ಕಾವೇರಿ ಪುನರುಜ್ಜೀವನಕ್ಕೆ ‘ಕಾವೇರಿ ಕೂಗು’ ಮಹಾ ಸಂಕಲ್ಪ: 1.2 ಕೋಟಿ ಹೊಸ ಸಸಿ ನೆಡಲು ಸಜ್ಜಾದ 2.6 ಲಕ್ಷ ರೈತರು

ಕಾವೇರಿ ಕೂಗು ಪರಿಸರ ಆಂದೋಲನವು ಕಾವೇರಿ ನದಿ ಪುನರುಜ್ಜೀವನಕ್ಕೆ ಮಹತ್ವದ ಹೆಜ್ಜೆಯಾಗಿದೆ. 2.6 ಲಕ್ಷ ರೈತರು 1.2 ಕೋಟಿ ಹೊಸ ಸಸಿಗಳನ್ನು ನೆಡಲು ಸಜ್ಜಾಗಿದ್ದಾರೆ. ಮರ ಆಧಾರಿತ ಕೃಷಿ ಪದ್ಧತಿಯಿಂದ ರೈತರ ಬದುಕಿಗೂ ನೆರವಾಗುತ್ತಿದೆ. ಈ ಬೃಹತ್ ಕಾರ್ಯದಿಂದ ಕಾವೇರಿ ನದಿಯ ಹಸಿರು ಹೊದಿಕೆಯನ್ನು ಮರಳಿ ತಂದು ಜಲಮಟ್ಟ ಹೆಚ್ಚಿಸುವುದು ಪ್ರಮುಖ ಗುರಿಯಾಗಿದೆ.

ಕಾವೇರಿ ಪುನರುಜ್ಜೀವನಕ್ಕೆ ‘ಕಾವೇರಿ ಕೂಗು’ ಮಹಾ ಸಂಕಲ್ಪ: 1.2 ಕೋಟಿ ಹೊಸ ಸಸಿ ನೆಡಲು ಸಜ್ಜಾದ 2.6 ಲಕ್ಷ ರೈತರು
ಮಹಿಳೆಯರು

Updated on: May 30, 2026 | 2:43 PM

ಚೆನ್ನೈ, ಮೇ 30: ಕಾವೇರಿ(Cauvery) ನದಿಯ ನೀರಿನ ಮಟ್ಟ ವೇಗವಾಗಿ ಕುಸಿಯುತ್ತಿರುವ ಆತಂಕದ ನಡುವೆ, ನದಿಗೆ ಮರುಜೀವ ನೀಡಲು ಮತ್ತು ಕೃಷಿ ಸಂಕಷ್ಟಕ್ಕೆ ಮುಕ್ತಿ ಹಾಡಲು ಸದ್ಗುರು ಕಲ್ಪಿಸಿದ “ ಸೇವ್ ಸಾಯಿಲ್- ಕಾವೇರಿ ಕಾಲಿಂಗ್’’ ಪರಿಸರ ಆಂದೋಲನವು ಹೊಸ ಮೈಲಿಗಲ್ಲನ್ನು ತಲುಪಿದೆ. ನದಿ ಜಲಾನಯನ ಪ್ರದೇಶದ ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸುವ ನಿರಂತರ ಪ್ರಯತ್ನದ ಭಾಗವಾಗಿ, ಮುಂಬರುವ 2026–27ರ ಸಾಲಿನಲ್ಲಿ ಬರೋಬ್ಬರಿ 1.2 ಕೋಟಿ ಹೊಸ ಸಸಿಗಳನ್ನು ನೆಡುವ ಬೃಹತ್ ಗುರಿಯನ್ನು ಈ ಆಂದೋಲನ ಹೊಂದಿದೆ.

ಕೋಟಿ ಕೋಟಿ ಮರಗಳ ಮಹಾ ಕ್ರಾಂತಿ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಯೋಜನಾ ನಿರ್ದೇಶಕ ಆನಂದ್ ಎಥಿರಾಜಲು, ಈ ಆಂದೋಲನದ ಮೂಲಕ ಇಲ್ಲಿಯವರೆಗೆ 13.4 ಕೋಟಿ ಮರಗಳನ್ನು ನೆಡಲಾಗಿದೆ. ಇದು ಕೇವಲ ಸಂಖ್ಯೆಯಲ್ಲ, ಇದು ತಮ್ಮ ಸಾಂಪ್ರದಾಯಿಕ ಬೇಸಾಯ ಪದ್ಧತಿಯನ್ನು ಬಿಟ್ಟು ಮರ ಆಧಾರಿತ ಕೃಷಿಗೆ ಬದಲಾದ 2.6 ಲಕ್ಷ ರೈತರ ಬದುಕಿನ ಚಿತ್ರಣ ಎಂದರು.

ಅರಣ್ಯ ಆಧಾರಿತ ನದಿಯಾದ ಕಾವೇರಿ, ಕಳೆದ 70 ವರ್ಷಗಳಲ್ಲಿ ತನ್ನ ಶೇ. 40 ಕ್ಕಿಂತ ಹೆಚ್ಚು ನೀರಿನ ಹರಿವನ್ನು ಮತ್ತು ಶೇ. 87 ರಷ್ಟು ಮೂಲ ಹಸಿರು ಹೊದಿಕೆಯನ್ನು ಕಳೆದುಕೊಂಡಿದೆ. ಇದನ್ನು ಪರಿಹರಿಸಲು, ಖಾಸಗಿ ಕೃಷಿ ಭೂಮಿಯಲ್ಲಿ ಒಟ್ಟು 242 ಕೋಟಿ ಮರಗಳನ್ನು ನೆಡಲು ಅನುವು ಮಾಡಿಕೊಡುವುದು ಈ ಆಂದೋಲನದ ಅಂತಿಮ ಗುರಿಯಾಗಿದೆ. ಇದರಿಂದ ನದಿಯನ್ನು ನಂಬಿರುವ 8.4 ಕೋಟಿ ಜನರಿಗೆ ವರ್ಷಪೂರ್ತಿ ನೀರು ಸಿಗಲಿದೆ.

ಕೇವಲ 5 ರೂ.ಗೆ ಸಸಿ: ಮಹಿಳೆಯರ ಸಾರಥ್ಯದ ಏಷ್ಯಾದ ಅತಿ ದೊಡ್ಡ ನರ್ಸರಿ
ಗುಣಮಟ್ಟದ ಸಸಿಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸಲು ಆಂದೋಲನವು ಬೃಹತ್ ಮೂಲಸೌಕರ್ಯವನ್ನು ಹೊಂದಿದೆ. ತಮಿಳುನಾಡಿನ ಕಡಲೂರಿನಲ್ಲಿರುವ ಏಷ್ಯಾದ ಅತಿ ದೊಡ್ಡ ‘ಸಿಂಗಲ್ ಸೈಟ್ ನರ್ಸರಿ’ಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸುತ್ತಿದ್ದು, ಇದು 85 ಲಕ್ಷ ಸಸಿಗಳ ಸಾಮರ್ಥ್ಯ ಹೊಂದಿದೆ. ತಿರುವಣ್ಣಾಮಲೈನ ಮತ್ತೊಂದು ನರ್ಸರಿ 15 ಲಕ್ಷ ಸಸಿಗಳನ್ನು ನೆಡುತ್ತಾರೆ.

ಮತ್ತಷ್ಟು ಓದಿ: ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿ: ಮೂರೇ ದಿನದಲ್ಲಿ 10 ಮಂದಿ ಕಾವೇರಿ ಪಾಲು!

ತೇಗ, ಕೆಂಪು ಶ್ರೀಗಂಧ, ಮಹೋಗಾನಿ ಸೇರಿದಂತೆ 54 ತಳಿಗಳ ಉನ್ನತ ಮೌಲ್ಯದ ಮರದ ಸಸಿಗಳನ್ನು ರೈತರಿಗೆ ಕೇವಲ 5 ರೂ. ಸಬ್ಸಿಡಿ ದರದಲ್ಲಿ ಹಾಗೂ ಹಣ್ಣು-ಹೂವಿನ ಸಸಿಗಳನ್ನು 10 ರೂ.ಗೆ ನೀಡಲಾಗುತ್ತಿದೆ. ಇದು ತಮಿಳುನಾಡು ಮತ್ತು ಕರ್ನಾಟಕದ 53 ವಿತರಣಾ ಕೇಂದ್ರಗಳ ಮೂಲಕ ರೈತರನ್ನು ತಲುಪುತ್ತಿದೆ.

ಡಿಜಿಟಲ್ ಕ್ರಾಂತಿ ಮತ್ತು ರೈತರಿಗೆ 24 ಗಂಟೆ ಬೆಂಬಲ
ಕ್ಷೇತ್ರ ಭೇಟಿ: ಆಂದೋಲನದ 200 ಕ್ಕೂ ಹೆಚ್ಚು ತಜ್ಞರು 2025 ರಲ್ಲೇ 26,500 ಕ್ಕೂ ಹೆಚ್ಚು ಜಮೀನುಗಳಿಗೆ ಭೇಟಿ ನೀಡಿ ಉಚಿತ ಮಣ್ಣು ಮತ್ತು ನೀರಿನ ತಪಾಸಣೆ ನಡೆಸಿದ್ದಾರೆ. ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸುವ ಮೀಸಲಾದ ಸಹಾಯವಾಣಿ ಮತ್ತು 225 ಸಕ್ರಿಯ ವಾಟ್ಸಾಪ್ ಗ್ರೂಪ್‌ಗಳ ಮೂಲಕ 60,000 ಕ್ಕೂ ಹೆಚ್ಚು ರೈತರಿಗೆ 24-48 ಗಂಟೆಗಳ ಒಳಗೆ ತಾಂತ್ರಿಕ ಸಲಹೆ ನೀಡಲಾಗುತ್ತಿದೆ. ಮಣ್ಣು, ಜಲ ಸಂಪನ್ಮೂಲ ಮತ್ತು ಗ್ರಾಮೀಣ ಜೀವನೋಪಾಯವನ್ನು ಒಟ್ಟಿಗೆ ಸುರಕ್ಷಿತಗೊಳಿಸುವ ಈ ರೈತ-ಚಾಲಿತ ಪರಿಸರ ಚಳವಳಿ ದೇಶಕ್ಕೇ ಮಾದರಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:28 pm, Sat, 30 May 26

Loading...
Unable to load recommendations.
Follow Us