂದ ಹಿಡಿದು ಗೃಹ ಸಚಿವರಾಗಿದ್ದಾಗ ಹಲವು ರಾಜ್ಯ ಸರ್ಕಾರಗಳನ್ನು ಉರುಳಿಸುವ ತನಕ ಅನೇಕ ವಿಚಾರಗಳಲ್ಲಿ ಸುದ್ದಿಯಾಗಿದ್ದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ನಿಂದ ಗೋರಕ್ಷಣೆ ಮಂತ್ರ ಪಠಣ: ಪಕ್ಷ ಸಂಘಟನೆಗೆ ಹೊಸ ತಂತ್ರ?