ನವದೆಹಲಿ: ಕಳೆದ ವರ್ಷ ಜುಲೈನಲ್ಲಿ ಸಿಯಾಚಿನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು ತಮ್ಮ ಸೊಸೆಯ ಬಗ್ಗೆ ಆರೋಪ ಮಾಡಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ವಿಧವೆಯಾಗಿದ್ದ ಅಂಶುಮಾನ್ ಸಿಂಗ್ ಸ್ಮೃತಿ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಅನುಕಂಪ ವ್ಯಕ್ತವಾಗಿತ್ತು. ಆದರೆ, ಇದೀಗ ಅಂಶುಮಾನ್ ಸಿಂಗ್ ಪೋಷಕರೇ ಆಕೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮರಣೋತ್ತರವಾಗಿ ಕೀರ್ತಿ ಚಕ್ರ ಪಡೆದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು, ನಮ್ಮ ಸೊಸೆ ಸ್ಮೃತಿ ಈಗ ತವರುಮನೆಯಲ್ಲಿದ್ದಾಳೆ. ನಮ್ಮ ಮಗ ಸಾವನ್ನಪ್ಪಿದ ನಂತರ ಆಕೆ ತನ್ನ ಬಟ್ಟೆಯ ಜೊತೆಗೆ ನಮ್ಮ ಮಗನ ಬಟ್ಟೆ, ಆತನ ವಸ್ತುಗಳನ್ನೆಲ್ಲ ತೆಗೆದುಕೊಂಡು ತವರುಮನೆಯಲ್ಲಿ ವಾಸವಾಗಿದ್ದಾಳೆ. ಈಗ ಸರ್ಕಾರ ಕೊಟ್ಟಿರುವ ಕೀರ್ತಿ ಚಕ್ರ ಪ್ರಶಸ್ತಿಯನ್ನು ಕೂಡ ಆಕೆಯೇ ತೆಗೆದುಕೊಂಡು ಹೋಗಿದ್ದಾಳೆ. ನಾವು ಆ ಪ್ರಶಸ್ತಿಯನ್ನು ಮುಟ್ಟಿಯೂ ನೋಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಸಿಯಾಚಿನ್‌ನಲ್ಲಿ ಸಂಭವಿಸಿದ ದೊಡ್ಡ ಬೆಂಕಿಯಿಂದ ಜನರನ್ನು ರಕ್ಷಿಸುವ ವೇಳೆ ಸೇನಾ ವೈದ್ಯಕೀಯ ದಳದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಸಾವನ್ನಪ್ಪಿದ್ದರು. ಅವರ ಪತ್ನಿ ಸ್ಮೃತಿ ತಮ್ಮ ಅತ್ತೆ ಮಂಜು ಸಿಂಗ್ ಅವರೊಂದಿಗೆ ಜುಲೈ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಇದನ್ನೂ ಓದಿ: ಕೀರ್ತಿ ಚಕ್ರ ಸ್ವೀಕರಿಸಿದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪತ್ನಿಯನ್ನು ನೋಡಿ ಭಾವುಕರಾದ ರಾಷ್ಟ್ರಪತಿ
ಈ ಬಗ್ಗೆ ಮಾಹಿತಿ ನೀಡಿರುವ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಂದೆ ರವಿ ಪ್ರತಾಪ್ ಸಿಂಗ್, ನಮ್ಮ ಸೊಸೆಯು ನಮ್ಮ ಮಗನ ಅಧಿಕೃತ ದಾಖಲೆಗಳಲ್ಲಿ ಪಟ್ಟಿ ಮಾಡಲಾದ ಖಾಯಂ ವಿಳಾಸವನ್ನು ಲಕ್ನೋದಿಂದ ತಮ್ಮ ತವರುಮನೆಯಾದ ಗುರುದಾಸ್‌ಪುರಕ್ಕೆ ಬದಲಾಯಿಸಿದ್ದಾಳೆ ಎಂದು ಹೇಳಿದರು. ‘ನೆಕ್ಸ್ಟ್ ಆಫ್ ಕಿನ್’ ಕಾನೂನಿನಲ್ಲಿ ಬದಲಾವಣೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದು ಸ್ವತ್ತುಗಳನ್ನು ಯಾರು ಪಡೆಯುತ್ತಾರೆ ಮತ್ತು ಉಯಿಲು ಇಲ್ಲದೆ ಯಾರಾದರೂ ಸತ್ತರೆ ವೈದ್ಯಕೀಯ ಸೌಲಭ್ಯಗಳನ್ನು ಯಾರು ಸ್ವೀಕರಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ.
Captain #AnshumanSingh’s wife has left his parent’s house and even changed her address after his death.
She will receive all the ex gratia amount according to NOK(Next of kin) rule.
And the parents are left with just a picture hanging on the wall
Sad.pic.twitter.com/ZglJ4VBjU6
— Jitesh (@Chaotic_mind99) July 12, 2024
“ಹುತಾತ್ಮರ ಪತ್ನಿಯೊಂದಿಗೆ ಪೋಷಕರು ಕೂಡ ಈ ಸೌಲಭ್ಯಗಳಿಗೆ ಅರ್ಹರಾಗಲು ಸಹಾಯದ ಮೊತ್ತ ಮತ್ತು ಸರ್ಕಾರವು ಒದಗಿಸುವ ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ತಿದ್ದುಪಡಿ ಮಾಡಬೇಕು” ಎಂದು ಪ್ರತಾಪ್ ಸಿಂಗ್ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ತಮ್ಮ ಮಗನ ನೆನಪುಗಳನ್ನು ಮೆಲುಕು ಹಾಕಲು ಸರ್ಕಾರವು ಪತ್ನಿಯ ಜೊತೆಗೆ ಪೋಷಕರಿಗೆ ಕೀರ್ತಿ ಚಕ್ರದಂತಹ ಮಿಲಿಟರಿ ಗೌರವದ ಇನ್ನೊಂದು ಪ್ರತಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ನಾವು ಅಂಶುಮಾನ್ ಅವರನ್ನು ಸ್ಮೃತಿಯೊಂದಿಗೆ ಮದುವೆ ಮಾಡಿದೆವು. ಮದುವೆಯ ನಂತರ ಆಕೆ ನನ್ನ ಮಗಳೊಂದಿಗೆ ನೋಯ್ಡಾದಲ್ಲಿ ಇರಲು ಪ್ರಾರಂಭಿಸಿದಳು. ಜುಲೈ 19, 2023ರಂದು ಅಂಶುಮಾನ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂದಾಗ ನಾನು ಆಕೆಯನ್ನು ಲಕ್ನೋಗೆ ಕರೆದಿದ್ದೆ. ನಾವು ಆಕೆಗಾಗಿ ಗೋರಖ್‌ಪುರಕ್ಕೆ ಹೋಗಿದ್ದೆವು. ಆದರೆ ತೆಹ್ರಾವಿ (ಅಂತ್ಯಕ್ರಿಯೆಯ ಆಚರಣೆ) ನಂತರ ಸ್ಮೃತಿ ತನ್ನ ತವರುಮನೆಯಾದ ಗುರುದಾಸ್‌ಪುರಕ್ಕೆ ವಾಪಾಸ್ ಹೋದಳು ಎಂದಿದ್ದಾರೆ.
ಇದನ್ನೂ ಓದಿ: 8 ವರ್ಷ ಪ್ರೀತಿಸಿದರೂ ಜೊತೆಗಿದ್ದಿದ್ದು ಎರಡೇ ತಿಂಗಳು; ವೀರಮರಣವನ್ನಪ್ಪಿದ ಯೋಧ ಅಂಶುಮಾನ್ ಲವ್ ಸ್ಟೋರಿ
“ನಮ್ಮ ಮಗ ಅಂಶುಮಾನ್‌ಗೆ ಕೀರ್ತಿ ಚಕ್ರ ನೀಡಿದಾಗ ಸ್ಮೃತಿ ಜೊತೆಗೆ ನನ್ನ ಹೆಂಡತಿ ಕೂಡ ಗೌರವ ಸ್ವೀಕರಿಸಲು ತೆರಳಿದ್ದರು. ರಾಷ್ಟ್ರಪತಿಗಳು ನನ್ನ ಮಗನ ತ್ಯಾಗಕ್ಕೆ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿದರು. ಆದರೆ ನಾನು ಅದನ್ನು ಒಮ್ಮೆ ಕೂಡ ಆ ಪ್ರಶಸ್ತಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ” ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೆನಪಿಸಿಕೊಂಡ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಾಯಿ ಮಂಜು ಸಿಂಗ್, ಜುಲೈ 5ರಂದು ರಾಷ್ಟ್ರಪತಿ ಭವನದಲ್ಲಿ ಸ್ಮೃತಿ ಜೊತೆಗೆ ನಾನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದೆ. ನಾವು ಕಾರ್ಯಕ್ರಮದಿಂದ ಹೊರಡುವಾಗ ಸೇನಾಧಿಕಾರಿಗಳ ಒತ್ತಾಯದ ಮೇರೆಗೆ ನಾನು ಫೋಟೋಗಾಗಿ ನಾನು ಕೀರ್ತಿ ಚಕ್ರವನ್ನು ಹಿಡಿದಿದ್ದೆ. ಆದರೆ, ಅದರ ನಂತರ ಸ್ಮೃತಿ ನನ್ನ ಕೈಯಿಂದ ಕೀರ್ತಿ ಚಕ್ರವನ್ನು ತೆಗೆದುಕೊಂಡು ಹೋದಳು ಎಂದಿದ್ದಾರೆ.
ಕ್ಯಾಪ್ಟನ್ ಅಂಶುಮಾನ್ ಸಿಂಗ್ ಫೈಬರ್ಗ್ಲಾಸ್ ಗುಡಿಸಲಿನಲ್ಲಿ ಸಿಲುಕಿಕೊಂಡಿದ್ದ ತನ್ನೊಂದಿಗಿನ ಇತರೆ ಸೇನಾ ಅಧಿಕಾರಿಗಳನ್ನು ರಕ್ಷಿಸಿದ್ದರು. ಆದರೆ, ತಾವು ಬೆಂಕಿಯಿಂದ ಹೊರಬರಲಾರದೆ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ