ದೆಹಲಿ: ನ್ಯಾಯಾಧೀಶರು ಮತ್ತು ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಗೆ ಸಂಬಂಧಿಸಿ ಶನಿವಾರ (ಆಗಸ್ಟ್ 7) ಮತ್ತೆ ಇಬ್ಬರನ್ನು ಸಿಬಿಐ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಐವರನ್ನು ಈವರೆಗೆ ಬಂಧಿಸಲಾಗಿದೆ. ಬಂಧಿತರನ್ನು ಆಂಧ್ರಪ್ರದೇಶ ಗುಂಟೂರು ನ್ಯಾಯಾಲಯದ ಮುಂದೆ ಇಂದು (ಆಗಸ್ಟ್ 8) ಹಾಜರುಪಡಿಸುವ ಬಗ್ಗೆ ತಿಳಿಸಲಾಗಿದೆ.
ಇದಕ್ಕೂ ಮುನ್ನ ಸಿಬಿಐ ಜುಲೈ 28, 2021 ರಂದು ತನಿಖೆಯ ವೇಳೆ ಇಬ್ಬರನ್ನು ಬಂಧಿಸಿತ್ತು. ಬಳಿಕ, ಅವರಿಬ್ಬರನ್ನೂ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಹಸ್ತಾಂತರಿಸಿತ್ತು. ಅದರಲ್ಲಿ ಒಬ್ಬನನ್ನು ಆಗಸ್ಟ್ 10, 2021ರ ವರೆಗೆ ಪೊಲೀಸ್ ಕಸ್ಟೆಡಿಯಲ್ಲಿ ಇಡುವ ಬಗ್ಗೆ ಆದೇಶ ನೀಡಲಾಗಿದ್ದು, ಮತ್ತೊಬ್ಬನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಪ್ರಕರಣದ ಮೊದಲ ಬಂಧನ ಜುಲೈ 9, 2021ರಂದು ಆಗಿತ್ತು.
ಸಿಬಿಐ ನವೆಂಬರ್ 11, 2020 ರಂದು 16 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಹಾಗೂ 12 ಎಫ್ಐಆರ್ ಪ್ರಕರಣಗಳನ್ನು ಸಿಐಡಿ ಕೈಯಿಂದ ಪಡೆದುಕೊಂಡಿತ್ತು. ಮೂಲ ಎಫ್ಐಆರ್ಗಳನ್ನು ಆಂಧ್ರಪ್ರದೇಶ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರ ದೂರಿನ ಅನ್ವಯ ದಾಖಲಿಸಿಕೊಳ್ಳಲಾಗಿತ್ತು. ಐಪಿಸಿ ಸೆಕ್ಷನ್ 153(A), 504, 505 (2) ಮತ್ತು 506 ಮತ್ತು ಐಟಿ ಕಾಯ್ದೆ 2000 ದ ಸೆಕ್ಷನ್ 67 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳು ಬೇಕೆಂದೇ ನ್ಯಾಯಾಂಗವನ್ನು ಮತ್ತು ನ್ಯಾಯಾಧೀಶರನ್ನು ಗುರಿಯಾಗಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್ನ ಕೆಲವು ತೀರ್ಪುಗಳನ್ನು ಉದ್ದೇಶಿಸಿ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಆರೋಪದಲ್ಲಿ ಕೆಲವರನ್ನು ಬಂಧಿಸಲಾಗಿದೆ.
ಸಿಬಿಐ ನಡೆಸಿದ ತನಿಖೆಯಲ್ಲಿ ಆರೋಪಿಗಳ ಕೆಲವು ಇತರ ಅಕ್ರಮಗಳೂ ಬಯಲಾಗಿದೆ. ಅದರಲ್ಲಿ ಒಬ್ಬ ಆರೋಪಿಯು ಅಕ್ರಮವಾಗಿ ನಕಲಿ ಪಾಸ್ಪೋರ್ಟ್ ಬಳಸಿರುವುದು ಕೂಡ ಕಂಡುಬಂದಿದೆ. ಆತ ನಕಲಿ ಹೆಸರು ಮತ್ತು ದಾಖಲಿ ನೀಡಿ, ಅಕ್ರಮವಾಗಿ ಪಾಸ್ಪೋರ್ಟ್ ಹೊಂದಿದ್ದ ಎಂಬುದು ಬಯಲಾಗಿದೆ. ತನಿಖೆಯನ್ನು ದೊಡ್ಡಮಟ್ಟದಲ್ಲಿ ಕೈಗೊಳ್ಳುವ ಉದ್ದೇಶದಿಂದ ಸಿಬಿಐ, ಕೆಲವು ಸಂಸದರು, ಮಾಜಿ ಶಾಸಕರನ್ನು ಕೂಡ ವಿಚಾರಣೆ ನಡೆಸಿದೆ.
ಪ್ರಕರಣ ದಾಖಲಾದ ಬಳಿಕ, ಈ ಸಂಬಂಧ ಸಾಮಾಜಿಕ ಜಾಲತಾಣದ, ಸಾರ್ವಜನಿಕ ವೇದಿಕೆಯ ಹಲವು ಪೋಸ್ಟ್ಗಳು ಹಾಗೂ ಖಾತೆಗಳನ್ನು ಕೂಡ ತೆಗೆದುಹಾಕಲಾಗಿದೆ.
ಇದನ್ನೂ ಓದಿ: ತಾಯಿಯ ಮನೆ ಹೆಸರು ಬಳಸಲು ಮಗುವಿಗೆ ಹಕ್ಕಿದೆ, ತಂದೆ ಅದನ್ನು ಆಕ್ಷೇಪಿಸುವಂತಿಲ್ಲ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
(CBI Arrests two more people on derogatory posts on Social Media against Judges Judiciary)