ಹಿರಿಯ ಐಆರ್‌ಎಸ್ ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ; 1 ಕೋಟಿ ರೂ., 3.5 ಕೆಜಿ ಚಿನ್ನ ವಶ
ಪಿಜ್ಜಾ ಕಂಪನಿ ಮಾಲೀಕರಿಂದ ಲಂಚ ಪಡೆದಿದ್ದಕ್ಕಾಗಿ ಬಂಧಿಸಲ್ಪಟ್ಟ ಐಆರ್‌ಎಸ್ ಅಧಿಕಾರಿಯ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿದೆ. ಅವರ ಮನೆಯಿಂದ 1 ಕೋಟಿ ರೂ. ನಗದು, 3 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಮುಂಬೈನ ಕಸ್ಟಮ್ಸ್ ಇಲಾಖೆಯ ಜಂಟಿ ಆಯುಕ್ತರಾಗಿ ನೇಮಕಗೊಂಡಿದ್ದ ಸಿಂಘಾಲ್, ಕಪೂರ್ ಅವರನ್ನು ಸಂಪರ್ಕಿಸಿ ಲಾ ಪಿನೋಜ್ ಪಿಜ್ಜಾ ಜೊತೆ ಮಾಸ್ಟರ್ ಫ್ರಾಂಚೈಸ್ ಒಪ್ಪಂದ ಮಾಡಿಕೊಂಡರು. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಐಆರ್‌ಎಸ್ ಅಧಿಕಾರಿ ಅಮಿತ್ ಕುಮಾರ್ ಸಿಂಘಲ್ ಮತ್ತು ಅವರ ಸಹಚರರನ್ನು ತನಿಖೆ ಮಾಡಲಾಗುತ್ತಿದೆ.

ನವದೆಹಲಿ, ಜೂನ್ 2: ಹಿರಿಯ ಐಆರ್‌ಎಸ್ ಅಧಿಕಾರಿ ಅಮಿತ್ ಕುಮಾರ್ ಸಿಂಘಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಸಿಬಿಐ ಸುಮಾರು 1 ಕೋಟಿ ರೂ. ನಗದು ಮತ್ತು 3.5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. 25 ಲಕ್ಷ ರೂ. ಲಂಚ ಆರೋಪದಲ್ಲಿ ಆ ಅಧಿಕಾರಿಯನ್ನು ಬಂಧಿಸಲಾಗಿತ್ತು. ಐಆರ್‌ಎಸ್ ಅಧಿಕಾರಿ ಮತ್ತು ಅವರ ಸಹಚರ ಹರ್ಷ್ ಕೋಟಕ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ.
ಕೇಂದ್ರ ತನಿಖಾ ದಳ (ಸಿಬಿಐ) ಇಂದು ದೆಹಲಿಯಲ್ಲಿ ಬಂಧಿತ ಹಿರಿಯ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಮತ್ತು ಲಂಚ ಪ್ರಕರಣದ ಮತ್ತೊಬ್ಬ ಆರೋಪಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸುತ್ತಿರುವಾಗ ಸುಮಾರು 3.5 ಕಿಲೋಗ್ರಾಂಗಳಷ್ಟು ಚಿನ್ನ, 2 ಕಿಲೋಗ್ರಾಂಗಳಷ್ಟು ಬೆಳ್ಳಿ ಮತ್ತು ಸುಮಾರು 1 ಕೋಟಿ ರೂ. ನಗದು ವಶಪಡಿಸಿಕೊಂಡಿದೆ.
ಇದೀಗ ನಡೆಯುತ್ತಿರುವ ತನಿಖೆಯು 2007ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಅಮಿತ್ ಕುಮಾರ್ ಸಿಂಘಾಲ್ ಸೇರಿದಂತೆ ಇಬ್ಬರು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದೆ. ಪ್ರಸ್ತುತ ತೆರಿಗೆ ಪಾವತಿದಾರರ ಸೇವೆಗಳ ನಿರ್ದೇಶನಾಲಯದಲ್ಲಿ ಅವರು ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಹಚರ ಹರ್ಷ್ ಕೋಟಕ್ ಅವರನ್ನು ಸಹ ಟ್ರ್ಯಾಪ್ ಕಾರ್ಯಾಚರಣೆಯ ನಂತರ ಬಂಧಿಸಲಾಗಿದೆ. 25 ಲಕ್ಷ ರೂ. ಮೊತ್ತದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Digital Arrest: ಭಾರತದ 12 ಕಡೆಗಳಲ್ಲಿ ಸಿಬಿಐ ದಾಳಿ, ನಾಲ್ವರು ಸೈಬರ್ ಅಪರಾಧಿಗಳ ಬಂಧನ
ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ, ಲಾ ಪಿನೋಜ್ ಪಿಜ್ಜಾ ಮಾಲೀಕರಾದ ಸನಮ್ ಕಪೂರ್ ಅವರಿಗೆ ನೀಡಲಾದ ಆದಾಯ ತೆರಿಗೆ ನೋಟಿಸ್ ಅನ್ನು ಇತ್ಯರ್ಥಪಡಿಸಲು ಅಮಿತ್ ಕುಮಾರ್ ಸಿಂಗಲ್ ಒಟ್ಟು 45 ಲಕ್ಷ ರೂ. ಲಂಚವನ್ನು ಕೇಳಿದ್ದಾರೆ. ಅದರಲ್ಲಿ ಮೊದಲ ಕಂತಾಗಿ 25 ಲಕ್ಷ ರೂ. ಹಣವನ್ನು ಶನಿವಾರ ಪಂಜಾಬ್‌ನ ಮೊಹಾಲಿಯಲ್ಲಿರುವ ಅವರ ನಿವಾಸಕ್ಕೆ ತಲುಪಿಸಲಾಯಿತು, ಅಲ್ಲಿ ಅಧಿಕಾರಿಯ ಪರವಾಗಿ ಕೋಟಕ್ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿರುವ ಸಿಂಘಾಲ್‌ನ ಮನೆಯ ಆವರಣದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಸಿಬಿಐ 1 ಕೋಟಿ ರೂಪಾಯಿ ನಗದು, 3.5 ಕೆಜಿ ಚಿನ್ನ ಮತ್ತು 2 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ: Operation Chakra V: ಸೈಬರ್ ಅಪರಾಧಿಗಳ ವಿರುದ್ಧ 19 ಕಡೆ ಸಿಬಿಐ ಕಾರ್ಯಾಚರಣೆ, 6 ಮಂದಿ ಬಂಧನ
ಅಮಿತ್ ಕುಮಾರ್ ಸಿಂಘಾಲ್ 2007ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯಾಗಿದ್ದು, ದೆಹಲಿಯ ತೆರಿಗೆ ಪಾವತಿದಾರರ ಸೇವೆಗಳ ನಿರ್ದೇಶನಾಲಯದಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದರು. ಸಿಂಘಾಲ್ ಅವರನ್ನು ಪಿಜ್ಜಾ-ಚೈನ್ ಮಾಲೀಕರಿಂದ 25 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಬಂಧಿಸಲಾಗಿದೆ. ಸನಮ್ ಕಪೂರ್ ನೀಡಿದ ದೂರಿನ ನಂತರ ಅದೇ ದಿನ ಸಿಬಿಐ ಸಿಂಘಾಲ್ ಅವರನ್ನು ಬಂಧಿಸಿತು. ಸಿಂಘಾಲ್ ಮತ್ತು ಕೊಟಕ್ ಇಬ್ಬರನ್ನೂ ಚಂಡೀಗಢದ ವಿಶೇಷ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಜೂನ್ 13ರವರೆಗೆ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




